ಕನ್ನಡ ಭಾಷೆ ಶಿಕ್ಷಣದಲ್ಲಿ ಉಳಿಯದಿದ್ದರೆ ಬೇರೆಲ್ಲೂ ಉಳಿಯುವುದಿಲ್ಲ

ದಾವಣಗೆರೆ, ಮಾ.2- ಕನ್ನಡ ಭಾಷೆ ಓದಿನಿಂದ ಮಾತ್ರ ಸೃಜನ ಶೀಲ ಮನಸ್ಸುಗಳ ಸೃಷ್ಟಿ ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಡಾ.ಪದ್ಮರಾಜ ದಂಡಾವತಿ ಅಭಿಪ್ರಾಯ ಪಟ್ಟರು.

ನಗರದ ಕುವೆಂಪು ಕನ್ನಡ ಭವನದಲ್ಲಿ ನಡೆಯುತ್ತಿರುವ ಹತ್ತನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಏರ್ಪಡಿಸಿದ್ದ ಎರಡನೇ ದಿನದ ಗೋಷ್ಠಿಯಲ್ಲಿ  `ದೇಶೀ ಭಾಷೆಯ ಮುಂದಿರುವ ಸವಾಲುಗಳು’ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

ಕನ್ನಡ ಭಾಷೆ ಶಿಕ್ಷಣದಲ್ಲಿ ಉಳಿಯದಿದ್ದರೆ ಬೇರೆಲ್ಲೂ ಉಳಿಯಲು ಸಾಧ್ಯವಿಲ್ಲ. ತಾಯಿ ಮೊಲೆ ಹಾಲಿನ ಜೊತೆ ಬಂದ ಕನ್ನಡ ಭಾಷೆ ಬದುಕಿನ ಭಾಷೆಯಾಗಿದೆ. ಅದನ್ನು ಉಳಿಸಿಕೊಳ್ಳದೇ ಇದ್ದರೆ ಬದುಕು ಬರಡಾಗುವುದು ನಿಶ್ಚಿತ ಎಂದು ಎಚ್ಚರಿಸಿದರು.

ಹೆಚ್ಚಾಗುತ್ತಿರುವ ಇಂಗ್ಲೀಷ್ ಮೇಲಿನ ವ್ಯಾಮೋಹ, ಹಿಂದಿ ಭಾಷೆ ಹೇರಿಕೆಯ ಪರಿಣಾಮ ಕೇವಲ ಕನ್ನಡವಷ್ಟೇ ಅಲ್ಲ, ದೇಶದ ಇತರೆ  ಭಾಷೆಗಳಿಗೂ ಕಂಠಕ ಎದುರಾಗಿದೆ. ಎಲ್ಲಾ ರಾಜ್ಯಗಳೂ ಈ ಸಮಸ್ಸೆಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದರು.

ಸಾಕಷ್ಟು ವಿರೋಧದ ನಡುವೆಯೂ, ಬಹುಸಂಖ್ಯಾತರಿಗೆ ಇಂಗ್ಲಿಷ್ ಬೇಕು ಎನ್ನುವ ಉದ್ದೇಶ ಅರಿತ ಸರ್ಕಾರ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹಾಗೂ ಇಂಗ್ಲಿಷ್ ಶಾಲೆಗಳನ್ನಾಗಿ ಪರಿವರ್ತಿಸುವ ಕೆಲಸಕ್ಕೆ ಮುಂದಾಗಿದೆ ಎಂದ ಅವರು, ಸರ್ಕಾರಿ ಶಾಲೆಗಳನ್ನು ಮುಚ್ಚುವಂತಹ ಪರಿಸ್ಥಿತಿಗೆ ಬರದಿರುವುದರಲ್ಲಿ ಸರ್ಕಾರ,  ಪಾಲಕರು ಹಾಗೂ ಸಾಹಿತಿಗಳ ಪಾತ್ರವೂ ಇದೆ ಎಂದರು.

