ಎಸ್‌ಟಿ ಹೋರಾಟ ಬಿಡೆವು

ಬೆಂಗಳೂರು, ಫೆ. 7 – ಕುರುಬ ಸಮುದಾಯಕ್ಕೆ ಎಸ್.ಟಿ. ಮೀಸಲಾತಿ ಸಿಗುವ ತನಕ ನಿರಂತರ ಹೋರಾಟ ನಡೆಸುವ ಬದ್ಧತೆಯೊಂದಿಗೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಅವರು ಕಾಗಿನೆಲೆಯಿಂದ ಆರಂಭಿಸಿದ ಪಾದಯಾತ್ರೆ, ಬೃಹತ್ ಸಮಾವೇಶದೊಂದಿಗೆ ತೆರೆ ಕಂಡಿದೆ.

ಕಾಗಿನೆಲೆಯಿಂದ ಆರಂಭವಾಗಿದ್ದ ಶ್ರೀಗಳ ಪಾದಯಾತ್ರೆ, ಬೆಂಗಳೂರಿಗೆ ತಲುಪಿ ಮಾದನಾಯಕನ ಹಳ್ಳಿಯಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ರಾಜ್ಯ ಸರ್ಕಾರ ಕೂಡಲೇ ಎಸ್ಟಿ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಹಕ್ಕೊತ್ತಾಯ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನಿರಂಜನಾಂದ ಪುರಿ ಶ್ರೀಗಳು, ನಮ್ಮ ಹೋರಾಟ ಯಾರ ಪರವೂ ಅಲ್ಲ – ವಿರುದ್ಧವೂ ಅಲ್ಲ. ಯಾವ ಪಕ್ಷದ ಪರ ಇಲ್ಲವೇ ವಿರುದ್ಧವಲ್ಲ. ಕೇವಲ ಎಸ್‌ಟಿ ಹಕ್ಕು ಪಡೆಯಲು ನಮ್ಮ ಹೋರಾಟ ಎಂದರು.

ನಾವು ಬೇರೆಯರವಂತೆ ಬ್ಲಾಕ್‌ಮೇಲ್‌ ಮಾಡುವವರಲ್ಲ. ನಾವು ಪ್ರೀತಿಯಿಂದ ಬೇಡುತ್ತಿದ್ದೇವೆ, ನಾಡ ದೊರೆಯಾಗಿ ಅದೇ ಪ್ರೀತಿಯಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ. ಈ ವಿಚಾರವಾಗಿ ನಾವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ ಎಸ್‌ಟಿ ಹಕ್ಕು ಪಡೆಯುತ್ತೇವೆ ಎಂದು ಶ್ರೀಗಳು ತಿಳಿಸಿದರು.

ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಬಂದಿದ್ದ ಕಂದಾಯ ಸಚಿವ ಆರ್.ಅಶೋಕ್ ಅವರು ಕುರುಬ ರನ್ನು ಎಸ್ ಟಿ ಪಟ್ಟಿಗೆ ಸೇರ್ಪಡೆ ಮಾಡಬೇಕೆನ್ನುವ ಮನವಿ ಪತ್ರವನ್ನು ಸ್ವೀಕರಿಸಿದರು. ಸಮಾವೇಶದಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಎಸ್‌ಟಿ ಮೀಸಲಾತಿ ಪಡೆಯುವ ಸಲುವಾಗಿ ಕೊನೆಯವರೆಗೂ ಕಾಗಿನೆಲೆ ಶ್ರೀಗಳ ಜೊತೆ ಇರುವುದಾಗಿ ತಿಳಿಸಿದರು.

ಜೆಡಿಎಸ್‌ ಮುಖಂಡ ಬಂಡೆಪ್ಪ ಕಾಶಂಪುರ ಮಾತನಾಡಿ, ಕುರುಬರನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ತನಕ ಹೋರಾಟ ನಿರಂತರವಾಗಿ ಮುಂದುವರೆಯಲಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡ ಹೆಚ್.ಎಂ. ರೇವಣ್ಣ ಮಾತನಾಡಿ, ಇದು ಐತಿಹಾಸಿಕ ಹೋರಾಟದ ಆರಂಭ. ಕುರುಬರನ್ನು ಎಸ್‌ಟಿ ಪಟ್ಟಿಗೆ ಸೇರಿಸುವವರೆಗೆ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.

