ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್ ಒಂದೇ ಪರಿಹಾರವಲ್ಲ

ದಾವಣಗೆರೆ, ಮೇ 3- ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್ ಒಂದೇ ಪರಿಹಾರವಲ್ಲ. ಬದಲಾಗಿ ಎಲ್ಲರಿಗೂ ಲಸಿಕೆ ಕೊಡಿಸುವುದು ಶಾಶ್ವತ ಪರಿಹಾರವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನರಿಗೆ ಲಸಿಕೆ ಕೊಡಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಸಂಸದ ಜಿ.ಎಂ.ಸಿದ್ದೇಶ್ವರ ಅವರ ನಿರ್ಲಕ್ಷ್ಯತನ ಕೂಡ ಕಾರಣವಾಗಿದೆ ಎಂದು ದೂರಿದರು.

ಆರೋಗ್ಯ ಕೇಂದ್ರಗಳ ಮುಂದೆ ವಯೋವೃದ್ದರು, ಹಿರಿಯ ನಾಗರಿಕರು ಲಸಿಕೆಗಾಗಿ ಸರದಿ ಸಾಲಿನಲ್ಲಿ ಬೆಳಿಗ್ಗೆಯಿಂದಲೇ ನಿಲ್ಲುತ್ತಾರೆ. 1ರ ನಂತರ ಲಸಿಕೆ ಖಾಲಿಯಾಗಿದೆ ಎಂದು ವೈದ್ಯರು ಹೇಳುತ್ತಾರೆ. ಇದರಿಂದ ನೂರಾರು ಜನ ವಾಪಾಸ್ ಹೋಗುವ ಸನ್ನಿವೇಶವನ್ನು ಪ್ರತಿದಿನ ನೋಡುತ್ತಿದ್ದೇವೆ ಎಂದರು.

ಸರ್ಕಾರದ ಮಾರ್ಗ ಸೂಚಿಯಂತೆ ಯಾರಿಗೆ ಲಸಿಕೆ ನೀಡಬೇಕೆಂಬುದನ್ನು ಸ್ಪಷ್ಟಪಡಿಸಿದ್ದು, ಅದರಂತೆ ಅಂಥವರನ್ನೇ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೇರೇಪಿಸಲಾಗಿದೆ. ಅದರಂತೆ ನಮ್ಮ ಮೇಲೆ ವಿಶ್ವಾಸವಿಟ್ಟು ಲಸಿಕೆ ಹಾಕಿಸಿಕೊಳ್ಳಲು ಮುಂದಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಲಸಿಕೆ ಇಲ್ಲ ಎಂದು ಹೇಳುವುದು  ಎಷ್ಟು ಸಮಂಜಸ? ಎಂದು ನಾಗರಾಜ್ ಪ್ರಶ್ನಿಸಿದ್ದಾರೆ.

ಮೇ 1 ರಿಂದ 18 ರಿಂದ 44ರ ವಯೋಮಾನದವರಿಗೆ ಲಸಿಕೆ ಪಡೆಯಲು ಆನ್‌ಲೈನ್ ನೋಂದಣಿಗೆ ಸರ್ಕಾರ ಕರೆ ಕೊಟ್ಟಿದೆ. ಈಗಾಗಲೇ ದೇಶದಲ್ಲಿ ಒಂದು ಕೋಟಿಗೂ ಅಧಿಕ ನೋಂದಣಿ ಆಗಿದೆ. ನಗರದಲ್ಲೂ ಕೂಡ ನೋಂದಣಿ ಪ್ರಕ್ರಿಯೆ ನಡೆದಿದೆ. ಅವರಿಗೂ ಲಸಿಕಾ ಕೇಂದ್ರಗಳನ್ನು ತೆರೆಯಬೇಕಾಗಿದೆ. ಅವಶ್ಯ ಮಾಹಿತಿ ನೀಡಿ, ಅಲೆದಾಟ ತಪ್ಪಿಸಿ ಎಂದು ಮನವಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ಚಮನ್‌ ಸಾಬ್, ಗಡಿಗುಡಾಳ್ ಮಂಜುನಾಥ್, ಅಬ್ದುಲ್ ಲತೀಫ್, ಗಣೇಶ್ ಹುಲ್ಮನಿ, ಇಟ್ಟಿಗುಡಿ ಮಂಜುನಾಥ್ ಇದ್ದರು.

error: Content is protected !!