ಜಗಳೂರು, ಫೆ.16 – 57 ಕೆರೆ ತುಂಬಿ ಸುವ ಯೋಜನೆ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿಲ್ಲ ಎಂದು ಸಂಸದ ಜಿ.ಎಂ ಸಿದ್ದೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು
ಹರಿಹರ ತಾಲ್ಲೂಕಿನ ದೀಟೂರು ಬಳಿ 660 ಕೋಟಿ ವೆಚ್ಚದ ಜಗಳೂರು ತಾಲ್ಲೂಕಿನ 57 ಕೆರೆ ತುಂಬಿಸುವ ಯೋಜನೆಯ ಜಾಕ್ ವೆಲ್ ಕಾಮಗಾರಿ ವೀಕ್ಷಿಸಿ ನಂತರ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜಗಳೂರು ತಾಲ್ಲೂಕಿನ ಜನತೆಗೆ ಜೂನ್ ಜುಲೈ ವೇಳೆಗೆ ಮೊದಲ ಹಂತದಲ್ಲಿ 17 ಕೆರೆಗಳಿಗೆ ನೀರು ತುಂಬಿಸುವ ಭರವಸೆ ನೀಡಿದ್ದು. ದೀಟೂರುನಿಂದ ಚಟ್ನಹಳ್ಳಿ ಗುಡ್ಡದ ವರೆಗೆ 31 ಕಿ.ಮೀ ದೂರದ ಪೈಪ್ ಲೈನ್ ಕಾಮಗಾರಿಯಲ್ಲಿ 13.5 ಕಿ.ಮೀ ಕಾಮಗಾರಿ ಬಾಕಿ ಉಳಿದಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ಅಧಿಕಾರಿಗಳು, ಗುತ್ತಿಗೆದಾರರು ನಿರ್ಲಕ್ಷ್ಯ ಮಾಡದೆ ಮಾರ್ಗಮಧ್ಯೆಯಲ್ಲಿನ ಜಮೀನುಗಳಲ್ಲಿ ರೈತರ ಸಂಪೂರ್ಣ ಸಹಕಾರ ಪಡೆದು ಭತ್ತದ ಬೆಳೆ ಬರುವ ತನಕ ಕಾಯದೆ ಬೆಳೆ ಪರಿಹಾರ ಒದಗಿಸಿ ಕಾಮಗಾರಿ ಪೂರ್ಣಗೊಳಿಸಿರಿ ಎಂದು ನಿರ್ದೇಶನ ನೀಡಿದರು.
ಜಗಳೂರು ತಾಲೂಕಿಗೆ ನೀರಾವರಿ ವರದಾನ:- ಶಾಸಕ ಎಸ್ ವಿ ರಾಮಚಂದ್ರ ಅವರ ಕನಸಿನಂತೆ ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯಾಗಿದ್ದು ಜಗಳೂರಿಗೆ 1200 ಕೋಟಿ ಅನುದಾನದಿಂದ 45 ಸಾವಿರ ಎಕರೆ ಹನಿ ನೀರಾವರಿ ಹಾಗೂ 57 ಕೆರೆ ತುಂಬಿಸುವ ಯೋಜನೆಯಿಂದ ನೀರಾವರಿ ಕನಸ್ಸು ನನಸಾಗಲಿದೆ. ಅಂತರ್ಜಲ ಹೆಚ್ಚಳವಾಗಿ, ಫ್ಲೋರೈಡ್ ಮುಕ್ತವಾಗಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದರು.
ಕಳಪೆಯಾದರೆ ಕ್ರಮ:- ರಾಜನಹಳ್ಳಿ 22 ಕೆರೆ ನೀರು ತುಂಬಿಸುವ ಯೋಜನೆ ಕಾಮಗಾರಿ ಕಳಪೆಯಾಗಿದ್ದು ಅಧಿಕಾರಿಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ, ಎಲ್ ಅಂಡ್ ಟಿ ಕಂಪನಿ ಕಪ್ಪುಪಟ್ಟಿಗೆ ಸೇರಿಸಲು ನೀರಾವರಿ ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಲಿಖಿತ ಪತ್ರ ಸಲ್ಲಿಸಿರುವೆ ಎಂದು ಸಂಸದರು ತಿಳಿಸಿದರು.
