ವಚನಗಳು ಬದುಕಿಗೆ ಹಿಡಿದ ಕನ್ನಡಿ

ವಚನಗಳು ಬದುಕಿಗೆ ಹಿಡಿದ ಕನ್ನಡಿ - Janathavaniಸಾಣೇಹಳ್ಳಿ, ಫೆ.28- ಪ್ರತಿ ಯೊಂದು ವಚನಗಳೂ ನಮ್ಮ ಬದುಕಿಗೆ ಹಿಡಿದ ಕನ್ನಡಿ ಇದ್ದಂತೆ. ಬಸವಣ್ಣನವರು ಇಂದಿಗೂ ನಮಗೆ ಆದರ್ಶ ಎಂದು ಸಾಣೇಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಾಣೇಹಳ್ಳಿ ಶ್ರೀ ಶಿವಕುಮಾರ ಕಲಾಸಂಘ ಮತ್ತು ಕರ್ನಾಟಕ ಯಕ್ಷಗಾನ ಅಕಾ ಡೆಮಿ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ `ಶರಣ ಸಾಹಿತ್ಯ ಮತ್ತು ಯಕ್ಷಗಾನ’ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಬಸವಣ್ಣನವರ ಬಹುತೇಕ ವಚನಗಳು ನಮ್ಮನ್ನೇ ಕುರಿತಂತೆ ಇವೆ. ಇನ್ನೊಬ್ಬರನ್ನು ಅವಲಂಭಿಸದೇ ನಮ್ಮನ್ನು ನಾವೇ ಅವಲಂಬಿಸಬೇಕು. ನಾವು ಇನ್ನೊಬ್ಬರಿಗೆ ಆದರ್ಶವಾಗಬೇಕೇ ಹೊರತು, ಇನ್ನೊಬ್ಬರು ನಮಗೆ ಆದರ್ಶವಾಗಬಾರದು ಎಂದು ನುಡಿದರು.

ಹಿಂದೆ ಯಕ್ಷಗಾನ ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಇತ್ತೀಚೆಗೆ ವಿಸ್ತಾರಗೊಳ್ಳುತ್ತಿ ರುವುದು ಆಶಾದಾಯಕ ಬೆಳವಣಿಗೆ ಎಂದರು.

ಮಕ್ಕಳ ಮನಸ್ಸು ಖಾಲಿ ಚೀಲವಿದ್ದಂತೆ ನಾವು ಏನನ್ನು ತುಂಬಬೇಕೆಂಬ ವಿವೇಚನೆ ಇರಬೇಕು. ಮೌಲ್ಯಯುತವಾದದ್ದನ್ನು ತುಂಬುವ ಪ್ರಯತ್ನವನ್ನು ಹಿರಿಯರೆಲ್ಲರೂ ಮಾಡಬೇಕೆಂದು ಕರೆ ನೀಡಿದರು.

`ಶೂನ್ಯ ಸಂಪಾದನೆ ಮತ್ತು ತಾಳಮದ್ದಲೆ’ ಕುರಿತಂತೆ ಚಿಕ್ಕಮಗಳೂರು ಬಸವ ತತ್ವ ಪೀಠದ ಡಾ. ಬಸವ ಮರುಳಸಿದ್ಧ ಸ್ವಾಮಿಗಳು ಮಾತನಾಡಿ, ಯಕ್ಷಗಾನ ಅಬ್ಬರದಿಂದಲೇ ಪ್ರಾರಂಭವಾಗುವ ಕಲೆ. ಈ ಕಾರಣಕ್ಕಾಗಿ ಕಾಳಗದ ದೃಶ್ಯಗಳು ಹೆಚ್ಚಿರುತ್ತವೆ. ಯಕ್ಷಗಾನಕ್ಕೆ ಶೂನ್ಯ ಸಂಪಾದನೆಯ ಕಥಾನಕವನ್ನು ಪೂರ್ಣ ಪ್ರಮಾಣದಲ್ಲಿ ಒಗ್ಗಿಸಲು ಸಾಧ್ಯವಿಲ್ಲ ಎಂದರು.

ಇಲ್ಲಿನ ಅನೇಕ ಮಾತುಗಳು ತಾಳಮದ್ದಲೇಗೆ ಒಳಪಡುವುದಿಲ್ಲ. ಕಥೆಗಳನ್ನು ಪ್ರಸಂಗ ರೂಪದಲ್ಲಿ ಪ್ರಸ್ತುತಪಡಿಸುತ್ತಾರೆ. ಶೂನ್ಯ ಸಂಪಾದನೆ ರಚನೆಯಾಗಿದ್ದೇ ತಾಳ ಮದ್ದಲೆಗೆ ಹೊಂದುವಂತಹ ಹಿನ್ನೆಲೆಯಲ್ಲಿ ಎಂದು ಹೇಳಿದರು. `ಬಸವೇಶ್ವರ ಚರಿತೆ ಮತ್ತು ಅಕ್ಕಮಹಾದೇವಿ ಚರಿತೆ’ ಕುರಿತು ಡಾ. ಕವಿತಾ ಸಾಗರ ಮಾತನಾಡಿದರು.

`ಮೂಡಲಪಾಯದಲ್ಲಿ ಶರಣ ಸಾಹಿತ್ಯದ ಪ್ರಸಂಗಗಳು’ ಕುರಿತು ಡಾ. ಶ್ರೀಶೈಲ ಹುದ್ದಾರ, `ಮಾಯಾ ಕೋಲಾಹಲ ಪ್ರದರ್ಶನಗಳು’ ಕುರಿತು ಶಶಿಕಲಾ ಜೋಶಿ, `ಬಸವೇಶ್ವರ ಚರಿತೆಯ ಯಕ್ಷಗಾನ ತಿರುಗಾಟ’ ಕುರಿತು ವಿದ್ವಾನ್‌ ದತ್ತಮೂರ್ತಿ ಭಟ್‌ ಮಾತನಾಡಿದರು.

ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರೊ. ಎಂ.ಎ. ಹೆಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಸೇರಿದಂತೆ ಮತ್ತಿತರರಿದ್ದರು.

error: Content is protected !!