ಆಟಕ್ಕಾಗಿ ಅತಿಯಾಗಿ ದೇಹ ಬಳಲಿಸಬೇಡಿ

ವೇಟ್ ಲಿಫ್ಟಿಂಗ್ ಪಂದ್ಯಾವಳಿ ಉದ್ಘಾಟಿಸಿದ ಶಾಸಕ ಎಸ್.ಎ. ರವೀಂದ್ರನಾಥ್

ಮೊಟ್ಟೆ ಹಿಡಿಸದೇ ವೇಟ್ ಲಿಫ್ಟಿಂಗ್ ಬಿಟ್ಟೆ

ನಾನು ವಿದ್ಯಾರ್ಥಿ ದಿನಗಳಲ್ಲಿ ವೇಟ್ ಲಿಫ್ಟಿಂಗ್‌ ಕಲಿಯಲು ಮುಂದಾಗಿದ್ದೆ. ಆದರೆ, ನಿಶ್ಯಕ್ತಿ ಸಮಸ್ಯೆ ಕಾಣಿಸಿಕೊಂಡಿತು. ತರಬೇತುದಾರರು ಮೊಟ್ಟೆ – ಮಾಂಸ ತಿನ್ನುವಂತೆ ಸಲಹೆ ನೀಡಿದರು. ಸಸ್ಯಾಹಾರ ಬಿಟ್ಟು ಮಾಂಸಾಹಾರ ಸೇವಿಸುವುದು ಹಿಡಿಸದೇ ವೇಟ್ ಲಿಫ್ಟಿಂಗನ್ನೇ ಬಿಟ್ಟೆ ಎಂದು ಶಾಸಕ ಎಸ್.ಎ. ರವೀಂದ್ರನಾಥ್ ಹೇಳಿದರು. ದೇಹದಲ್ಲಿ ನಿಶ್ಯಕ್ತಿ ಕಾಣಿಸಿಕೊಂಡಾಗ ಹೆಚ್ಚು ಒತ್ತಡ ಹೇರಬಾರದು. ಹೆಣಗಾಡಿ ವೇಟ್‌ ಲಿಫ್ಟಿಂಗ್‌ನಲ್ಲಿ ತೊಡಗಬಾರದು ಎಂಬುದಕ್ಕೆ ಅವರು ತಮ್ಮ ಈ ಉದಾಹರಣೆ ನೀಡಿದರು.

ದಾವಣಗೆರೆ, ಅ. 31 – ದೇಹವನ್ನು ಅತಿಯಾಗಿ ಬಳಲಿಸದೇ ಆರೋಗ್ಯ ಕಾಯ್ದು ಕೊಳ್ಳಲು ಮುತುವರ್ಜಿ ವಹಿಸಿ ಕ್ರೀಡೆಗಳಲ್ಲಿ ತೊಡಗುವಂತೆ ಶಾಸಕ ಎಸ್.ಎ. ರವೀಂದ್ರನಾಥ್ ಕಿವಿಮಾತು ಹೇಳಿದ್ದಾರೆ.

ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ವೇಟ್ ಲಿಫ್ಟಿಂಗ್ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ರಾಜ್ಯ ವೇಟ್ ಲಿಫ್ಟರ್ಸ್ ಅಸೋಸಿಯೇಷನ್, ಜಿಲ್ಲಾ ವೇಟ್ ಲಿಫ್ಟಿಂಗ್ ಅಸೋಸಿಯೇಷನ್ ಹಾಗೂ ನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ರಾಜ್ಯ ಮಟ್ಟದ ಹಿರಿಯ ಮತ್ತು ಕಿರಿಯ ಮಹಿಳೆ – ಪುರುಷ, ಬಾಲಕ -ಬಾಲಕಿಯರ ವೇಟ್ ಲಿಫ್ಟಿಂಗ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ದೇಹದಲ್ಲಿ ನಿಶ್ಯಕ್ತಿ ಕಾಣಿಸಿಕೊಂಡ ನಂತರವೂ ಗೆಲ್ಲಬೇಕೆಂಬ ಹಠದಿಂದ ವೇಟ್ ಲಿಫ್ಟಿಂಗ್‌ನಲ್ಲಿ ತೊಡಗಬಾರದು. ಮೊನ್ನೆ ನಿಧನರಾದ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಆದ ಪರಿಸ್ಥಿತಿಯನ್ನು ಕ್ರೀಡಾಪಟುಗಳು ತಂದುಕೊಳ್ಳಬಾರದು ಎಂದವರು  ಹೇಳಿದರು.

