ಕನ್ನಡ ಅನ್ನದ ಭಾಷೆಯಾಗಲಿ

ದಾವಣಗೆರೆ ಕುವೆಂಪು ಕನ್ನಡ ಭವನದಲ್ಲಿ ದಾವಣಗೆರೆ ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮನು ಬಳಿಗಾರ್  ಉದ್ಘಾಟಿಸಿದರು. 

ಬ್ಯಾಂಕ್ – ರೈಲ್ವೆ ಹುದ್ದೆಗಳಿಗೆ ಕನ್ನಡ ಕಡ್ಡಾಯವಾಗಲಿ : ಜಿಲ್ಲಾ ಕನ್ನಡ ಸಮ್ಮೇಳನಾಧ್ಯಕ್ಷ ಎನ್.ಟಿ. ಎರಿಸ್ವಾಮಿ

ದಾವಣಗೆರೆ, ಮಾ. 1- ಕನ್ನಡ ಅಮ್ಮನ ಭಾಷೆ ಮಾತ್ರವಲ್ಲದೆ, ಅನ್ನದ ಭಾಷೆಯೂ ಆಗಬೇಕಿದೆ. ಮೊಬೈಲ್ – ಲ್ಯಾಪ್‌ಟಾಪ್ ಇತ್ಯಾದಿ ಬಳಸುವ ಯುವ ಸಮೂಹ ಅಲ್ಲಿಯೂ §ಕನ್ನಡ ದರ್ಶನ¬ ಪಡೆಯುವಂತೆ ಮಾಡಬೇಕಿದೆ ಎಂದು ದಾವಣಗೆರೆ ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎನ್.ಟಿ. ಎರಿಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.

ನಗರದ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣ ಮಾಡುತ್ತಿದ್ದ ಅವರು, ಕನ್ನಡ ಅಮ್ಮನ ಭಾಷೆ ಮಾತ್ರವಲ್ಲದೆ ಅನ್ನದ ಭಾಷೆಯೂ ಆಗಬೇಕಿದೆ. ಶೇ.4ರಷ್ಟು ಜನರಿಗೆ ಮಾತ್ರ ಸರ್ಕಾರಿ ನೌಕರಿ ಸಿಗಲು ಸಾಧ್ಯ. ಉಳಿದವರು ತಮ್ಮ ಸ್ವಂತ ನೆಲೆಗಟ್ಟಿನ ಮೇಲೆ ಸ್ವಾಭಿಮಾನಿ ಬದುಕು ಬದುಕಬೇಕಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ §ರುಡ್‌ಸೆಟ್¬ ರೀತಿಯ ಉದ್ಯೋಗ ತರಬೇತಿ ಕೇಂದ್ರಗಳು ಪ್ರತಿ ತಾಲ್ಲೂಕಿನಲ್ಲೂ ಆರಂಭವಾಗಬೇಕು ಎಂದು ಹೇಳಿದರು.

ಇತ್ತೀಚೆಗೆ ಯುವಕರು ಅಂದರೆ ಇಂಗ್ಲಿಷ್ ಎಂಬಂತಾಗಿದೆ. ಅವರು ಮೊಬೈಲ್, ಲ್ಯಾಪ್‌ಟಾಪ್, ಟ್ಯಾಬ್, ಗ್ಯಾಜೆಟ್, ಕಂಪ್ಯೂಟರ್ ಮೂಲಕ ಬೆರಳ ತುದಿಯಲ್ಲೇ ಪ್ರಪಂಚ ದರ್ಶನ ಮಾಡುತ್ತಿದ್ದಾರೆ. ಯುವ ಸಮೂಹಕ್ಕೆ ಅಲ್ಲಿಯೂ ಕನ್ನಡ ದರ್ಶನ ಮಾಡುವಂತಹ ಕೆಲಸ ಆಗಬೇಕಿದೆ ಎಂದವರು ಹೇಳಿದರು‌.

