6,7,8 ಪೂರ್ಣ ತರಗತಿ

6,7,8 ಪೂರ್ಣ ತರಗತಿ - Janathavani

ಫೆ. 22 ರಿಂದ ಆರಂಭ, 1ರಿಂದ 5ನೇ ತರಗತಿ ಆರಂಭದ ಬಗ್ಗೆ ಫೆ.24ರಂದು ನಿರ್ಧಾರ : ಸಚಿವ ಸುರೇಶ್‌ ಕುಮಾರ್‌

ಬೆಂಗಳೂರು, ಫೆ. 16- ಈ ತಿಂಗಳ 22 ರಿಂದ 6 ರಿಂದ 8ನೇ ತರಗತಿಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಕಟಿಸಿದ್ದಾರೆ. 

ಶಾಲೆಗಳನ್ನು ಆರಂಭಿಸುವ ಸಂಬಂಧ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಹಾಗೂ ಶಿಕ್ಷಣ ತಜ್ಞರೊಂದಿಗೆ ಸಮಾಲೋಚನೆ ನಂತರ ಸುದ್ದಿಗೋಷ್ಠಿ ಯಲ್ಲಿ ಸರ್ಕಾರದ ನಿರ್ಧಾರ ಪ್ರಕಟಿಸಿದ್ದಲ್ಲದೆ, 1 ರಿಂದ 5 ನೇ ತರಗತಿಗಳನ್ನು ಆರಂಭಿಸುವ ಸಂಬಂಧ ಇದೇ 24 ರಂದು ಸಭೆ ಸೇರಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.

ಒಂದರಿಂದ 5ನೇ ತರಗತಿಗಳನ್ನು ಆರಂಭಿಸ ಬೇಕೋ ಅಥವಾ ವಿದ್ಯಾಗಮ ಆರಂಭಿಸಬೇಕೋ ಎಂಬ ಬಗ್ಗೆ ಈ ತಿಂಗಳ 24 ಮತ್ತು 25ರಂದು ತಜ್ಞರ ಜೊತೆ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದೇವೆ, ಸದ್ಯದ ಪರಿಸ್ಥಿತಿಯಲ್ಲಿ 1 ರಿಂದ 5ನೇ ತರಗತಿಗಳನ್ನು ಪ್ರಾರಂಭಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದವರು ಹೇಳಿದ್ದಾರೆ.

ಶಾಲೆಗಳನ್ನು ಆರಂಭಿಸುವ ಆತುರವಿಲ್ಲ, ಸದ್ಯಕ್ಕೆ ಆನ್‍ಲೈನ್ ಮತ್ತು ವಿದ್ಯಾಗಮ ಕಾರ್ಯಕ್ರಮ ನಡೆಯುತ್ತಿರುವುದರಿಂದ ಶೈಕ್ಷಣಿಕ ಚಟುವಟಿಕೆಗೆ ಯಾವುದೇ ತೊಂದರೆಯಾಗುವುದಿಲ್ಲ, ಏನೇ ನಿರ್ಧಾರ ಕೈಗೊಂಡರೂ ವಿದ್ಯಾರ್ಥಿಗಳ ಸುರಕ್ಷತೆ ಮೊದಲ ಆದ್ಯತೆ ಎಂದು ಸ್ಪಷ್ಟಪಡಿಸಿದರು.   

