ಅಖಿಲ ಭಾರತ ಕಾಂಗ್ರೆಸ್ ಸೇವಾದಳ ಕಾರ್ಯದರ್ಶಿ ಮತ್ತು ಕರ್ನಾಟಕ ರಾಜ್ಯ ಉಸ್ತುವಾರಿ ಬಲರಾಮ್ ಸಿಂಗ್ ಭದೋರಿಯ
ಹರಿಹರ, ಜು.11- ಕಾಂಗ್ರೆಸ್ ಸೇವಾದಳದ ಸಂಸ್ಥಾಪಕರಲ್ಲೊಬ್ಬರಾಗಿದ್ದ ಡಾ. ನಾರಾಯಣ ಸುಬ್ಬರಾವ್ ಹರ್ಡೀಕರ್ ಹುಟ್ಟೂರು ಹಾವೇರಿ ಜಿಲ್ಲೆಯ ತಿಳುವಳ್ಳಿಯಿಂದ ಹೊಸ ಜನಾಂದೋಲನ ಪ್ರಾರಂಭಿಸಲು ತೀರ್ಮಾನಿಸಲಾಗುತ್ತಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸೇವಾದಳ ಕಾರ್ಯದರ್ಶಿ ಮತ್ತು ಕರ್ನಾಟಕ ರಾಜ್ಯ ಉಸ್ತುವಾರಿ ಬಲರಾಮ್ ಸಿಂಗ್ ಭದೋರಿಯ ತಿಳಿಸಿದ್ದಾರೆ.
ತಿಳುವಳ್ಳಿಗೆ ತೆರಳುವ ಮಾರ್ಗ ಮಧ್ಯೆ ನಗರದ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದ ಅವರು ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು.
ಸೇವಾದಳವು 98 ವರ್ಷ ಪೂರೈಸಿದ್ದು, ಶತಮಾನದತ್ತ ಸಾಗುತ್ತಿದೆ. ಈ ಸಂದರ್ಭದಲ್ಲಿ ಹರ್ಡೀಕರ್ ಹುಟ್ಟೂರು ತಿಳುವಳ್ಳಿಯಿಂದ ಹೊಸ ಜನಾಂದೋಲನ ಜೊತೆಗೆ ಪಕ್ಷ ಪುನರ್ಮನನ ಮಾಡಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಸೇವಾದಳ ಕರ್ನಾಟಕ ರಾಜ್ಯದೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಮುಖ್ಯವಾಗಿ ಹರ್ಡೀಕರ್ ಹುಟ್ಟಿದ ತಿಳುವಳ್ಳಿ, ಅವರ ಕರ್ಮಭೂಮಿ ಬೆಳಗಾವಿ ಜಿಲ್ಲೆಯ ಘಟಪ್ರಭಾ ಹಾಗೂ ಧಾರವಾಡಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗುವುದು. ಅದೇ ಕಾರಣಕ್ಕಾಗಿ ಹರ್ಡೀ ಕರ್ ಜನ್ಮಸ್ಥಳ ತಿಳುವಳ್ಳಿಗೆ ತಾವು ಭೇಟಿ ಮಾಡುತ್ತಿರುವುದಾಗಿ ಅವರು ತಿಳಿಸಿದರು.
ಹುಬ್ಬಳ್ಳಿ ಧಾರವಾಡ ಭಾಗದಲ್ಲಿ ಒಂದು ಸೇವಾದಳ ಶತಮಾನ ಸ್ಮಾರಕ ಕಟ್ಟಡ ನಿರ್ಮಾಣಕ್ಕೂ ಸಹ ಆಲೋಚನೆ ಮಾಡಿದ್ದು, ಸುಸಜ್ಜಿತವಾದ ಸೇವಾದಳದ ಇತಿಹಾಸ ತಿಳಿಸುವ ಭವ್ಯ ಕಟ್ಟಡ ನಿರ್ಮಾಣಕ್ಕೆ ಚಿಂತನೆ ನಡೆದಿದೆ ಎಂದರು.
