ಕ್ರೀಡಾಕ್ಷೇತ್ರ ಬಲ ಪಡಿಸಲು ಹೆಚ್ಚಿನ ಒತ್ತು

ದಾವಣಗೆರೆ, ಸೆ. 22- ಮೂರು ದಿನಗಳ ಕಾಲ ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ಚಾಲನೆ ನೀಡಲಾಯಿತು.

ಕ್ರೀಡೆ, ಯುವಜನ ಮತ್ತು ರೇಷ್ಮೆ ಸಚಿವ ಕೆ.ಸಿ. ನಾರಾಯಣ ಗೌಡ ಸಮಾರಂಭ ಉದ್ಘಾಟಿಸಿ, ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ, ರಾಜ್ಯ ದಲ್ಲಿ ಕ್ರೀಡೆಗೆ ಹೆಚ್ಚಿನ ಒತ್ತು ನೀಡಲು ಸರ್ಕಾರ ಹಲ ವಾರು ಕ್ರಮ ಗಳನ್ನು ಕೈಗೊಂಡಿರುವುದಾಗಿ ಹೇಳಿದರು.

ಮುಂದಿನ ಓಲಿಂಪಿಕ್ಸ್‌ ಪಂದ್ಯಾವಳಿಗೆ ರಾಜ್ಯದಿಂದ 75 ಕ್ರೀಡಾಪಟುಗಳನ್ನು ಕಳುಹಿಸುವ ಬಗ್ಗೆ ತೀರ್ಮಾನಿಸಲಾಗಿದೆ. ಕ್ರೀಡಾಪಟುಗಳನ್ನು ದತ್ತು ಪಡೆಯಲು 30-40 ಕಂಪನಿಗಳು ಮುಂದೆ ಬಂದಿವೆ. ಜಿಂದಾಲ್ ಕಂಪನಿಯೊಂದೇ 50 ಮಕ್ಕಳನ್ನು ದತ್ತು ಪಡೆದಿದೆ ಎಂದು ಹೇಳಿದರು.

ಸ್ಥಗಿತಗೊಂಡಿದ್ದ ಜಕ್ಕೂರು ವಿಮಾನ ನಿಲ್ದಾಣವನ್ನು ಅಭಿವೃದ್ಧಿ ಪಡಿಸಿ, ಶಿಥಿಲಾವಸ್ಥೆಯಲ್ಲಿದ್ದ 7 ವಿಮಾನಗಳನ್ನು ದುರಸ್ತಿಗೊಳಿಸಿ 15 ದಿನಗಳಲ್ಲಿ ಪುನರ್ ಆರಂಭಿಸಲಾಗುವುದು. ಸುಮಾರು 100 ಮಕ್ಕಳಿಗೆ ಪೈಲಟ್ ತರಬೇತಿ ನೀಡಿ ಅಂತರರಾಷ್ಟ್ರೀಯ ಮಟ್ಟಕ್ಕೆ ಕಳುಹಿಸಿ ಕೊಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ವಿದ್ಯೆಗೆ ಕೊಡುವ ಗೌರವವನ್ನು ಕ್ರೀಡೆಗೂ ಕೊಡುವ ಅಗತ್ಯವಿದೆ. ದೇಹ ಹಾಗೂ ಮನಸ್ಸಿಗೆ ಬಲ ನೀಡುವ ಕ್ರೀಡಾ ಕ್ಷೇತ್ರದ ಸಚಿವನಾಗಲು ಸಂತೋಷದಿಂದಲೇ ಒಪ್ಪಿಕೊಂಡಿದ್ದಾಗಿ ಹೇಳಿದ ಅವರು, ರಾಜ್ಯದ 31 ಜಿಲ್ಲೆಗಳಲ್ಲೂ ಮಹಿಳೆ ಹಾಗೂ ಪುರುಷ ಕ್ರೀಡಾಪಟುಗಳಿಗೆ ಪ್ರತ್ಯೇಕ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಎಲ್ಲಾ ಜಿಲ್ಲೆಗಳಲ್ಲೂ ಕ್ರೀಡಾ ಪ್ರೋತ್ಸಾಹಕ್ಕೆ ಬೇಕಾದ ಅಗತ್ಯತೆಗಳನ್ನು ತಿಳಿದು ಕೊಳ್ಳಲು ತಜ್ಞರ ತಂಡ ನೇಮಕ ಮಾಡಲಾಗಿದ್ದು, ವರದಿಗನುಗುಣವಾಗಿ ಸೌಲಭ್ಯಗಳನ್ನು ಕಲ್ಪಿಸ ಲಾಗುವುದು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ ಮಾತನಾಡುತ್ತಾ, ಬೆಳಿಗ್ಗೆಯಿಂದ ಸಂಜೆ ವರೆಗೆ ಕರ್ತವ್ಯ ನಿರ್ವಹಣೆಯ ಒತ್ತಡದಲ್ಲಿರುವ ನೌಕರರಿಗೆ ಇಂತಹ ಕಾರ್ಯಕ್ರಮ ಅತ್ಯಾವಶ್ಯಕ ಎಂದು ಹೇಳಿದರು.

