ಸಮಾನ ಅವಕಾಶ-ಸೌಲಭ್ಯಕ್ಕಾಗಿ ಶ್ರವಣದೋಷವುಳ್ಳವರ ಪ್ರತಿಭಟನೆ

ದಾವಣಗೆರೆ, ಫೆ.25- ಎಲ್ಲರಂತೆ ಸಮಾನವಾದ ಅವಕಾಶಗಳು, ಸೌಲಭ್ಯಗಳನ್ನು ನೀಡುವಂತೆ ಒತ್ತಾಯಿಸಿ ಜಿಲ್ಲಾ ಕಿವುಡರ ಸಂಘದ ನೇತೃತ್ವದಲ್ಲಿ ಶ್ರವಣದೋಷವುಳ್ಳ ವಿಶೇಷ ಚೇತನರು ನಗರದ ಜಯದೇವ ವೃತ್ತದಲ್ಲಿಂದು ಬೇಡಿಕೆಗಳ ನಾಮಫಲಕಗಳ ಪ್ರದರ್ಶಿಸುತ್ತಾ ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಜಿಲ್ಲೆಯಲ್ಲಿ ಸುಮಾರು 4 ಸಾವಿರದಿಂದ 5 ಸಾವಿರ ಶ್ರವಣದೋಷವುಳ್ಳ ಅಂಗವಿಕಲರಿದ್ದಾರೆ. ಆದರೆ ಈ ಶ್ರವಣದೋಷವುಳ್ಳವರಿಗೆ ಇತರರಂತೆ ಸಮಾನ ಅವಕಾಶಗಳಿಲ್ಲ. ಅಲ್ಲದೆ ಸೌಲಭ್ಯಗಳೂ ಇಲ್ಲ ಎಂದು ಅಳಲಿಟ್ಟರು.

ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ‘ಡಿ’ ಗ್ರೂಪ್ ಮತ್ತು ಅಟೆಂಡರ್ ಹುದ್ದೆ ನೀಡಬೇಕು, ಬರೀ ಕಮೀಷನ್ ಆಸೆಗೆ ಕಳಪೆ ಮಟ್ಟದ ಶ್ರವಣ ಸಾಧನ ಮತ್ತು  ಬೈಕ್‌ಗಳನ್ನು ನೀಡುತ್ತಿರುವ ಅಂಗವಿಕಲರ ಕಲ್ಯಾಣಾಧಿಕಾರಿ ಜಿ.ಎಸ್. ಶಶಿಧರ ಅವರನ್ನು ಕಿತ್ತು ಹಾಕಿ ಹಾಗೂ ಜಿಲ್ಲಾ ಪಂಚಾಯಿ ಮತ್ತು ಇತರೆ ಇಲಾಖೆಗಳಿಂದ ಕೇವಲ ದೈಹಿಕ ಅಂಗವಿಕಲರಿಗೆ ನೀಡುವ ಬೈಕ್‌ಗಳನ್ನು ಕೊಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯ ಪ್ರಮುಖ ಕಚೇರಿಗಳಲ್ಲಿ ಸಂಜ್ಞೆ ಭಾಷೆ ತಜ್ಞರನ್ನು ನೇಮಿಸಿ ನಮ್ಮ ಜೊತೆ ಸಂವಹನಕ್ಕೆ ದಾರಿ ಮಾಡಿಕೊಡಿ,  ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 60 ರಿಂದ 70 ಮಂದಿ ಶ್ರವಣದೋಷವುಳ್ಳ ಅಂಗವಿಕಲರಿಗೆ ಸಾಲ ಸೌಲಭ್ಯ, ಉದ್ಯೋಗ ಕೊಡಿಸುವದಾಗಿ ಹೇಳಿ ಕೇವಲ 7 ಜನಕ್ಕೆ ಸಾಲ ನೀಡಿದ್ದು, ಉಳಿದವರಿಗೂ ನೀಡಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಿವುಡರ ಸಂಘದ ಅಧ್ಯಕ್ಷ ಆಸೀಫ್, ಗೌರವ ಉಪಾಧ್ಯಕ್ಷ ಎನ್. ಗಣೇಶ್, ಉಪಾಧ್ಯಕ್ಷ ಮಂಜುನಾಥ, ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!