ಹರಿಹರ, ಏ.9- ತಾಲ್ಲೂಕಿನ ರೈತರಿಗೆ ಕಳಪೆ ಗುಣಮಟ್ಟದ ಬೀಜ ಮತ್ತು ರಸಗೊಬ್ಬರಗಳ ವಿತರಣೆಯಿಂದಾಗಿ ರೈತರ ಬದುಕು ದುಸ್ಥಿತಿಗೆ ಬಂದಿದ್ದು, ಈ ಕೂಡಲೇ ಸರಿಪಡಿಸದಿದ್ದರೆ ಇದಕ್ಕೆ ಸಂಬಂಧಿಸಿದ ವಿವಿಧ ಇಲಾಖೆಯ ಅಧಿಕಾರಿಗಳನ್ನು ಕರ್ತವ್ಯದಿಂದ ವಜಾಗೊಳಿಸುವಂತೆ ಜಿಲ್ಲಾಧಿಕಾರಿಗೆ ತಿಳಿಸಲಾಗುವುದು ಎಂದು ತಾ.ಪಂ. ಅಧ್ಯಕ್ಷ ಆದಾಪುರದ ವೀರಭದ್ರಪ್ಪ ಹೇಳಿದರು.
ನಗರದ ತಾ.ಪಂ. ಕಚೇರಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತರಿಗೆ ವಿತರಿಸುವ ಬೀಜ, ಔಷಧಿ, ರಸಗೊಬ್ಬರ, ಕೀಟನಾಶಕ ಮತ್ತು ಪ್ಲಾಸ್ಟಿಕ್ ವಸ್ತುಗಳು ಗುಣಮಟ್ಟವನ್ನು ಕಳೆದುಕೊಂಡಿದ್ದು, ಅವುಗಳನ್ನು ವಿತರಣೆ ಮಾಡುವುದರಿಂದ ರೈತರಿಗೆ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ. ಗುಣಮಟ್ಟ ಕಡಿಮೆ ಆದಾಗ ಇಳುವರಿ ಕಡಿಮೆ ಪ್ರಮಾಣದಲ್ಲಿ ಬರುವುದರಿಂದ ರೈತರು ಸಾಲದ ಸುಳಿಗೆ ಸಿಲುಕಿ, ಅನಿವಾರ್ಯವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಎದುರಾಗಲಿದೆ. ರೈತರಿಗೆ ಸಂಬಂಧಿಸಿದ ಕೃಷಿ, ಪಶು, ತೋಟಗಾರಿಕೆ, ಮೀನು ಸೇರಿದಂತೆ ಹಲವಾರು ಇಲಾಖೆಯ ಅಧಿಕಾರಿಗಳು ಬಹಳ ಜವಾಬ್ದಾರಿಯಿಂದ ತಮ್ಮ ಕರ್ತವ್ಯ ನಿಭಾಯಿಸಬೇಕು. ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸದ ಅಧಿಕಾರಿಗಳನ್ನು ಕೂಡಲೇ ಸರ್ಕಾರಿ ಕೆಲಸದಿಂದ ವಜಾ ಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗುತ್ತದೆ ಎಂದು ಹೇಳಿದರು.
ತಾ.ಪಂ. ಸಭೆಗೆ ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಕಾಟಾಚಾರಕ್ಕೆ ಬಂದು ಹೋಗುವುದನ್ನು ರೂಢಿ ಮಾಡಿಕೊಂಡಿ ದ್ದಾರೆ. ಅಧಿಕಾರಿಗಳು ಇದನ್ನು ಕೈ ಬಿಡಬೇಕು. ಸರ್ಕಾರದಿಂದ ಸಾರ್ವಜನಿಕರಿಗೆ ಅನುಕೂಲ ವಾಗಲಿ ಎಂದು ಆನ್ಲೈನ್ ವ್ಯವಸ್ಥೆ ಜಾರಿಗೆ ತಂದಿದ್ದು, ಇದು ಬಂದ ನಂತರ ಎಲ್ಲಾ ಇಲಾಖೆಯ ಕೆಲಸ ಕಾರ್ಯಗಳು ಅಧೋಗತಿ ಯತ್ತ ಸಾಗುತ್ತಿವೆ ಎಂದು ಹೇಳಿದರು.
ತಾ.ಪಂ. ಸದಸ್ಯ ಸಿರಿಗೆರೆ ಕೊಟ್ರಪ್ಪ ಗೌಡ್ರು ಮಾತನಾಡಿ, ತಾಲ್ಲೂಕಿನಲ್ಲಿ ಇರುವ ನ್ಯಾಯಬೆಲೆ ಅಂಗಡಿಯಲ್ಲಿ ಗುಣಮಟ್ಟದ ಆಹಾರ ಪದಾರ್ಥಗಳನ್ನು ವಿತರಣೆ ಮಾಡುತ್ತಿಲ್ಲ. ನ್ಯಾಯಬೆಲೆ ಅಂಗಡಿಗೆ ನೀಡುವ ಅಕ್ಕಿಯನ್ನು ಶ್ರೀಮಂತ ವರ್ಗದವರು ತಿನ್ನುವುದಿಲ್ಲ. ಬಡವರು ಹೆಚ್ಚು ತಿನ್ನುವುದರಿಂದ ಗುಣಮಟ್ಟದ ವಸ್ತುಗಳನ್ನು ನೀಡುವುದಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಹೇಳಿದರು.
