ಇತಿ ಮಿತಿ ಮೀರಿದರೆ ಶಿಸ್ತು ಕ್ರಮ: ಮುರುಘಾ ಶರಣರ ಸ್ಪಷ್ಟನೆ
ದಾವಣಗೆರೆ, ಫೆ. 15- ಮುರುಘಾ ಮಠದಲ್ಲಿ ತಮ್ಮ ಇತಿಮಿತಿ ಮೀರಿ ವರ್ತಿಸುವವರಿಗೆ ಶಿಸ್ತಿನ ಕ್ರಮ ಇರುತ್ತದೆ. ಅದರಂತೆ ಮಠದಲ್ಲಿ ಕೆಲಸ ಮಾಡುವ ಹತ್ತು ಜನರು ರಾಜೀನಾಮೆ ನೀಡಿದ್ದಾರೆ ಎಂದು ಚಿತ್ರದುರ್ಗ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ತಿಂಗಳ ಹಿಂದೆ ಮಠಕ್ಕೆ ಸಂಬಂಧಿಸಿದಂತೆ ವದಂತಿಯೊಂದು ಹಬ್ಬಿತ್ತು. ಅದು ದೊಡ್ಡ ಅಪರಾಧಕ್ಕೆ ಅವಕಾಶ ಆಗಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಐತಿಹಾಸಿಕ ಮುರುಘಾಮಠ ಒಂದು ಸಂಸ್ಥೆಯಾಗಿ ಬೆಳೆದು ಬಂದಿದೆ. ಒಂದು ಸಂಸ್ಥೆಯಲ್ಲಿ ಸಾವಿರಾರು ಜನರು ಕಾರ್ಯನಿರ್ವಹಿಸುತ್ತಾರೆ. ಅವರ ಸ್ವಭಾವ ಒಂದೇ ರೀತಿ ಇರುವುದಿಲ್ಲ. ಭಿನ್ನವಾಗಿರುತ್ತದೆ. ಇತಿ ಮಿತಿ ಮೀರಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಮಠಕ್ಕೆ, ಶರಣರಿಗೆ ಸಾಮಾಜಿಕ ಬದ್ಧತೆ ಇದೆ. ಇದರ ಆಧಾರದ ಮೇರೆಗೆ ಮಠ ಕಟ್ಟಲಾಗುತ್ತಿದೆ’ ಮುರುಘಾ ಮಠವನ್ನು ರಕ್ತ ಸಂಬಂಧದಿಂದ ಮುಕ್ತಗೊಳಿಸಲು, ಮಠದ ಘನತೆ ಮತ್ತು ಗೌರವ ಕಾಪಾಡುವ ಉದ್ದೇಶದಿಂದ ಇಂತಹ ಕ್ರಮ ಅನಿವಾರ್ಯ ಎಂದವರು ಹೇಳಿದ್ದಾರೆ.