ಸರ್ಕಾರ ಖಾಸಗಿ ಶಾಲೆಗಳನ್ನು ತೆರೆಯಲು ಅವಕಾಶ ನೀಡುತ್ತಿರುವುದು ಮೊದಲ ತಪ್ಪು. ನಂತರ ಆರ್‌ಟಿಐ ಮೂಲಕ ಖಾಸಗಿ ಶಾಲೆಗಳಿಗೆ ಶುಲ್ಕ ಕಟ್ಟಿ ಬೆಂಬಲಿಸುತ್ತಿದೆ ಎಂದರು.

2019ರಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ  ಶೇ.70.19ರಷ್ಟು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ಶೇ.80.88ರಷ್ಟು ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿ ಯೇ ಮೇಲು, ಆತನಿಗೆ ಹೆಚ್ಚು ಅಂಕ ನೀಡಬೇಕೆಂದು ಮೌಲ್ಯಮಾಪನ ಮಾಡುವವರು ಪೂರ್ವಾಗ್ರಹ ಪೀಡಿತರಾಗಿರುವುದೂ ಇದಕ್ಕೆ ಕಾರಣವಿರಬಹುದು ಎಂದು ಅಭಿಪ್ರಾಯಿಸಿದರು.

ಕನ್ನಡ ಚಳವಳಿಗಳು ವಾಣಿಜ್ಯ ಉದ್ದೇಶಕ್ಕಾಗಿ ಬಳಕೆಯಾದವು. ಆರಂಭದಲ್ಲಿ ಅನ್ಯ ಭಾಷಾ ಚಿತ್ರಗಳಿಗೆ ವಿರೋಧಿಸಿ, ನಂತರ ಮೌನವಾಗುವುದರ ಹಿಂದೆ ಅನುಮಾನಗಳು ಹುಟ್ಟುತ್ತವೆ. ಚಳವಳಿಗಳು ಅನ್ಯ ಭಾಷೆಯ ಸಿನಿಮಾಗಳನ್ನು ಬಿಟ್ಟು ಕನ್ನಡ ಸಿನಿಮಾಗಳನ್ನೇ ಪ್ರದರ್ಶಿಸುವಂತೆ ಹೋರಾಟ ಮಾಡುವ ಬದಲು ಕನ್ನಡ ಶಾಲೆಗಳ ಅಭಿವೃದ್ಧಿಗಾಗಿ ಹೋರಾಟ ನಡೆಸಿದ್ದರೆ ಉತ್ತಮವಿತ್ತು ಎಂದು ದಂಡಾವತಿ ಹೇಳಿದರು.

ಬಿ.ಎಸ್. ಯಡಿಯೂರಪ್ಪ, ಸಿದ್ದರಾಮಯ್ಯ ನವರಿಗೆ ಹಿಂದಿ ಮಾತನಾಡಲು ಬರುವಂತಿದ್ದರೆ ದೆಹಲಿ  ನಾಯಕತ್ವದಲ್ಲಿ ಪ್ರಮುಖರಾಗುತ್ತಿದ್ದರು. ಅನಂತ ಕುಮಾರ್ ಹಾಗೂ ಪ್ರಹ್ಲಾದ್ ಜೋಷಿಗೆ ಹಿಂದಿ ತಿಳಿದಿದ್ದರಿಂದಲೇ ಅವರು ದೆಹಲಿ ರಾಜಕಾರಣದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎಂದರು.

