ರೈತ ಮತ್ತೊಬ್ಬರಿಗೆ ಕೊಡುವವನೇ ಹೊರತು, ಬೇಡುವವನಲ್ಲ

ಬಲ್ಲೂರು ಗ್ರಾಮದಲ್ಲಿನ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ

ದಾವಣಗೆರೆ, ಫೆ.16- ರೈತ ಮತ್ತೊಬ್ಬರಿಗೆ ಕೊಡುವವನೇ ಹೊರತು ಬೇಡುವ ಗುಣದವನಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ತಾಲ್ಲೂಕಿನ ಬಲ್ಲೂರು ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ, ಡಿಸಿಸಿ ಬ್ಯಾಂಕ್ ಆಶ್ರಯದಲ್ಲಿ ನಿನ್ನೆ ಹಮ್ಮಿಕೊಳ್ಳಲಾಗಿದ್ದ ಚಿಂತನ ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರದ ಸೌಲಭ್ಯಗಳನ್ನು ಉಪಯೋಗಿಸಿ ಕೊಂಡು, ಆಧುನಿಕ ಕೃಷಿ ಪದ್ಧತಿಯಿಂದ ಉತ್ತಮ ಫಸಲು ಪಡೆದು ಆರ್ಥಿಕವಾಗಿ ಸದೃಢರಾಗಬೇಕು ಎಂದು ರೈತರಿಗೆ ಕರೆ ನೀಡಿದರು.

ಯಾವ ಕಾರಣಕ್ಕೂ ಆತ್ಮಹತ್ಯೆಯಂತಹ ಕಾರ್ಯಗಳಿಗೆ ಮುಂದಾಗಬೇಡಿ. ಧೈರ್ಯದಿಂದ ಬದುಕಬೇಕು. ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಲು ಜಿಲ್ಲಾಡಳಿತ ಸದಾ ಸಿದ್ಧವಿದೆ ಎಂದು ಭರವಸೆ ನೀಡಿದರು.

ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ರೈತ ಮುಖಂಡ ಬಲ್ಲೂರು ರವಿಕುಮಾರ್, ಇದೊಂದು ಮಾದರಿ ಕಾರ್ಯಕ್ರಮವಾಗಿದ್ದು, ಪ್ರತಿ ಗ್ರಾ.ಪಂ. ವ್ಯಾಪ್ತಿ ಯಲ್ಲೂ ನಡೆಯಬೇಕು. ರೈತರು ಹಾಗೂ ಕೃಷಿ ಕಾರ್ಮಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯ್ತಿ ಸಿಇಒ ಪದ್ಮಾ ಬಸವಂತಪ್ಪ ಮಾತನಾಡಿ, ಗಾಂಧೀಜಿಯವರಂತೆ ಸರಳತೆ, ಸ್ವಚ್ಛತೆ, ಸತ್ಯ, ಪ್ರಾಮಾಣಿಕತೆಯ ಬದುಕನ್ನು ರೂಢಿಸಿಕೊಂಡರೆ ನೆಮ್ಮದಿ ಜೀವನ ಸಾಗಿಸಲು ಸಾಧ್ಯವಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಜೀವನದಲ್ಲಿ ತಾಳ್ಮೆ ಮುಖ್ಯ. ಅನಗತ್ಯವಾಗಿ ಗಲಾಟೆ ಮಾಡಿಕೊಂಡು ಜೀವನ ಹಾಳು ಮಾಡಿಕೊಳ್ಳಬಾರದು. ಸಮಸ್ಯೆ, ಎದುರಾದರೆ 122 ಸಂಖ್ಯೆಗೆ ಕರೆ ಮಾಡುವಂತೆ ಸಲಹೆ ನೀಡಿದರು.

ಅಣಬೇರು ಕುಮಾರಸ್ವಾಮಿ ನಿರೂಪಿಸಿದರು. ರೈತರ ಸಂಘದ ನಾಯಕರುಗಳಾದ ಆರ್.ಎಸ್. ಪ್ರಸಾದ್, ಇಟಗಿ ಬಸವರಾಜಪ್ಪ, ಅಶೋಕ ಗೌಡ, ಬಲ್ಲೂರು ಮಂಜುನಾಥ ಹಾಗೂ ಇತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಕೋಣೆ ಸಂಪೂರ್ಣವಾಗಿ ಹಾಳಾಗಿ, ಮಳೆಗಾಲದಲ್ಲಿ ಸೋರುತ್ತಿದೆ. ಅದನ್ನು ಹೊಸದಾಗಿ ನಿರ್ಮಿಸಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

error: Content is protected !!