ಆದರೆ 57 ಕೆರೆ ತುಂಬಿಸುವ ಯೋಜನೆ ಸಿರಿಗೆರೆ ಶ್ರೀಗಳ ಆಶಯದಂತೆ ಕಳಪೆಯಾಗದಂತೆ ನಾನು ಮತ್ತು ಶಾಸಕರು ನಿಗಾವಹಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರತಿ ಹಂತದಲ್ಲಿ ಕಾಮಗಾರಿ ಪ್ರಗತಿಯ ಮೇಲ್ವಿಚಾರಣೆ ನಡೆಸಿದ್ದೇವೆ.ಕಳಪೆ ಕಾಮಗಾರಿಯಾದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.
ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ಜಗಳೂರು ತಾಲ್ಲೂಕಿಗೆ ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ 57 ಕೆರೆ ತುಂಬಿಸುವ ಯೋಜನೆ ಕಾಮಗಾರಿ ಭರದಿಂದ ಸಾಗಿದ್ದು. ಈಗಾಗಲೇ 120 ಕೋಟಿ ಹಣ ಬಿಡುಗಡೆ ಯಾಗಿದೆ. ರಾಜ್ಯದಲ್ಲಿ ಅತಿದೊಡ್ಡ ಜಾಕ್ ವೆಲ್ ಇದಾಗಿದ್ದು 8 ಮೋಟರ್ ಒಂದು ಹೆಚ್ಚುವರಿ ಒಂದು ಮೋಟರ್ ಒಳಗೊಂಡಿದ್ದು ಈ ಯೋಜನೆ ಯಾವ ಕಾರಣಕ್ಕೂ ವಿಫಲವಾಗುವುದಿಲ್ಲ. ನಿರೀಕ್ಷೆಯಂತೆ ಮೊದಲ ಹಂತದಲ್ಲಿ ಜೂನ್ – ಜುಲೈ ಮಾಹೆಯಲ್ಲಿ 17 ಕೆರೆಗಳಿಗೆ ನೀರು ತುಂಬಿಸುವ ಪ್ರಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.
ಈ ನೀರಾವರಿ ಯೋಜನೆಗಳ ಅನುಷ್ಠಾನದಿಂದ ಬರಪೀಡಿತ ತಾಲ್ಲೂಕಿಗೆ ಫ್ಲೋರೈಡ್ ಅಂಶ ಕಡಿಮೆಯಾಗಿ ಶುದ್ದ ಕುಡಿಯುವ ನೀರು ಸಿಗಲಿದೆ. ನೀರಾವರಿ ಸೌಲಭ್ಯ ದೊರೆಯಲಿದ್ದು ರೈತರಿಗೆ ಅನುಕೂಲವಾಗಲಿದೆ ಎಂದರು. ಮೊದಲ ಹಂತದಲ್ಲಿ ಜಗಳೂರು ತಾಲ್ಲೂಕಿನ 11 ಕೆರೆಗಳು ಹರಪನಹಳ್ಳಿ ತಾಲ್ಲೂಕು ಅರಸೀಕೆರೆ ಹೋಬಳಿ 6 ಕೆರೆಗಳು ಭರ್ತಿಯಾಗಲಿವೆ.ಸೆಪ್ಟೆಂಬರ್ ಅಕ್ಟೋಬರ್ 20 ಹಾಗೂ ನವೆಂಬರ್ ಡಿಸೆಂಬರ್ 20 ಸೇರಿದಂತೆ ಮೂರು ಹಂತಗಳಲ್ಲಿ ಒಟ್ಟು 57 ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿ.ಪಂ ಅಧ್ಯಕ್ಷೆ ಶಾಂತಕುಮಾರಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ವೇಣುಗೋಪಾಲರೆಡ್ಡಿ, ಬಿಜೆಪಿ ಮಂಡಲ ಅಧ್ಯಕ್ಷ ಹೆಚ್.ಸಿ.ಮಹೇಶ್ , ಮುಖಂಡರಾದ ಚಟ್ನಹಳ್ಳಿ
ರಾಜಣ್ಣ, ಪ.ಪಂ ನಾಮನಿರ್ದೇಶನ ಸದಸ್ಯ ಬಿ.ಪಿ.ಸುಭಾನ್, ಸೂರ್ಯಕಿರಣ್, ಶಿವಕುಮಾರ್, ಚಂದ್ರನಾಯ್ಕ, ಸುರೇಶ್ ಗೌಡ, ಎಇಇ ಶ್ರೀಧರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.