ಸಾಹಿತಿ  ಬಾ.ಮ. ಬಸವರಾಜಯ್ಯ ಅಧ್ಯಕ್ಷೀಯ ನುಡಿಗಳನ್ನಾಡುತ್ತಾ, ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಅಂದಾಕ್ಷಣ, ಕೋರ್ಟ್ ನಲ್ಲಿ ಅನೇಕ ತಾಂತ್ರಿಕ ಸಮಸ್ಯೆ ಹುಟ್ಟಿಕೊಳ್ಳುತ್ತಿವೆ. ಭಾಷಾವಾರು ಪ್ರಾಂತೀಯ ರಾಜ್ಯಗಳು ಆದಂತೆ `ಆಯಾ ಪ್ರಾಂತೀಯ’ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ತರುವ ಮೂಲಕ ದೇಶೀಯ ಭಾಷೆಗಳನ್ನು ಉಳಿಸಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ಹಾವನ್ನು ಹುತ್ತದಲ್ಲಿಟ್ಟುಕೊಂಡು ಹುತ್ತವನ್ನು ಬಡಿದಂತಾಗುತ್ತದೆ ಎಂದರು.

ದೇಶೀಯ ಭಾಷೆ ಅಂದರೆ ಈ ನೆಲದ ಭಾಷೆ. ತನ್ನ ನೆಲದ ಭಾಷೆಯಲ್ಲಿ ಶಿಕ್ಷಣ ಕೊಡುವ ವಿಚಾರದಲ್ಲಿ ನಾವು ಸತತವಾಗಿ ಹಿಂದೆ ಬೀಳುತ್ತಿದ್ದೇವೆ. ಎಲ್ಲಿ ನೆಲದ ಭಾಷೆ ಅವಸಾನವಾಗತ್ತದೆಯೋ ಅಲ್ಲಿನ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಗಳೂ ಅವಸಾನಗೊಳ್ಳುತ್ತವೆ ಎಂದು ಎಚ್ಚರಿಸಿದರು.

ನಮ್ಮ ಮೇಲೆ ಹಿಂದಿ ಭಾಷೆ ಹೇರಲಾಗುತ್ತಿದೆ. ಆದರೆ ತ್ರಿಭಾಷಾ ಸೂತ್ರದ ಪ್ರಕಾರ ಉತ್ತರ ಭಾರತದ ರಾಜ್ಯಗಳು ದಕ್ಷಿಣ ಭಾರತದ ಯಾವುದಾದರೂ ಒಂದು ಭಾಷೆ ಕಲಿಯಬೇಕು. ಈ ಬಗ್ಗೆ ನಾವು ಪ್ರಶ್ನಿಸುತ್ತಿಲ್ಲ ಎಂದ ಅವರು,  ಕನ್ನಡದ ಬಳಕೆ, ಸರೋಜಿನಿ ಮಹಿಷಿ ವರದಿ ಜಾರಿ ವಿಚಾರದಲ್ಲಿ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರವನ್ನು ಕಾರ್ಮಿಕ ಇಲಾಖೆ ಬದಲಿಗೆ ಸ್ಥಳೀಯ ಸಂಸ್ಥೆಗಳಿಗೆ ನೀಡಬೇಕು. ಸಿನಿಮಾ ಹಾಗೂ ದೃಶ್ಯ ಮಾಧ್ಯಮಗಳು ಕನ್ನಡ ಪದಗಳನ್ನು ನುಂಗಿ ಹಾಕಿ ಅನ್ಯಭಾಷಾ ಪದಗಳನ್ನು ಬಳಸುವುದು ನಿಲ್ಲಬೇಕು ಎಂದು ಆಗ್ರಹಿಸಿದರು.

ಡಾ.ಹೆಚ್. ವಿಶ್ವನಾಥ್, ಡಾ.ಅನಿತಾ ದೊಡ್ಡಗೌಡರ್ ಮಾತನಾಡಿದರು. ಕೆ.ಸಿ. ಬಸವರಾಜ ಸ್ವಾಗತಿಸಿದರು. ಗಂಗಾಧರ ಬಿ.ಎಲ್. ನಿಟ್ಟೂರು ನಿರೂಪಿಸಿದರು. ಹೆಚ್.ದ್ಯಾಮನಗೌಡ ವಂದಿಸಿದರು.

error: Content is protected !!