ಇಷ್ಟೊಂದು ಸಂಖ್ಯೆಯ ಸರ್ಕಾರಿ ನೌಕರರನ್ನು ಒಂದೇ ಸ್ಥಳದಲ್ಲಿ ನೋಡುತ್ತಿರುವುದು ಇದೇ ಮೊದಲ ಬಾರಿಯಾಗಿದ್ದು, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು ಎಲ್ಲರನ್ನೂ ಸಂಘಟಿಸಿ ಕೊಂಡು, ನೌಕರರ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಯಾರು ತಮ್ಮ ಬಗ್ಗೆ ಕಾಳಜಿ ವಹಿಸುತ್ತಾರೋ ಅವರಿಗೆ ನೀವು ಸಹಕರಿಸಬೇಕು ಎಂದು ಹೇಳಿದರು.

ಇದಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ, ರಾಜ್ಯ ಸರ್ಕಾರಿ ನೌಕರರ ಹೊಸ ಪಿಂಚಣಿ ಯೋಜನೆ ರದ್ಧು ಗೊಳಿಸಿ, ದೇಶದಲ್ಲಿಯೇ ರಾಜ್ಯದ ಸರ್ಕಾರಿ ನೌಕರರು ಅತಿ ಕಡಿಮೆ ವೇತನ ಪಡೆಯುತ್ತಿದ್ದು ವೇತನ ತಾರತಮ್ಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

2022ಕ್ಕೆ ಹೊಸ ವೇತನ ಆಯೋಗ ಪಡೆಯಬೇಕಿದೆ. ಈ ಕುರಿತು 2-3 ತಿಂಗಳಲ್ಲಿ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ 6 ಲಕ್ಷ ನೌಕರರನ್ನು ಸೇರಿಸಿ ಸರ್ಕಾರದ ಗಮನ ಸೆಳೆಯಲಾಗುವುದು. ಕ್ರೀಡಾ ಹಾಗೂ ನಗರಾಭಿವೃದ್ಧಿ ಸಚಿವರುಗಳು ನಮ್ಮ ಬೇಡಿಕೆ ಈಡೇರಿಸುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸಬೇಕು ಎಂದು ಹೇಳಿದರು.

ಕೇಂದ್ರ ಸರ್ಕಾರ ಈಗಾಗಲೇ ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿದ್ದು, ರಾಜ್ಯ ಸರ್ಕಾರದಿಂದಲೂ ವಾರದೊಳಗೆ ತುಟ್ಟಿಭತ್ಯೆ ಹೆಚ್ಚಳ ಮಾಡುವಂತೆ ಒತ್ತಾಯಿಸುತ್ತೇವೆ. ಕಳೆದ ಎರಡೂ ವರೆ ವರ್ಷದಲ್ಲಿ ಸಂಘದಿಂದ ಅನೇಕ ಉತ್ತಮ ಕೆಲಸಗಳಾಗಿವೆ ಎಂದು ಹೇಳಿದರು.

ಸರ್ಕಾರಿ ನೌಕರರ 25 ಲಕ್ಷ ಸದಸ್ಯರಿಗೆ ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ನೀಡುವ ಯೋಜನೆಯು ಮುಂದಿನ ತಿಂಗಳು ಜಾರಿಗೆ ಬರಲಿದೆ. 20-25 ವರ್ಷಗಳಿಂದ ಆಗದ 18 ಸರ್ಕಾರಿ ಆದೇಶಗಳು ಕಳೆದ ಎರಡು ವರ್ಷಗಳಲ್ಲಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಆಡಳಿತಾವಧಿಯಲ್ಲಾಗಿವೆ. ಕ್ರೀಡಾಕೂಟಕ್ಕಾಗಿ ಸರ್ಕಾರ 2 ಕೋಟಿ ರೂ. ಅನುದಾನ ನೀಡಿರುವುದು ಅಭಿನಂದನೀಯ ಎಂದರು.

ಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿ.ಪಂ. ಸಿಇಒ ಡಾ.ವಿಜಯಮಹಾಂತೇಶ್ ಬಿ.ದಾನಮ್ಮನವರ, ಎಸ್ಪಿ ಸಿ.ಬಿ. ರಿಷ್ಯಂತ್, ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ್ ಗೌಡಪ್ಪ ಪಾಟೀಲ, ಖಜಾಂಚಿ ಆರ್.ಶ್ರೀನಿವಾಸ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಿ.ಶ್ರೀನಿವಾಸ್, ವಿವಿಧ ಜಿಲ್ಲೆಗಳ ಸಂಘದ ಜಿಲ್ಲಾಧ್ಯಕ್ಷರುಗಳು ಉಪಸ್ಥಿತರಿದ್ದರು. ಸಂಘದ ಜಿಲ್ಲಾಧ್ಯಕ್ಷ ಬಿ.ಪಾಲಾಕ್ಷಿ ಅತಿಥಿಗಳನ್ನು  ಸ್ವಾಗತಿಸಿದರು.

error: Content is protected !!