ದಾವಣಗೆರೆ, ಅ.22- ಇಲ್ಲಿಗೆ ಸಮೀಪದ ಮಲ್ಲಶೆಟ್ಟಿಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ಅಂಡರ್ ಪಾಸ್, ಸರ್ವೀಸ್ ರಸ್ತೆ ನಿರ್ಮಿಸುವಂತೆ ಒತ್ತಾಯಿಸಿ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಮಲ್ಲಶೆಟ್ಟಿಹಳ್ಳಿ ಬಳಿ ಸುತ್ತಮುತ್ತಲಿನ ಗ್ರಾಮಸ್ಥರು ಇಂದು ಪ್ರತಿಭಟಿಸಿದರು.
ಹೆದ್ದಾರಿ ತಡೆಗೂ ಪ್ರಯತ್ನಿಸಿದಾಗ ಜಿಲ್ಲಾಧಿ ಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಿದರು.
ಮಲ್ಲಶೆಟ್ಟಿಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರೈತ ಸಂಘದ ರಾಜ್ಯ ಮುಖಂಡ ರೆಡ್ಡಿಹಳ್ಳಿ ವೀರಣ್ಣ, ಜಿಲ್ಲಾಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಪ್ರಧಾನ ಕಾರ್ಯದರ್ಶಿ ಚಿನ್ನಸಮುದ್ರ ಶೇಖರ ನಾಯ್ಕ ಸೇರಿದಂತೆ, ಇತರೆ ರೈತ ಮುಖಂಡರ ನೇತೃತ್ವದಲ್ಲಿ ಮಲ್ಲಶೆಟ್ಟಿಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಬೆಳಿಗ್ಗೆಯಿಂದಲೇ ಪ್ರತಿಭಟನೆಗಿಳಿದರು. ಹೆದ್ದಾರಿ ತಡೆಗೂ ಸಿದ್ಧಗೊಂಡ ವೇಳೆ ಮೊದಲಿಗೆ ಪೊಲೀಸರು ಅವಕಾಶ ನೀಡದೇ ಹೆದ್ದಾರಿ ತಡೆ ನಡೆಸದಂತೆ ಮನವೊಲಿಸಲು ಯತ್ನಿಸಿದರು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚಿನ್ನಸಮುದ್ರ ಶೇಖರ ನಾಯ್ಕ ಮಾತನಾಡುವ ವೇಳೆ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮಧ್ಯ ಪ್ರವೇಶಿಸಿದರು. ಈ ಹಂತದಲ್ಲಿ ಶೇಖರ ನಾಯ್ಕ, ಪೊಲೀಸ್ ಅಧಿಕಾರಿ, ಸಿಬ್ಬಂದಿ ಮಧ್ಯೆ ಮಾತಿನ ಚಕಮಕಿ ನಡೆಸಿ, ಶೇಖರನಾಯ್ಕರನ್ನು ಬಂಧಿಸಲು ಪೊಲೀಸರು ಮುಂದಾದರು. ಆಗ ರೈತ ಸಂಘ-ಹಸಿರು ಸೇನೆ ಮುಖಂಡರು, ಪ್ರತಿಭಟನಾ ನಿರತ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದರಲ್ಲದೇ, ಹೆದ್ದಾರಿ ತಡೆಗೆ ಮುಂದಾದರು. ಜಿಲ್ಲಾಧಿಕಾರಿಗಳೇ ಸ್ಥಳಕ್ಕೆ ಬಂದು ನಮ್ಮ ಬೇಡಿಕೆ ಬಗ್ಗೆ ಲಿಖಿತ ಭರವಸೆ ನೀಡಲಿ ಎಂಬುದಾಗಿ ಪ್ರತಿಭಟನಾಕಾರರು ಪಟ್ಟು ಹಿಡಿದರು.
