ಕೋವಿಡ್ ನಿಯಮದೊಂದಿಗೆ ಶೀಘ್ರ ಭೌತಿಕ ತರಗತಿ ಆರಂಭಿಸಿ

ಜಿಲ್ಲಾ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಮನವಿ

ದಾವಣಗೆರೆ,ಜು.11- ಭೌತಿಕ ತರಗತಿಗಳನ್ನು ಕೋವಿಡ್ ನಿಯಮಗಳ ಪಾಲನೆಯೊಂದಿಗೆ ಶೀಘ್ರ ಆರಂಭಿಸುವಂತೆ ಮುಖ್ಯಮಂತ್ರಿಗಳಿಗೆ ಶಿಫಾರಸ್ಸು ಮಾಡಬೇಕು ಎಂದು ಜಿಲ್ಲಾ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟವು ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ, ವಿಧಾನ ಪರಿಷತ್ ಸದಸ್ಯರುಗಳಾದ ವೈ. ಎ. ನಾರಾಯಣಸ್ವಾಮಿ, ಎಂ. ಚಿದಾನಂದ ಗೌಡ ಅವರುಗಳನ್ನು ಒತ್ತಾಯಿಸಿದೆ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲೆಂದು ನಿನ್ನೆ ನಗರಕ್ಕೆ ಆಗಮಿಸಿದ್ದ ನಾರಾಯಣಸ್ವಾಮಿ ಮತ್ತು ಚಿದಾನಂದ ಗೌಡ ಅವರುಗಳ ಜೊತೆಗೆ ಸಂಸದ ಸಿದ್ದೇಶ್ವರ ಅವರುಗಳನ್ನು ಭೇಟಿ ಮಾಡಿದ ಒಕ್ಕೂಟದ ಜಿಲ್ಲಾಧ್ಯಕ್ಷ ಟಿ.ಎಂ. ಉಮಾಪತಯ್ಯ ಅವರ ನೇತೃತ್ವದ ಪದಾಧಿಕಾರಿಗಳ ನಿಯೋಗವು ಈ ಮನವಿ ಸಲ್ಲಿಸಿದೆ.

ಖಾಸಗಿ ಶಾಲಾ ಶಿಕ್ಷಕರಿಗೆ 5 ಸಾವಿರ ರೂ.ಗಳ ಪರಿಹಾರದ ಪ್ಯಾಕೇಜನ್ನು ಸರ್ಕಾರ ಘೋಷಿಸಿದ್ದು, ಅದನ್ನು 25 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು. ದಾಖಲಾತಿಗೆ ಬರುವ ಆಗಸ್ಟ್ 30ರವರೆಗೆ ಅವಕಾಶ ನೀಡಬೇಕು. ಖಾಸಗಿ ಶಾಲಾ ಆಡಳಿತ ಮಂಡಳಿಗಳು ಎದುರಿಸುತ್ತಿರುವ ಆರ್ಥಿಕ ಸಮಸ್ಯೆ, ತೆರಿಗೆ, ವಿಮಾ ಪಾವತಿ, ಕಟ್ಟಡ, ವಾಹನ ಸಾಲಗಳ ಮೇಲಿನ ಹೆಚ್ಚುವರಿ ಶುಲ್ಕಗಳ ಕಡಿತ ಮಾಡುವುದಲ್ಲದೇ, ಒಂದು ವರ್ಷ ದವರೆಗೆ ವಿನಾಯಿತಿ ನೀಡಬೇಕು. ಸರ್ಕಾರವು ಎಲ್ಲಾ ಕ್ಷೇತ್ರ ಗಳ ಚೇತರಿಕೆಗೆ ವಿಶೇಷ ಪ್ಯಾಕೇಜ್ ನೀಡಿದ್ದು, ಅದರಂತೆ ಶಿಕ್ಷಣ ಕ್ಷೇತ್ರಕ್ಕೂ ನೀಡಬೇಕು ಎಂದು ಸರ್ಕಾರಕ್ಕೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒಕ್ಕೂಟ ಕೇಳಿಕೊಂಡಿದೆ.

ಖಾಸಗಿ ಶಾಲೆಗಳಲ್ಲಿನ ವಿದ್ಯಾರ್ಥಿಗಳು ದೇಶ – ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಈ ಸಾಧನೆಯಲ್ಲಿ ಶಿಕ್ಷಕರ ಸೇವೆ ಅತ್ಯಮೂಲ್ಯವಾಗಿದ್ದು, ದೇಶದ ಕೀರ್ತಿಗೆ ಖಾಸಗಿ ಶಾಲೆಗಳ ಕೊಡುಗೆ ಅನನ್ಯವಾಗಿದೆ. ಆದರೆ, ಕೋವಿಡ್  ಸೋಂಕು ಕಾರಣದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಮಾರಕವಾಗಿದೆ. ಶಿಕ್ಷಣ ಕ್ಷೇತ್ರವು ಪುನಃ ಸಹಜ ಸ್ಥಿತಿಗೆ ಮರಳುವ ನಿಟ್ಟಿನಲ್ಲಿ ಖಾಸಗಿ ಶಾಲೆಗಳ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುವುದು ಅತ್ಯಗತ್ಯವಾಗಿದೆ ಎಂದು ಮನವಿ ಪತ್ರದಲ್ಲಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದೆ. 

ಒಕ್ಕೂಟದ ಕಾರ್ಯಾಧ್ಯಕ್ಷ ಕೆ.ಸಿ. ಲಿಂಗರಾಜು, ಪ್ರಧಾನ ಕಾರ್ಯದರ್ಶಿ ಶ್ರೀರಾಮ ಮೂರ್ತಿ, ಸಹ ಕಾರ್ಯದರ್ಶಿ ಎ.ಎನ್. ಪ್ರಸನ್ನ ಕುಮಾರ್, ನಿರ್ದೇಶಕರುಗಳಾದ ಶ್ರೀಮತಿ ಸಹನಾ ರವಿ, ಹೆಚ್. ಜಯಣ್ಣ, ವಿಜಯಕುಮಾರ್, ಶ್ರೀಮತಿ ಬಿ. ಅನುಸೂಯ, ಬಸವರಾಜ್ ಮತ್ತಿತರರು ನಿಯೋಗದಲ್ಲಿದ್ದರು.

error: Content is protected !!