ಅಧಿಕಾರಿಗಳು, ನೌಕರರು, ಜನಪ್ರತಿನಿಧಿಗಳು ಒಗ್ಗೂಡಿದರೆ ನಗರದ ಪ್ರಗತಿ ಸಾಧ್ಯ

ಅಭಿನಂದನೆ, ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಸದಾಶಯ

ದಾವಣಗೆರೆ, ಮಾ.2 ಯಾವುದೇ ಅಭಿವೃದ್ಧಿ ಕಾರ್ಯಗಳಾಗಲು ಅಧಿಕಾರಿಗಳು ಮತ್ತು ನೌಕರರ ಪಾತ್ರವು ಎಷ್ಟು ಮುಖ್ಯವೋ ಜನಪ್ರತಿನಿಧಿಗಳ ಪಾತ್ರವೂ ಕೂಡ ಬಹಳ ಮುಖ್ಯ. ನಾವೆಲ್ಲರೂ ಒಗ್ಗೂಡಿ ನಮ್ಮ ಕರ್ತವ್ಯಗಳ ನಿಭಾಯಿಸಿದರೆ ನಗ ರವು ಪ್ರಗತಿ ಕಾಣಲು ಸಾಧ್ಯವಿದೆ ಎಂದು ಆಯುಕ್ತ ವಿಶ್ವನಾಥ್ ಪಿ. ಮುದಜ್ಜಿ ತಿಳಿಸಿದರು.

ಅವರು, ಪಾಲಿಕೆ ಸಭಾಂಗಣದಲ್ಲಿ ಪಾಲಿಕೆ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ನೂತನ ಮೇಯರ್ ಮತ್ತು ಉಪಮೇಯರ್ ಗೆ ಅಭಿನಂದನೆ ಹಾಗೂ ಪಾಲಿಕೆ ನಿವೃತ್ತ ನೌಕರರಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಅಧಿಕಾರಿಗಳು, ನೌಕರರು, ಜನಪ್ರತಿನಿಧಿಗಳು ಒಗ್ಗಟ್ಟಾಗಿ ಕರ್ತವ್ಯ ನಿರ್ವಹಿಸಿದರೆ ಹೆಚ್ಚು ಪರಿಣಾಮಕಾರಿಯಾಗಿ ಅಭಿವೃದ್ಧಿ ಸಾಧಿಸಬಹುದು. ಮೇಯರ್, ಉಪಮೇಯರ್, ಸದಸ್ಯರ ಮುಂದಾಳತ್ವದಲ್ಲಿ ಜನಪ್ರತಿನಿಧಿಗಳ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದರೆ ಒಳ್ಳೆಯ ಅಭಿವೃದ್ಧಿ ಕಾಣುವ ಜೊತೆಗೆ ಅವರಿಗೂ ಉತ್ತಮ ಹೆಸರು ತಂದುಕೊಡಬಹುದು. ಅಲ್ಲದೇ ಅಧಿಕಾರಿ, ನೌಕರರಿಗೂ ಉತ್ತಮ ಅಭಿವೃದ್ಧಿ ಕೆಲಸ ಮಾಡಿದ ತೃಪ್ತಿ ಸಿಗಲಿದೆ ಎಂದು ಆಶಿಸಿದರು.

ನಿವೃತ್ತಿ ಹೊಂದಿದ ಪಾಲಿಕೆ ನೌಕರರಿಗೆ ಪ್ರತಿ ತಿಂಗಳು ಸನ್ಮಾನಿಸಿ, ಗೌರವ ಸಮರ್ಪಿಸುವ ಮೂಲಕ ಬೀಳ್ಕೊಡುವ ಕೆಲಸವಾಗಬೇಕು. ಇದು ಅವರ ಸೇವೆಗೆ ನೀಡುವ ಮನ್ನಣೆಯಾಗಿದೆ. ಇದು ಕೇವಲ ಕಚೇರಿಗಳಲ್ಲಿ ಪ್ರತ್ಯೇಕವಾಗಿ ಸೀಮಿತವಾಗದೇ ಅಧಿಕಾರಿಗಳು, ಜನಪ್ರತಿನಿಧಿಗಳು ಎಲ್ಲರೂ ಸೇರಿ ಬೀಳ್ಕೊಟ್ಟರೆ ಸಾರ್ಥಕವಾಗಲಿದೆ ಎಂದು ಹೇಳಿದರು.