ತಜ್ಞರ ಸಲಹೆಯಂತೆ ಈಗಾಗಲೇ 9ರಿಂದ 12 ನೇ ತರಗತಿಗಳು ಆರಂಭಗೊಂಡಿವೆ, ಇದೀಗ 6 ರಿಂದ 8ನೇ ತರಗತಿವರೆಗೂ ಆರಂಭಿಸಲಾಗುವುದು, ಇದುವರೆಗೂ ಈ ತರಗತಿಗಳಿಗೆ ವಿದ್ಯಾಗಮ ಕಲಿಕೆ ಅಡಿಯಲ್ಲಿ ಪಾಠ ಪ್ರವಚನ ನಡೆಯುತ್ತಿವೆ.  ಕೇರಳದಲ್ಲಿ ಕೊರೊನಾ ಸೋಂಕು ದೊಡ್ಡ ಪ್ರಮಾಣದಲ್ಲಿ ಇರುವುದರಿಂದ ಆ ರಾಜ್ಯದ ನಮ್ಮ ಗಡಿ ಭಾಗದಲ್ಲಿ ಮಾತ್ರ 8ನೇ ತರಗತಿ ಮಾತ್ರ ಆರಂಭಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಶಾಲೆಗಳನ್ನು ನಡೆಸಲು ಪೂರ್ಣ ತಯಾರಿ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ವಸತಿ ನಿಲಯಗಳನ್ನು ಆರಂಭಿಸಲು ಸಂಬಂಧ ಪಟ್ಟ ಇಲಾಖೆಗೆ ಮನವಿ ಮಾಡಿಕೊಳ್ಳಲಾಗುವುದು ಎಂದೂ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಅದೇ ರೀತಿ ಸಾರಿಗೆ ಇಲಾಖೆಯ ವಿವಿಧ ನಿಗಮಗಳಿಂದ ಬಸ್‍ಗಳನ್ನು ಹೆಚ್ಚು ಟ್ರಿಪ್ ಓಡಿಸಲು ಕ್ರಮ ಕೈಗೊಳ್ಳಲಾಗುವುದು. 

ಶಾಲೆಗಳ ಆರಂಭಕ್ಕೂ ಮುನ್ನ ಸಂಬಂಧಪಟ್ಟ ಶಿಕ್ಷಕರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು, ಅಲ್ಲದೆ, ಶಾಲೆ ಆರಂಭದ ನಂತರ ಮಕ್ಕಳು ಮತ್ತು ಶಿಕ್ಷಕರಿಗೆ ರಾಂಡಂ ಟೆಸ್ಟ್ ಮಾಡಲಾಗುವುದು, ಮಕ್ಕಳಿಗೆ ಸದ್ಯಕ್ಕೆ ಶಾಲೆಗೆ ಬರುವಂತೆ ಕಡ್ಡಾಯ ನಿಯಮ ಇಲ್ಲ ಎಂದರು. 

ತಜ್ಞರ ಸಲಹಾ ಸಮಿತಿಯು ಪ್ರೌಢಶಿಕ್ಷಣ ಆರಂಭಿಸಲು ಯಾವುದೇ ತೊಂದರೆ ಇಲ್ಲ, ಆದರೆ, ಕೇಂದ್ರ ಸರ್ಕಾರ ನೀಡಿರುವ ಕೊರೊನಾ ನಿಯಮಾವಳಿಗಳು ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಈ ಬಗ್ಗೆ ಅಧಿಕಾರಿಗಳು ಮೇಲುಸ್ತುವಾರಿ ನೋಡಿಕೊಳ್ಳುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ದೊಡ್ಡ ಪ್ರಮಾಣದಲ್ಲಿ ಹರಡುತ್ತಿರುವುದರಿಂದ ರಾಜ್ಯದಲ್ಲೂ ತುಂಬಾ ಎಚ್ಚರಿಕೆ ವಹಿಸುವುದು ಅನಿವಾರ್ಯ, ಆದ್ದರಿಂದ ಪ್ರಾಥಮಿಕ ಶಾಲೆಗಳನ್ನು ಮುಂದಿನ ಸಭೆ ನಂತರ ಆರಂಭಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಕೇಂದ್ರ ಪಠ್ಯಕ್ರಮ ಸಿಬಿಎಸ್‍ಸಿ ಏಪ್ರಿಲ್‍ನಿಂದ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದೆ ಎಂದ ಅವರು, ಮುಂಬರುವ 2021-22ನೇ ಶೈಕ್ಷಣಿಕ ವರ್ಷ ಜುಲೈ 15ರಿಂದ ರಾಜ್ಯಾದ್ಯಂತ ಆರಂಭವಾಗಲಿದೆ, ಇದಕ್ಕಾಗಿ ಎಲ್ಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

error: Content is protected !!