ಕೊನೆಗೆ ಪ್ರತಿಭಟನಾ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಪ್ರತಿಭಟನಾಕಾರರ ಮನವೊಲಿಸಿದರು. ಜಿಲ್ಲಾಧಿಕಾರಿಗಳು ಮಾತನಾಡಿ, ನಿಮ್ಮ ಬೇಡಿಕೆ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದು, ನಿಮ್ಮ ಬೇಡಿಕೆ ಈಡೇರಿಸುವ ಬಗ್ಗೆ ಸಂಜೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿಮ್ಮ ಜೊತೆಗೆ ಚರ್ಚಿಸಿ, ಲಿಖಿತ ಭರವಸೆ ನೀಡುತ್ತೇನೆ. ನಿಮ್ಮ ಬೇಡಿಕೆ ಈಡೇರಿಸುವವರೆಗೂ ನಾನು ದಾವಣಗೆರೆ ಬಿಟ್ಟು ಹೋಗುವುದಿಲ್ಲ ಎಂಬುದಾಗಿ ಆಶ್ವಾಸನೆ ನೀಡಿದ ನಂತರವಷ್ಟೇ, ಪ್ರತಿಭಟನಾಕಾರರು ಹೋರಾಟವನ್ನು ಹಿಂಪಡೆದರು.
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ತಾಲ್ಲೂಕಿನ ಮಲ್ಲಶೆಟ್ಟಿಹಳ್ಳಿ ಬಳಿ ಹೆದ್ದಾರಿ ದುರಸ್ತಿಪಡಿಸುವಂತೆ, ಇಲ್ಲಿ ಹೆದ್ದಾರಿ ಎರಡೂ ಬದಿಗೆ ಬಂದು ಹೋಗಲು ಕೆಳ ಸೇತುವೆ ನಿರ್ಮಿಸುವಂತೆ ಮನವಿ ಮಾಡುತ್ತಲೇ ಬಂದಿದ್ದೇವೆ. ಆದರೆ, ಅವೈಜಾನಿಕ ಸೇತುವೆ ಇದ್ದು, ಇದರಲ್ಲಿ ಎತ್ತಿನ ಬಂಡಿ ಹುಲ್ಲು ತುಂಬಿದರೆ ಹೋಗದ ಸ್ಥಿತಿ ಇದೆ. ವಿನಾಕಾರಣ ನಾವು ಗ್ರಾಮಸ್ಥರು ನಾಲ್ಕು ಕಿ.ಮೀ. ಸುತ್ತು ಹಾಕಿಕೊಂಡು ಬರಬೇಕಾದ ಸ್ಥಿತಿ ಇದೆ. ಕೇವಲ 50-60 ಹೆಜ್ಜೆ ಹಾಕುವ ಕಡೆ ನಾಲ್ಕು ಕಿ.ಮೀ. ಸುತ್ತಾಡಬೇಕೇ. ನಿರಂತರ ಹೋರಾಟ ನಡೆಸಿಕೊಂಡು ಬಂದಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವಾಗಲೀ, ಜಿಲ್ಲಾಡಳಿತವಾಗಲೀ, ಸಂಸದರು, ಸಚಿವರು, ಶಾಸಕರಾಗಲೀ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ. ಹಿಂದಿನಿಂದಲೂ ಜಿಲ್ಲಾಡಳಿತ ಆದಷ್ಟು ಬೇಗನೆ ಕಾಮಗಾರಿ ಆರಂಭಿಸುವುದಾಗಿ ಹೇಳಿದ್ದರೂ, ಈವರೆಗೂ ಅದನ್ನು ಕಾರ್ಯ ರೂಪಕ್ಕೆ ತಂದಿಲ್ಲ ಎಂದು ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಂಘದ ಕರಿಲಕ್ಕೇನಹಳ್ಳಿ ಹನುಮಂತಪ್ಪ, ಈಚಘಟ್ಟದ ಕರಿಬಸಪ್ಪ, ಮಲ್ಲಶೆಟ್ಟಿಹಳ್ಳಿ ಹನುಮೇಶ, ಬುಳ್ಳಾಪುರ ಹನುಮಂತಪ್ಪ, ಭರಮಪ್ಪ ಮಾಸಡಿ, ದಾಗಿನಕಟ್ಟೆ ಬಸವರಾಜ, ತಿಮ್ಮೇಶ, ಬುಳ್ಳಾಪುರ ಹನುಮಂತಪ್ಪ, ಪರಮೇಶ್ವರಪ್ಪ, ಖಲೀಮುಲ್ಲಾ, ನಾಗರಾಜ ಸೇರಿದಂತೆ ಇತರರು ಪಾಲ್ಗೊಂಡಿದ್ದರು.