ಪಾಲಿಕೆಯ ಪ್ರಥಮ ದರ್ಜೆ ಸಹಾಯಕರಾಗಿ ವಯೋನಿವೃತ್ತರಾದ ಮಂಜುಳಮ್ಮ ಮಾತನಾಡಿ ಕಷ್ಟ, ಸುಖ, ಸಂತೋಷದೊಂದಿಗೆ ಸೇವೆ ಸಲ್ಲಿಸಿದ್ದೇನೆ. ವೃತ್ತಿ ಜೀವನ ಸಂತೃಪ್ತಿ ತಂದಿದೆ ಎಂದು ಭಾವುಕರಾದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೆ.ಎಸ್. ಗೋವಿಂದರಾಜು ಮಾತನಾಡಿ, ವೃತ್ತಿ ಮತ್ತು ನಿವೃತ್ತಿ ನಡುವಿನ ನಮ್ಮ ಕರ್ತವ್ಯ ಅತ್ಯಂತ ಶ್ರೇಷ್ಠ. ನೀವೇನು ಕೆಲಸ ಮಾಡಿದ್ದೀರೆಂದು ಕೆಲ ರಾಜಕೀಯ ನಾಯಕರು ನಮ್ಮ ನೌಕರರ ಬಗ್ಗೆ ತುಚ್ಛವಾಗಿ ಮಾತನಾಡುತ್ತಾರೆ. ಕೋವಿಡ್ ನಂತಹ ಕಷ್ಟದ ಸಂದರ್ಭದಲ್ಲೂ ವೀರ ಸೇನಾನಿಗಳಾಗಿ ಪೌರ ಕಾರ್ಮಿಕರು ತಮ್ಮ ಜೀವ ಮುಡಿಪಾಗಿಟ್ಟು ಇಡೀ ನಗರವನ್ನೇ ಸ್ವಚ್ಚಗೊಳಿಸುವ ಕೆಲಸ ಮಾಡಿದ್ದಾರೆ. ಜೀವದ ಹಂಗು ತೊರೆದು ಪಾಲಿಕೆ ಆರೋಗ್ಯ ಶಾಖೆಯವರು ಕೋವಿಡ್‌ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನೂ ಮಾಡಿದ್ದಾರೆ. ಹೀಗೆ ವ್ಯವಸ್ಥಿತ ವಾಗಿ ಸೇವೆ ಮಾಡಿದ ನೌಕರರನ್ನು ಗುರುತಿಸಲಿಲ್ಲ. ಈ ತಾರತಮ್ಮ ತೊಲಗಬೇಕು ಎಂದರು.

ನಗರ ಸ್ವಚ್ಚಗೊಳಿಸುವ ಮಹಿಳಾ ಹಿರಿಯ ಪೌರ ನೌಕರರೋರ್ವರು ಹರಿದ ಸೀರೆಯನ್ನುಟ್ಟು ಕೆಲಸ ಮಾಡುವುದು ನೋವು ತಂದಿತು. ಕಾರಣ ಮಹಿಳಾ ನೌಕರರಿಗೆ ಹೊಸ ಸೀರೆಯನ್ನು ಕಿರುಕಾಣಿ ಕೆಯಾಗಿ ನೀಡಬೇಕೆಂಬ ನನ್ನ ಕನಸು ಸಾಕಾರ ಗೊಂಡಿದೆ. ನಿವೃತ್ತಿ ನೌಕರರು ಸೌಲಭ್ಯಕ್ಕಾಗಿ ಅಲೆ ದಾಡುತ್ತಿದ್ದರು. ಬೆದರಿಕೆಗಳ ಮಧ್ಯೆಯೂ ಸೌಲಭ್ಯ ಗಳನ್ನು ಉಪ ಆಯುಕ್ತ ಪ್ರಭುಸ್ವಾಮಿ ಕಲ್ಪಿಸುವ ಕೆಲಸ ಮಾಡಿದ್ದಾರೆ. ಡಿ ಗ್ರೂಪ್ ನೌಕರರಿಗೆ ಹಾಗೂ ನಿವೃತ್ತ ನೌಕರರಿಗೆ ಸಿಗುವ ಸರ್ಕಾರಿ ಸೌಲಭ್ಯಗಳನ್ನು ಒದಗಿಸಿ, ಅವರ ಧ್ವನಿಯಾಗುವಂತೆ ಮೇಯರ್, ಉಪಮೇಯರ್ ಗೆ ಮನವಿ ಮಾಡಿದರು.

ಇದೇ ವೇಳೆ ನೂತನ ಉಪಮೇಯರ್ ಶಿಲ್ಪಾ ಜಯಪ್ರಕಾಶ್ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು. ವಯೋನಿವೃತ್ತರಾದ ಮಂಜುಳಮ್ಮ ಹಾಗೂ ಯರವಾಳು ಮೈಲಮ್ಮ ಇವರುಗಳನ್ನು ಗೌರವಿಸಿ ಬೀಳ್ಕೊಡಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷೆ ನಾಗರತ್ನಮ್ಮ, ಪ್ರಧಾನ ಕಾರ್ಯದರ್ಶಿ ಪಿ. ವೆಂಕಟೇಶ್, ಪಾಲಿಕೆ ಕಂದಾಯ ವಿಭಾಗದ ಉಪ ಆಯುಕ್ತ ಚಂದ್ರಪ್ಪ, ಸುರೇಶ್ ಪಾಟೀಲ್ ಸೇರಿದಂತೆ, ಇತರರು ಇದ್ದರು.

error: Content is protected !!