ದಾವಣಗೆರೆ, ಅ.31- ಜಿಲ್ಲಾ ಕಾಂಗ್ರೆಸ್‍ನಿಂದ ಇಂದು ಸರ್ದಾರ್ ವಲ್ಲಭಬಾಯಿ ಪಟೇಲ್ ಜನ್ಮ ದಿನಾಚರಣೆ, ಇಂದಿರಾ ಗಾಂಧಿ ಪುಣ್ಯತಿಥಿಯನ್ನು ನಗರದ ವನಿತಾ ಸಮಾಜದ ಹಿರಿಯ ವನಿತೆಯರ ಆನಂದಧಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.
ನಂತರ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಅವರು ಪಾಕಿಸ್ತಾನ, ಚೀನಾ, ಬಾಂಗ್ಲಾದೇಶಗಳ ವಿರುದ್ಧ ಯುದ್ಧ ಮಾಡಲು ಕಾಂಗ್ರೆಸ್ ಪಕ್ಷದ ಸರ್ಕಾರದಿಂದ ಮಾತ್ರ ಸಾಧ್ಯ ಎಂಬುದನ್ನು ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ತೋರಿಸಿಕೊಟ್ಟಿದ್ದಾರೆ ಎಂದರು.
ಈ ಹಿಂದೆ ನಮ್ಮ ಮಿತ್ರ ರಾಷ್ಟ್ರಗಳಂತೆ ನಟಿಸುತ್ತಿರುವ ಪಾಕಿಸ್ತಾನ, ಚೀನಾ ದೇಶಗಳು ಆಗಾಗ ದಾಳಿ ನಡೆಸುತ್ತಿದ್ದು, ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿದ್ದ ವೇಳೆ ತಕ್ಕ ಪ್ರತ್ಯುತ್ತರ ನೀಡಲಾಗುತ್ತಿತ್ತು. ಆದರೆ, ಇಂದು ರಾಜಕೀಯ ಲಾಭಕ್ಕೆ ದಾಳಿ ನಡೆಸಲಾಗುತ್ತಿದೆ ಎಂದು ದೂರಿದರು.
ಇಂದಿರಾ ಗಾಂಧಿಯವರು ಇಂದು ನಮ್ಮನ್ನು ಮರೆಯಾದ ದಿನ. ಆದರೆ, ಅವರು ಪಾಕಿಸ್ತಾನದ 7 ಸಾವಿರಕ್ಕೂ ಹೆಚ್ಚು ಸೈನಿಕ ಪ್ರಮುಖರನ್ನು ಬಂಧಿಸಿದ್ದನ್ನು ಈ ದೇಶದ ಜನ ಮರೆತಿಲ್ಲ. ಇಂದಿನ ಪ್ರಧಾನಿ ನಮ್ಮ ಸೈನಿಕರನ್ನು ಬಲಿಕೊಟ್ಟು ಅಧಿಕಾರದ ಚುಕ್ಕಾಣಿ ಹಿಡಿಯಲಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.
ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ್, ವಕ್ತಾರರಾದ ನಾಗರತ್ನಮ್ಮ, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಅನಿತಾಬಾಯಿ ಮಾಲತೇಶ್ ಮಾತನಾಡಿ, ಮಾಜಿ ಗೃಹಮಂತ್ರಿಗಳಾಗಿದ್ದ ದಿ|| ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ದೇಶವನ್ನು ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಲ್ಲದೇ ದೇಶ ವಿರೋಧಿ, ಒಂದು ಜಾತಿ – ಧರ್ಮದ ಸಂಘಟನೆಗಳನ್ನು ಬೆಂಬಲಿಸಲಿಲ್ಲ ಎಂದು ತಿಳಿಸಿದರು.
ಮಾಜಿ ಪ್ರಧಾನ ಮಂತ್ರಿಗಳಾದ ದಿ|| ಇಂದಿರಾ ಗಾಂಧಿಯವರು ದೇಶದ ಬಡತನ ನಿರ್ಮೂಲನೆಗಾಗಿ 20 ಅಂಶಗಳ ಕಾರ್ಯಕ್ರಮವನ್ನು ತರುವ ಮೂಲಕ ಈ ದೇಶದ ಎಲ್ಲಾ ವರ್ಗಗಳಿಗೆ ಅನುಕೂಲ ಮಾಡಿಕೊಟ್ಟು ಅವರ ಆಡಳಿತವನ್ನು ವಿಪಕ್ಷಗಳು ಹೊಗಳುವಂತೆ ಮಾಡಿದ್ದರು ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹೆಚ್.ಜಯಣ್ಣ, ಮಹಿಳಾ ಕಾಂಗ್ರೆಸ್‍ನ ಶುಭಮಂಗಳ, ರಾಜೇಶ್ವರಿ, ದ್ರಾಕ್ಷಾಯಣಮ್ಮ, ರುದ್ರಮ್ಮ, ಸುನಿತಾ ಭೀಮಣ್ಣ, ಜಯಮ್ಮ, ಹರೀಶ್ ಕೆ.ಎಲ್.ಬಸಾಪುರ, ಕೊಡಪಾನ ದಾದಾಪೀರ್, ಡಿ.ಶಿವಕುಮಾರ್, ಮಂಜುನಾಥ್, ಅಲೆಕ್ಸಾಂಡರ್ (ಜಾನ್) ಸೈಯದ್ ಬಾಷಾ, ಸಿದ್ದೇಶ್, ಮೊಟ್ಟೆ ದಾದಾಪೀರ್, ಯುವರಾಜ್ ಮತ್ತಿತರರಿದ್ದರು.