ಜಲಾಶಯದಿಂದ ನದಿಗೆ ನೀರು: ಎಚ್ಚರ

ದಾವಣಗೆರೆ, ಜು. 26- ಭದ್ರಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಒಳಹರಿವು ಹೆಚ್ಚಿರುವ ಕಾರಣ ಯಾವುದೇ ಸಮಯದಲ್ಲಿ ಜಲಾಶಯದಿಂದ ನದಿಗೆ ನೀರು ಬಿಡುವ ಸಾಧ್ಯತೆಗಳಿದ್ದು, ನದಿ ಪಾತ್ರದ ಜನರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಭದ್ರಾ ಜಲಾನಯ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿದ್ದು, ಜಲಾಶಯಕ್ಕೆ ಬರುತ್ತಿರುವ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿದೆ.  ಭದ್ರಾ ಜಲಾಶಯದ ನೀರಿನ ಗರಿಷ್ಠ ಮಟ್ಟಕ್ಕೆ ಶೀಘ್ರ ಭರ್ತಿಯಾಗುವ ಸಂಭವವಿದ್ದು, ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಯಾವುದೇ ಸಮಯದಲ್ಲಾದರೂ, ಒಳಹರಿವಿನ ಪ್ರಮಾಣಕ್ಕೆ ಅನುಗುಣವಾಗಿ ಸ್ಪಿಲ್ ವೇ ಗೇಟ್ ಮೂಲಕ ನದಿಗೆ, ಭದ್ರಾ ಬಲದಂಡೆ, ಎಡದಂಡೆ ನಾಲೆಗಳಲ್ಲಿ ಹೆಚ್ಚುವರಿ ನೀರನ್ನು ಹರಿಯಬಿಡಲಾಗುವುದು.  ನದಿ ಪಾತ್ರಗಳಲ್ಲಿ ಸಾರ್ವಜನಿಕರು ಮತ್ತು ರೈತರು ತಿರುಗಾಡುವುದು, ದನಕರುಗಳನ್ನು ತೊಳೆಯುವುದು ಮತ್ತು ದೈನಂದಿನ ಚಟುವಟಿಕೆಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಕರ್ನಾಟಕ ನೀರಾವರಿ ನಿಗಮ, ಬಿ.ಆರ್.ಪ್ರಾಜೆಕ್ಟ್‍ನ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!