ನವದೆಹಲಿ/ಬೀಜಿಂಗ್, ಜು. 11 – ಚೀನಾದಲ್ಲಿ ವೈದ್ಯಕೀಯ ಅಧ್ಯಯನ ನಡೆಸುತ್ತಿದ್ದ ಸಾವಿರಾರು ವಿದ್ಯಾರ್ಥಿಗಳು ಈಗ ಅತಂತ್ರರಾಗಿದ್ದಾರೆ. ಕಳೆದ ವರ್ಷ ಕೊರೊನಾ ಹಿನ್ನೆಲೆಯಲ್ಲಿ ವಾಪಸ್ ಬಂದ ವಿದ್ಯಾರ್ಥಿಗಳಿಗೆ, ಇನ್ನೂ ಚೀನಾಗೆ ತೆರಳಲು ಅನುಮತಿ ದೊರೆತಿಲ್ಲ.
ಆನ್‌ಲೈನ್ ತರಗತಿಗಳನ್ನು ಮುಂದುವರೆಸಲಾಗುತ್ತಿದೆ. ಪ್ರಾಯೋಗಿಕ ತರಗತಿಗಳಿಗೆ ಅವಕಾಶ ಇರದ ಕಾರಣ ಅವರ ಶೈಕ್ಷಣಿಕ ಅರ್ಹತೆ ಹಾಗೂ ವೈದ್ಯರಾಗುವ ಭವಿಷ್ಯ ಅತಂತ್ರವಾಗಿದೆ.
ನಾನು ಆನ್‌ಲೈನ್ ತರಗತಿಗೆ ಹಾಜರಾಗುತ್ತಿದ್ದೇನೆ. ಆದರೆ, ಪ್ರಾಯೋಗಿಕ ತರಗತಿಗಳಿಂದ ವಂಚಿತವಾಗಿದ್ದೇನೆ. ಎರಡು ವರ್ಷಗಳ ಕೋರ್ಸ್ ಮುಗಿದಿದೆ. ಆದರೂ, ಪ್ರಾಯೋಗಿಕವಾಗಿ ಅಧ್ಯಯನ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಚೀನಾದ ಕ್ಸಿಯಾನ್ ಜಿಯಾಟೊಂಗ್ ವಿಶ್ವವಿದ್ಯಾನಿಲ ಯದಲ್ಲಿ ಅಧ್ಯಯನ ಮಾಡುತ್ತಿರುವ ದೆಹಲಿಯ ಎರಡನೇ ವರ್ಷದ ವಿದ್ಯಾರ್ಥಿನಿಯೊಬ್ಬರು ಹೇಳಿದ್ದಾರೆ.
ಚೀನಾದ ಹಲವಾರು ಆಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಹೀಗಾಗಿ ಹಲವು ವಿದ್ಯಾರ್ಥಿಗಳು ವಿ.ಪಿ.ಎನ್. ಮೂಲಕ ತರಗತಿಗಳಿಗೆ ಹಾಜರಾಗುತ್ತಿದ್ದಾರೆ.
ಜಾಗತಿಕ ಪ್ರವಾಸ ನಿರ್ಬಂಧಗಳ ಕಾರಣದಿಂದಾಗಿ 2020ರಿಂದಲೂ ವಿದ್ಯಾರ್ಥಿಗಳು ಚೀನಾಗೆ ತೆರಳಲು ಸಾಧ್ಯವಾಗುತ್ತಿಲ್ಲ. 2019ರ ಅಂಕಿ-ಅಂಶಗಳ ಪ್ರಕಾರ, ಭಾರತದ 23 ಸಾವಿರ ವಿದ್ಯಾರ್ಥಿಗಳು ಚೀನಾದ ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಇವರಲ್ಲಿ 21 ಸಾವಿರ ವಿದ್ಯಾರ್ಥಿಗಳು ಎಂ.ಬಿ.ಬಿ.ಎಸ್. ಅಧ್ಯಯನ ಮಾಡುತ್ತಿದ್ದಾರೆ.