ಹೊಸದುರ್ಗ ಶಾಖಾಮಠದ ಶ್ರೀ ಈಶ್ವರನಾಂದಪುರಿ ಸ್ವಾಮೀಜಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮ್ಮ ಹೋರಾಟವನ್ನು ಲಘುವಾಗಿ ತೆಗೆದುಕೊಳ್ಳಬಾರದು. ನಮಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದರು.

ಕುರುಬರ ಎಸ್‌ಟಿ ಹೋರಾಟ ಸಮಿತಿಯ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ ಮಾತನಾಡಿ, ಕುರುಬರ ಸಮನಾಂತರ ಪಂಗಡಗಳನ್ನು ಈಗಾಗಲೇ ದೇಶದ ವಿವಿಧ ರಾಜ್ಯಗಳಲ್ಲಿ ಎಸ್‌ಟಿ ಪಟ್ಟಿಗೆ ಸೇರಿಸಲಾಗಿದೆ.ಅದನ್ನು ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಿಗೂ ವಿಸ್ತರಿಸಬೇಕು. ಮುಖ್ಯಮಂತ್ರಿ ಇದಕ್ಕೆ ಶಿಫಾರಸ್ಸು ಮಾಡಬೇಕು ಎಂದು ಆಗ್ರಹಿಸಿದರು.

ತೋಟಗಾರಿಕೆ ಸಚಿವ ಆರ್. ಶಂಕರ್ ಮಾತನಾಡಿ, ಶೀಘ್ರ ಕುರುಬರನ್ನು ಎಸ್ ಟಿ ಪಟ್ಟಿಗೆ ಸೇರಿಸಬೇಕು.ಎಸ್ಟಿ ಪಟ್ಟಿಗೆ ಸೇರಿಸಿದರೆ ಕುರುಬರು ಬಿಜೆಪಿ ಪಕ್ಷದೊಂದಿಗೆ ಇರಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್, ನಮ್ಮ ಸಮುದಾಯದ ಒಬ್ಬರನ್ನು ಮುಖ್ಯಮಂತ್ರಿಯಾಗಿ ಮಾಡಲಾಯಿತು. ಆದರೆ, ಅವರೇ ನಮ್ಮ ಸಮಾವೇಶಕ್ಕೆ ಬಂದಿಲ್ಲ. ಇದರಿಂದ ನಮಗೆ ನೋವಾಗಿದೆ. ಅವರಿಗಾಗಿ ತನು, ಮನ, ಧನ ಅರ್ಪಿಸಲಾಗಿತ್ತು. ಇದು ಯಾವುದೇ ರಾಜಕೀಯ ಅಜೆಂಡಾ ಅಲ್ಲ. ನಮ್ಮದು ಸಮುದಾಯ ಹೋರಾಟ ಎಂದು ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಸಮಾವೇಶದಲ್ಲಿ ಭಾಗವಹಿಸಲು ಲಕ್ಷಾಂತರ ಸಂಖ್ಯೆಯಲ್ಲಿ ಜನ ಬಂದಿದ್ದರಿಂದ ತುಮಕೂರು ರಸ್ತೆಯಲ್ಲಿ ಜನದಟ್ಟಣೆ ಹೆಚ್ಚಾಗಿ ಕೆಲ ಸಮಯ ಟ್ರಾಫಿಕ್ ಜಾಮ್‌ ಉಂಟಾಗಿತ್ತು. ಪೊಲೀಸರು ಸಾರ್ವಜನಿಕರು ಬದಲಿ ಮಾರ್ಗಗಳನ್ನು ಬಳಸುವಂತೆ ಸೂಚನೆ ನೀಡಿದ್ದರು.

error: Content is protected !!