ಮಗು ಇಂಗ್ಲಿಷ್‌ನಲ್ಲಿ ಟಸ್ಸು – ಪುಸ್ಸು ಎಂದರೆ ಹೆತ್ತವರಿಗೆ ಅದೇನೋ ಪರಮಾನಂದ. ಮಕ್ಕಳ ಮನಸ್ಸು ಬಾಡದ ಹಾಗೆ ಸುಮದ ಪರಿಮಳ ಎಲ್ಲೆಡೆ ಪಸರಿಸಲು §ಕನ್ನಡದ ನಂಟು ದಿವಿನಾದ ಔಷಧಿ¬ ಎಂಬುದನ್ನು ಮರೆಯಬಾರದು ಎಂದ ಅವರು, ಕನ್ನಡದ ಶಾಲೆಗಳಿಗೆ ಉತ್ತಮ ಸೌಲಭ್ಯ ಕಲ್ಪಿಸುವ ಮೂಲಕ ಮಕ್ಕಳನ್ನು ಅಲ್ಲಿಯೇ ಓದಿಸುವ ಹಠ ಮತ್ತು ಮನಸ್ಸು ಪೋಷಕರದ್ದಾಗಬೇಕಿದೆ ಎಂದರು.

ಕೇಂದ್ರ ಸರ್ಕಾರದ ಕಚೇರಿಗಳಾದ ಬ್ಯಾಂಕ್, ಅಂಚೆ ಕಚೇರಿ, ಜೀವ ವಿಮಾ ನಿಗಮ ಹಾಗೂ ರೈಲ್ವೆಗಳಲ್ಲಿ ಶೇ.80ರಷ್ಟು ಕನ್ನಡೇತರರೇ ತುಂಬಿದ್ದಾರೆ. ಇಲ್ಲಿ ಕನ್ನಡಗರಿಗೆ ಉದ್ಯೋಗ ಸಿಗುತ್ತಿಲ್ಲ. ಅಲ್ಲಿ ಉದ್ಯೋಗ ಮಾಡುವವರೂ ಸಹ ಕನ್ನಡ ಕಲಿಯದೇ, §ಕನ್ನಡ ಮಾಲೂಮ್ ನಹಿ, ಹಿಂದಿ ಮೆ ಬೋಲೋ¬ ಎಂಬ ಧಾಡಸೀತನದ ದುರ್ವರ್ತನೆ ತೋರುತ್ತಿದ್ದಾರೆ. ಕನ್ನಡದ ನೆಲದಲ್ಲಿ ಪ್ರತಿಯೊಬ್ಬರಿಗೂ ಕನ್ನಡ ಮಾತನಾಡಲು ಬರಬೇಕು. ಕನ್ನಡದ ನೆಲದಲ್ಲಿನ ಎಲ್ಲಾ ಹುದ್ದೆಗಳು ಕನ್ನಡಿಗರಿಗೇ ಸಿಗಬೇಕು ಎಂಬ ಹಕ್ಕೊತ್ತಾಯದ ಚಳುವಳಿಗೆ ಕನ್ನಡಿಗರು ಮುಂದಾಗಬೇಕು ಎಂದವರು ಆಗ್ರಹಿಸಿದರು.

ಕನ್ನಡ ಬರದೇ ಇರುವವರಿಗೂ ಬ್ಯಾಂಕಿನಲ್ಲಿ ಉದ್ಯೋಗ ಕೊಡಬಹುದು ಎಂಬ ನಿಯಮಗಳನ್ನು ರದ್ದುಗೊಳಿಸಬೇಕು.  ಕನ್ನಡ ಜ್ಞಾನ ಹೊಂದಿದವರು ಮಾತ್ರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕೆಂಬ 2014ಕ್ಕೆ ಮುಂಚೆ ಇದ್ದ ನಿಯಮಗಳನ್ನು ಮತ್ತೆ ಜಾರಿಗೆ ತರುವಂತೆ ಒತ್ತಾಯಿಸಬೇಕು ಎಂದ ಅವರು, ಆಂಧ್ರ ಪ್ರದೇಶದಂತೆ ಪ್ರತಿ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಇಲಾಖೆಗಳ ಪರೀಕ್ಷೆಗಳಿಗೆ ಯುವಕ, ಯುವತಿಯರನ್ನು ಸಜ್ಜುಗೊಳಿಸುವ ವ್ಯವಸ್ಥೆ ಕರ್ನಾಟಕದಲ್ಲಿ ಜಾರಿಯಾಗಬೇಕು ಎಂದವರು ಆಗ್ರಹಿಸಿದರು.

error: Content is protected !!