ಶ್ರಮ ಹೆಚ್ಚು ಮಾಡದೇ ನಿಮ್ಮ ಕೈಲಾದಷ್ಟು ಪ್ರಯತ್ನ ಪಡಿ. ಕೌಶಲ್ಯ ಹಾಗೂ ಸೂಕ್ತ ಸಮಯದಲ್ಲಿ ಲಿಫ್ಟಿಂಗ್ ಮೂಲಕ ಹೆಚ್ಚು ಸಾಧನೆ ಮಾಡಲು ಸಾಧ್ಯ ಎಂದ ಅವರು, ರಕ್ತದೊತ್ತಡ, ಸಕ್ಕರೆ ಮಟ್ಟ ಹಾಗೂ ಹೃದಯದ ಆರೋಗ್ಯದ ನಿಯಮಿತ ತಪಾಸಣೆಗೆ ಒಳಗಾಗುವಂತೆ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೇಯರ್ ಎಸ್.ಟಿ. ವೀರೇಶ್, ಕೋವಿಡ್ ಎರಡನೇ ಅಲೆಯಲ್ಲಿ ಸ್ತಬ್ಧವಾಗಿದ್ದ ಕ್ರೀಡಾ ವಲ ಯ ಈಗ ಮತ್ತೆ ಚಟುವಟಿಕೆಯಿಂದ ಕೂಡಿದೆ. ವೇಟ್ ಲಿಫ್ಟಿಂಗ್‌ಗೆ ಪಾಲಿಕೆ ವತಿಯಿಂದ 2 ಲಕ್ಷ ರೂ. ನೀಡಲಾಗಿದೆ. ಶೀಘ್ರದಲ್ಲೇ ಮಹಿಳೆಯರಿಗಾಗಿ ಪಾಲಿಕೆಯಿಂದ ಪ್ರತ್ಯೇಕ ಜಿಮ್ ತೆರೆಯಲಾಗುವುದು ಎಂದು ಹೇಳಿದರು.

ಭಾರತೀಯ ವೇಟ್ ಲಿಫ್ಟಿಂಗ್ ಫೆಡರೇಷನ್ನಿನ ಪ್ರಧಾನ ಕಾರ್ಯದರ್ಶಿ ಎಸ್.ಹೆಚ್. ಆನಂದ ಗೌಡ ಮಾತನಾಡಿ, ಈ ಕ್ರೀಡಾಕೂಟದಲ್ಲಿ 260ಕ್ಕೂ ಹೆಚ್ಚು ಜನರು ಪಾಲ್ಗೊಂಡಿರುವುದು ಸಂತೋಷ ತಂದಿದೆ. ಪ್ರತಿಭೆಗಳನ್ನು ಆರಂಭದಲ್ಲೇ ಗುರುತಿಸಿ ಪ್ರೋತ್ಸಾಹ – ತರಬೇತಿ ನೀಡಲು ಇಂತಹ ಕ್ರೀಡಾಕೂಟಗಳು ನೆರವಾಗುತ್ತವೆ. ದಾವಣಗೆರೆ ಯಲ್ಲಿ ವೇಟ್ ಲಿಫ್ಟಿಂಗ್‌ಗೆ ನೆರವಾಗಲು ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಚಮನ್ ಸಾಬ್ ಹಾಗೂ ಬಿಜೆಪಿ ಮುಖಂಡ ಅನಿತ್ ಸಿದ್ದೇಶ್ವರ ಮಾತನಾಡಿದರು.

ಜಿಲ್ಲಾ ವೇಟ್ ಲಿಫ್ಟಿಂಗ್ ಅಸೋಸಿ ಯೇಷನ್ ಅಧ್ಯಕ್ಷ ಕೆ.ಎಂ. ಸುರೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಚಿತ್ರನಟ ಪುನೀತ್ ರಾಜ್‌ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ವೇದಿಕೆ ಮೇಲೆ ಪಾಲಿಕೆ ಸದಸ್ಯ ಕೆ.ಎಂ. ವೀರೇಶ್ ಪೈಲ್ವಾನ್, ಶಾಂತಕುಮಾರ ಸೋಗಿ, ಜಯಮ್ಮ, ಗೋಣೆಪ್ಪ, ವೀಣಾ ನಂಜಪ್ಪ, ಗೌರಮ್ಮ ಗಿರೀಶ್,  ಬಿಜೆಪಿ ಮುಖಂಡರಾದ ಎಂ. ಆನಂದ್, ಶ್ರೀನಿವಾಸ್, ಮುರುಗೇಶಪ್ಪ, ಆನಂದ್, ಶಿವಕುಮಾರ್ ದಾಸಕರಿಯಪ್ಪ, ಎಲ್.ಎಂ. ಕಲ್ಲೇಶ್, ಗಣೇಶ್ ರಾವ್, ಸುರೇಶ್ ಗಂಡಗಾಳೆ ಮತ್ತಿತರರು ಉಪಸ್ಥಿತರಿದ್ದರು. ಹೆಚ್. ಬಸವರಾಜ ಸ್ವಾಗತಿಸಿದರೆ, ಸಹನ ಮಂಜುನಾಥ್ ಪ್ರಾರ್ಥಿಸಿದರು.

error: Content is protected !!