ಚೀನಾದ ಹಲವಾರು ದೇಶಗಳ ವಿದ್ಯಾರ್ಥಿಗಳು ವಾಪಸ್ ಬರಲು ಅನುಮತಿ ನೀಡಿದೆ. ಆದರೆ, ಭಾರತದಲ್ಲಿ ಎರಡನೇ ಕೊರೊನಾ ಅಲೆ ಇರುವ ಕಾರಣದಿಂದ ಭಾರತೀಯ ವಿದ್ಯಾರ್ಥಿಗಳ ವಾಪಸಾತಿ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಓಂಕಾರ್ ಮೆಡಿಕಾಮ್ ಕನ್ಸಲ್ಟೆನ್ಸಿಯ ಶಮಿಕ್ ಮಜುಮ್ದಾರ್ ಹೇಳಿದ್ದಾರೆ. ಅವರ ಸಂಸ್ಥೆಯ ವಿದ್ಯಾರ್ಥಿಗಳು ವಿದೇಶದಲ್ಲಿ ಎಂ.ಬಿ.ಬಿ.ಎಸ್. ಕಲಿಯಲು ನೆರವು ಒದಗಿಸುತ್ತಿದೆ. ಚೀನಾ ಚಳಿಗಾಲದ ಒಲಂಪಿಕ್ಸ್ ಸಿದ್ಧತೆ ಯಲ್ಲಿದೆ. ಸೆಪ್ಟೆಂಬರ್ – ಅಕ್ಟೋಬರ್ ವೇಳೆಗೆ ಈ ವಿದ್ಯಾರ್ಥಿ ಗಳು ಚೀನಾಗೆ ತೆರಳಲು ಸಾಧ್ಯವಾಗುವ ಅಂದಾಜಿದೆ ಎಂದವರು ಹೇಳಿದ್ದಾರೆ.
ಕೇಂದ್ರ ಸರ್ಕಾರ ಈ ವಿಷಯದಲ್ಲಿ ಮಧ್ಯ ಪ್ರವೇಶಿಸ ಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೂ ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದಾರೆ.
ಚೀನಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ನೆರವನ್ನೂ ಕೋರಿದ್ದೇವೆ. ಆದರೂ, ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನ್ಯಾಂಟಾಂಗ್ ವೈದ್ಯಕೀಯ ವಿಶ್ವವಿದ್ಯಾನಿಲಯದ ನಾಲ್ಕನೇ ವರ್ಷದ ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ. ಈ ವಿಷಯದ ಬಗ್ಗೆ ಚೀನಾ ಸರ್ಕಾರದ ವಿದೇಶಾಂಗ ಹಾಗೂ ಶಿಕ್ಷಣ ಸಚಿವಾಲಯಗಳ ಹಂತದ ಕಚೇರಿ ಬಳಿ ಹಲವು ಬಾರಿ ಮಾತುಕತೆ ನಡೆಸಲಾಗಿದೆ ಎಂದು ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹೇಳಿಕೆ ನೀಡಿದ್ದ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್.ಎ.ಸಿ.) ಎಂ.ಬಿ.ಬಿ.ಎಸ್.ಗೆ ಆನ್‌ಲೈನ್ ತರಗತಿ ನಡೆಸುವುದು ಸಿಂಧುವಾಗಿದೆ. ಆದರೆ, ಕಾಲೇಜುಗಳು ಪುನರಾರಂಭವಾದಾಗ ಪೂರಕ ಪ್ರಾಯೋಗಿಕ ತರಗತಿಗಳನ್ನು ನಡೆಸಬೇಕು ಎಂದು ತಿಳಿಸಿತ್ತು.
ಆದರೆ, ಹಲವಾರು ರಾಜ್ಯಗಳು ಆನ್‌ಲೈನ್ ಪದವಿಗಳಿಗೆ ಮಾನ್ಯತೆ ನೀಡುವುದಿಲ್ಲ ಎಂದು ಹೇಳುತ್ತಿವೆ. ಇದು ವಿದ್ಯಾರ್ಥಿಗಳ ಕಳವಳಕ್ಕೆ ಕಾರಣವಾಗಿದೆ.