ಇದೇ ವೇಳೆ ಅವರು ಉತ್ತರ ಕರ್ನಾಟಕ ಭಾಗದ ಉಮಾಬಾಯಿ ಕುಂದಾಪುರ, ದುರ್ಗಾಬಾಯಿ ದೇಶಮುಖ್, ಡಾ. ಸಾವಿತ್ರಿ ಬಾಯಿ ಮಹಾಜನ್ ಸೇರಿದಂತೆ ಅನೇಕ ಹಿರಿಯರನ್ನು ನೆನಪು ಮಾಡಿಕೊಂಡರು. ಹುಬ್ಬಳ್ಳಿ – ಧಾರವಾಡ ನಗರಗಳು ಸೇವಾದಳ ದೊಂದಿಗೆ ಆತ್ಮೀಯ ಸಂಬಂಧವನ್ನು ಹೊಂದಿರುವುದಾಗಿ ತಿಳಿಸಿದರು.
ಸೇವಾದಳ ಶತಮಾನೋತ್ಸವ ಕಾರ್ಯ ಕ್ರಮವು ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಮುಖ್ಯವಾಗಿ ನಡೆಯಲಿದೆ. ಅಲ್ಲದೇ ದೇಶದಾದ್ಯಂತ ನಡೆಯುತ್ತದೆ. ಆ ನಿಟ್ಟಿನಲ್ಲಿ ಕಾರ್ಯಕ್ರಮದ ರೂಪು – ರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಇಂದಿನ ಯುವ ಪೀಳಿಗೆಗೆ ಸೇವಾ ದಳವನ್ನು ಸಂಪೂರ್ಣ ಪರಿಚಯಿಸುವ ಕೆಲಸವನ್ನೂ ಸಹ ಮಾಡಲಾಗುವುದು
ಎಂದು ಅವರು ವಿವರಿಸಿದರು.
ಸೇವಾದಳ ಸಂಸ್ಥೆಯು ಕಾಂಗ್ರೆಸ್ಸಿನ ಮೂಲ ಸಿದ್ಧಾಂತವಾಗಿದ್ದು, ಅದರಿಂದಲೇ ಕಾಂಗ್ರೆಸ್ ಹುಟ್ಟು ಹಾಕಲಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ನಾಗಪುರದ ಕೇಂದ್ರೀಯ ಕಾರಾಗೃಹದಲ್ಲಿ ಚಟುವಟಿಕೆಗಳು ಪ್ರಾರಂಭವಾಗಿ ಅಲ್ಲಿಯೇ ಅದರ ಕಾರ್ಯಕ್ರಮಗಳನ್ನು ಸಿದ್ಧಪಡಿಸಿಕೊಂಡು ಮುಂದೆ ಆರಂಭಿಸಲಾಯಿತು. ಪ್ರಥಮ ಅಧ್ಯಕ್ಷರಾಗಿ ಜವಾಹರಲಾಲ್ ನೆಹರು ಆಯ್ಕೆಯಾಗಿದ್ದರು ಎಂದು ಭದೋರಿಯ ಅವರು ಇತಿಹಾಸವನ್ನು ಮೆಲುಕು ಹಾಕಿದರು.
ಈ ಸಮಯದಲ್ಲಿ ಸೇವಾದಳ ಕಾರ್ಯಕಾರಿ ಮುಖ್ಯ ಸಂಘಟಕ ವಿ.ವಿ.ತುಳಸಿಗೇರಿ, ಉಪಾಧ್ಯಕ್ಷರುಗಳಾದ ಕೆ.ಬಿ.ವಿನಾಯಕ ಮೂರ್ತಿ, ಹನುಮಂತ ರಾವ್ ಜವಳಿ, ಪ್ರಧಾನ ಕಾರ್ಯದರ್ಶಿ
ಡಾ.ವಿಶ್ವನಾಥ್ ಚಿಂತಾಮಣಿ, ಸಂಯೋಜಕ ಚಿನ್ಮಯ.ಎಂ.ಕಲ್ಮಠ, ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಗೋವಿಂದ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.