ಸರ್ವೇ ಇಲಾಖೆ ಅಧಿಕಾರಿಗಳನ್ನು ಮಾತನಾಡಿಸುವ ಹಾಗೆೇಯೇ ಇಲ್ಲ. ಹಲವು ದಿನಗಳ ಕೆಳಗೆ ಬಿದ್ದ ಬಾರಿ ಮಳೆಯಿಂದಾಗಿ ರೈತರ ಬೆಳೆ ಹಾನಿ ಹೆಚ್ಚಿನ ಪ್ರಮಾಣದಲ್ಲಿ ಆಗಿತ್ತು. ಅದನ್ನು ಸರ್ವೆ ಮಾಡಿ ಕಳಿಸಿದಾಗ ಕೆಲವು ವ್ಯಕ್ತಿಗಳಿಗೆ ಮಾತ್ರ ಪರಿಹಾರ ನೀಡಿದ್ದು, ಇನ್ನೂ ನೂರಾರು ರೈತರಿಗೆ ಸರ್ಕಾರ ಪರಿಹಾರವನ್ನು ನೀಡಿರುವುದಿಲ್ಲ ಎಂದರು.
ತಾ.ಪಂ. ಸದಸ್ಯ ಬಸವಲಿಂಗಪ್ಪ ಮಾತನಾಡಿ, ತಾಲ್ಲೂಕಿನ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಇ-ಸೊತ್ತು ನೀಡುತ್ತಿಲ್ಲ. ಕೆಲವು ಬಡಾವಣೆಯಲ್ಲಿ ವಿದ್ಯುತ್, ನೀರು, ಚರಂಡಿ ನಿರ್ಮಾಣ ಮಾಡಿದ್ದರು ಸಹ ಇ-ಸೊತ್ತು ನೀಡುತ್ತಿಲ್ಲ. ಇದರಿಂದಾಗಿ ಗ್ರಾಮದ ಜನರಿಗೆ ಬಹಳ ದೊಡ್ಡ ಪ್ರಮಾಣದಲ್ಲಿ ತೊಂದರೆ ಆಗುತ್ತಿದೆ. ಇದನ್ನು ಸರಿಪಡಿಸಿ ಎಂದರು. ತಾಲ್ಲೂಕಿನಲ್ಲಿ ಬಡವರಿಗಿಂತ ಶ್ರೀಮಂತ ವ್ಯಕ್ತಿಗಳಿಗೆ ಹೆಚ್ಚಾಗಿ ಪಡಿತರ ಚೀಟಿಯನ್ನು ವಿತರಣೆ ಮಾಡಲಾಗಿದ್ದು, ಅವುಗಳನ್ನು ಕೂಡಲೇ ರದ್ದು ಮಾಡಬೇಕೆಂದು ಹೇಳಿದರು.
ಕೃಷಿ ಇಲಾಖೆಯ ಎಇಇ ವಿ.ಪಿ. ಗೋವರ್ಧನ್ ಮಾತನಾಡಿ, ಎಲ್ಲಾ ರೈತರು ಕೃಷಿ, ಪಶು, ಕಂದಾಯ, ತೋಟಗಾರಿಕೆ ಇಲಾಖೆಯಲ್ಲಿ ನೋಂದಣಿ ಮಾಡಿಸಬೇಕು. ಒಟ್ಟು 62 ಸಾವಿರ ರೈತರಲ್ಲಿ 42 ಸಾವಿರ ರೈತರು ಮಾತ್ರ ನೋಂದಣಿ ಮಾಡಿದ್ದು, ಉಳಿದ 19 ಸಾವಿರ ರೈತರು ನೋಂದಣಿ ಮಾಡಿಸಿ, ಮಳೆ ಹಾನಿಯಾದ ಸಮಯದಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಜಂಟಿಯಾಗಿ ಸರ್ವೆ ಮಾಡಲಾಗಿತ್ತು. ಫಲಾನುಭವಿಗಳು ಸರಿಯಾದ ದಾಖಲೆಗಳನ್ನು ನೀಡಿ ಪರಿಹಾರ ಪಡೆಯುವಂತೆ ತಿಳಿಸಿದರು.
ಇಓ ಗಂಗಾಧರನ್ ಮಾತನಾಡಿ ಗ್ರಾಮದ ಹೊರಭಾಗದಲ್ಲಿ ಇರುವ ಮನೆಗಳಿಗೆ ಇ-ಸೊತ್ತು ನೀಡುವುದಕ್ಕೆ ಬರುವುದಿಲ್ಲ. ಆದರೆ ಸರ್ಕಾರದ ಹೆಚ್ಚುವರಿ ಹಣದಲ್ಲಿ ಅಲ್ಲಿ ವಾಸಿಸುವ ಜನರಿಗೆ ವಿದ್ಯುತ್, ನೀರು, ಚರಂಡಿ, ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ನೀಡಬಹುದು ಎಂದು ಸರ್ಕಾರದ ಆದೇಶ ಕುರಿತು ತಿಳಿಸಿದರು.
ಈ ಸಂದರ್ಭದಲ್ಲಿ ತಾ.ಪಂ. ಉಪಾಧ್ಯಕ್ಷೆ ಶಾಂತಮ್ಮ ಗದಿಗೆಪ್ಪ, ಸ್ಥಾಯಿ ಸಮಿತಿ ಸದಸ್ಯ ಮಹಾಂತೇಶ್, ಸದಸ್ಯರಾದ ಲಕ್ಷ್ಮಿ ಮಹಾಂತೇಶ್ ರಾಜನಹಳ್ಳಿ, ವಿಶಾಲಾಕ್ಷಿ ಕೊಟ್ರೇಶ್, ಭಾಗ್ಯಲಕ್ಷ್ಮಿ, ರತ್ನಮ್ಮ ರಂಗಪ್ಪ, ಅಧಿಕಾರಿಗಳಾದ ಬಿಇಓ ಬಸವರಾಜಪ್ಪ, ರಂಗಪ್ಪ, ರೇಖಾ, ನಿರ್ಮಲ ಇನ್ನಿತರರು ಹಾಜರಿದ್ದರು.