ಕರವೇಯಿಂದ ಏರ್ಪಡಿಸಿದ್ದ ಮಹಾಪೌರರ ಅಭಿನಂದನಾ ಸಮಾರಂಭದಲ್ಲಿ ರಾಮೇಗೌಡ
ದಾವಣಗೆರೆ, ಮಾ.5- ಕನ್ನಡ ಪರವಾದ ನಿಲುವುಗಳನ್ನು ತೆಗೆದುಕೊಳ್ಳುವ ಜೊತೆಗೆ ಕನ್ನಡಿಗರ ಧ್ವನಿಯಾಗಿ ನಿಲ್ಲುವಂತೆ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಅವರು ನೂತನ ಮೇಯರ್ ವೀರೇಶ್ ಅವರನ್ನು ವಿನಂತಿ ಮಾಡಿಕೊಂಡರು.
ಅವರು, ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನೂತನವಾಗಿ ಆಯ್ಕೆಯಾಗಿರುವ ಮಹಾನಗರ ಪಾಲಿಕೆಯ ಮಹಾಪೌರ ಎಸ್.ಟಿ. ವೀರೇಶ್ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಾ, ನಗರದ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಅಂಗಡಿಯ ನಾಮಫಲಕಗಳು ಆಂಗ್ಲ ಭಾಷೆಯಲ್ಲಿ ಮತ್ತು ಜಾಹೀರಾತು ಫಲಕಗಳು ರಾರಾಜಿಸುತ್ತಿವೆ. ತಕ್ಷಣ ನಗರ ಪಾಲಿಕೆ ಸರ್ಕಾರದ ಆದೇಶದಂತೆ ಶೇಕಡ 70ರಷ್ಟು ಕನ್ನಡದಲ್ಲಿ ಬರೆಸುವಂತೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು.
ಜೊತೆಗೆ ನಗರದ ಡಾಕ್ಟರ್ ಮೋದಿ ವೃತ್ತದ ಬಳಿ ಇರುವ ಬೀದಿ ವ್ಯಾಪಾರಸ್ಥರು, ಶಾಮನೂರು ರಸ್ತೆಯಲ್ಲಿರುವ ಬೀದಿ ವ್ಯಾಪಾರಿಗಳು ಪಾದಚಾರಿ ವ್ಯಾಪಾರಿಗಳನ್ನು ಒಕ್ಕಲು ಎಬ್ಬಿಸುತ್ತಿರುವ ಆಯು ಕ್ತರ ಮತ್ತು ಪೊಲೀಸರ ಕ್ರಮವನ್ನು ಖಂಡಿಸಿದರು. ಪಾದಚಾರಿಗಳಿಗೆ ಫುಡ್ ಕೋರ್ಟ್ ನಿರ್ಮಾಣ ಮಾಡುವಂತೆ ಒತ್ತಾಯಿಸಿದರು.
ಫುಡ್ ಕೋಟ್ ನಿರ್ಮಾಣವಾಗುವವರೆಗೆ ಮತ್ತೆ ಸ್ಥಳಗಳಲ್ಲಿ ವ್ಯಾಪಾರ ನಡೆಸಲು ಅನುವು ಮಾಡಿಕೊಡಬೇಕಾಗಿ ರಾಮೇಗೌಡ ವಿನಂತಿಸಿದರು.
ಇದಕ್ಕೆ ಸ್ಪಂದಿಸಿದ ಮಹಾಪೌರ ಎಸ್.ಟಿ. ವೀರೇಶ್, ತಕ್ಷಣ ಆಯುಕ್ತರು ಮತ್ತು ನಿಮ್ಮೊಂದಿಗೆ ಸೇರಿಸಿ ಫುಡ್ ಕೋರ್ಟ್ ಕಟ್ಟಿಸಿಕೊಡಲು ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ಕರವೇ ಪಾದಚಾರಿ ವ್ಯಾಪಾರಿ ಘಟಕದ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷ ರಾಘವೇಂದ್ರ ಧೀರೇಂದ್ರ, ಮಂಜುನಾಥ್, ಬಸವ ರಾಜ್, ಪ್ರಕಾಶ್, ರಾಜಪ್ಪ, ಕರಿಬಸಪ್ಪ ರಾಕೇಶ್, ಚಂದ್ರು, ಕೈಲಾಸ್, ದಾದಾಪೀರ್, ರಮೇಶ್, ಅಣ್ಣಪ್ಪ, ಕೊಟ್ರೇಶ್, ಜಾಫರ್, ಸಾಗರ್, ಗಣೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್, ಕೆ.ಜಿ. ಬಸವರಾಜ್, ನಗರ ಘಟಕದ ಅಧ್ಯಕ್ಷ ಹನುಮಂತಪ್ಪ, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಬಸಮ್ಮ, ಸಾಕಮ್ಮ, ಸರೋಜಮ್ಮ, ಭಾಗ್ಯಮ್ಮ, ಸಾವಿತ್ರಮ್ಮ, ಅನುಸೂಯಮ್ಮ, ಮಹೇಂದ್ರ ಮತ್ತಿತರರು ಈ ಸಂದರ್ಭದಲ್ಲಿದ್ದರು.