ದಾವಣಗೆರೆ, ಮಾ.11- ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ಆಗ್ರಹಿಸಿ ನಗರದ ಸಿದ್ದವೀರಪ್ಪ ಬಡಾವಣೆಯ ಕೆನರಾ ಬ್ಯಾಂಕಿನ ಪ್ರಾದೇಶಿಕ ಕಚೇರಿ ಮುಂಭಾಗ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆ ಮತ್ತು ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ ಮಂಗಳವಾರ ಪ್ರತಿಭಟನಾ ಮತ ಪ್ರದರ್ಶಿಸಿತು.
ಈ ವೇಳೆ ಮಾತನಾಡಿದ ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ ರಾಷ್ಟ್ರೀಯ ಕಾರ್ಯದರ್ಶಿ ಕೆ. ರಾಘವೇಂದ್ರ ನಾಯರಿ, ಬ್ಯಾಂಕುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಶೀಘ್ರ ನೇಮಕಾತಿ ಮಾಡಬೇಕು. ತಾತ್ಕಾಲಿಕವಾಗಿ ಕೆಲಸ ಮಾಡುತ್ತಿರುವ ನೌಕರರನ್ನು ಖಾಯಂಗೊಳಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಕೆನರಾ ಬ್ಯಾಂಕ್ ಅಧಿಕಾರಿಗಳ ಸಂಘಟ ನೆಯ ಪ್ರಾದೇಶಿಕ ಕಾರ್ಯದರ್ಶಿ ಪ್ರದೀಪ್ ಪಾಟೀಲ್ ಮಾತನಾಡಿ, ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಲು ಬ್ಯಾಂಕುಗಳಲ್ಲಿ ನೇಮಕಾತಿ ಮಾಡಿಕೊಳ್ಳಬೇಕು ಹಾಗೂ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ಬರಬೇಕು ಎನ್ನುವುದು ನಮ್ಮ ಹಲವಾರು ವರ್ಷಗಳ ಬೇಡಿಕೆಯಾಗಿದ್ದು, ಈ ಬಗ್ಗೆ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಹಾಗೂ ಕಾರ್ಮಿಕ ಸಂಘಟನೆಗಳ ನಡುವೆ ಈಗಾಗಲೇ ಒಪ್ಪಂದ ಆಗಿದ್ದರೂ ಸಹ ಕೇಂದ್ರ ಸರ್ಕಾರ ಈ ಕುರಿತು ಮೌನ ತಾಳಿದೆ ಎಂದು ದೂರಿದರು.
ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಕಾರ್ಯದರ್ಶಿ ಹೆಚ್.ಎಸ್. ತಿಪ್ಪೇಸ್ವಾಮಿ ಮಾತನಾಡಿ, ಸರ್ಕಾರವು ಈ ಕೂಡಲೇ ಮಧ್ಯ ಪ್ರವೇಶಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಇದೇ ದಿನಾಂಕ 24 ಮತ್ತು 25ರಂದು ಅಖಿಲ ಭಾರತ ಬ್ಯಾಂಕ್ ಮುಷ್ಕರ ನಡೆಯಲಿದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ನಾಯಕರಾದ ಹೆಚ್. ಸುಗೂರಪ್ಪ, ಅನುರಾಧ ಸಂಪನ್ನ ಮುತಾಲಿಕ್, ಪರಶುರಾಮ, ಕೆ. ಗಂಗಾಧರ್, ವಿನೋದ್ ವೆರ್ಣೇಕರ್, ಸಿದ್ದಲಿಂಗೇಶ್ ಕೋರಿ, ಎಸ್. ಪ್ರಶಾಂತ್, ಡಿ.ಹರ್ಷದ್, ಎಲ್. ಗೋಪಾಲಕೃಷ್ಣ, ವಿ.ಆರ್. ಹರೀಶ್, ಟಿ.ಎಸ್. ಅನಿಲ್, ಗೋಪಾಲಕೃಷ್ಣ, ಬಿ.ಎ. ಸುರೇಶ್, ರಶ್ಮಿ ನಾಗರಾಜ್, ಕೆ. ಜಯಲಕ್ಷ್ಮಿ, ವಿಶ್ವಚೇತನ್, ಆಶಾ ವಿದ್ಯಾಸಾಗರ್, ಸುಷ್ಮಾ ಜೋಷಿ, ರೋಹಿಣಿ ಮಂಡ್ರೆ, ಎಲ್. ಲತಾ, ನಾಗರತ್ನಮ್ಮ, ರೇಣುಕಮ್ಮ ಮತ್ತಿತರರಿದ್ದರು.