ದಾವಣಗೆರೆ, ಫೆ. 4- ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹರಿಹರ ತಾಲ್ಲೂಕಿನ ನಿಖಿಲ್ ಕೊಂಡಜ್ಜಿ 1,838 ಮತಗಳನ್ನು ಗಳಿಸಿ ಆಯ್ಕೆಯಾಗಿದ್ದಾರೆ.
ನಗರದ ಎಂ.ಎಲ್.ಹೆಚ್. ಸಾಗರ್ 1,785 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಹೊನ್ನಾಳಿಯ ಹೆಚ್.ಎಸ್. ರಂಜಿತ್ (1012), ದಾವಣಗೆರೆಯ ಮುಜಾಹಿದ್ ಪಾಷಾ (890), ಖಾಲಿದ್ ಪೈಲ್ವಾನ್ (491), ಮಹಮ್ಮದ್ ವಾಜೀದ್ (465), ಮೊಹಮ್ಮದ್ ಸಿದ್ದೀಕ್ (133), ಜೆ.ಹೆಚ್. ವಿನಯಕುಮಾರ್ (116), ಮೊಹಮ್ಮದ್ ಇಮ್ರಾನ್ (94) ಪ್ರಧಾನ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದಾರೆ. ಶಂಭು ಅತಿ ಕಡಿಮೆ ಮತ ಪಡೆದು ಸಮಿತಿಯಿಂದ ಹೊರಗುಳಿದಿದ್ದಾರೆ.
ಆನ್‌ಲೈನ್ ಮತದಾನ: 3 ವರ್ಷಗಳ ಅವಧಿಗೆ ನಡೆಯುವ ಚುನಾವಣಾ ಪ್ರಕ್ರಿಯೆ ಈ ಬಾರಿ ಸಂಪೂರ್ಣ ಆಲ್‌ಲೈನ್ ಮತದಾನದ ಮೂಲಕ ನಡೆದಿತ್ತು. ಐವೈಸಿ (ಇಂಡಿಯನ್ ಯೂತ್ ಕಾಂಗ್ರೆಸ್) ಆಪ್ ಸಿದ್ಧಗೊಂಡಿತ್ತು. ಮತದಾನ ಮಾಡಲು ಅರ್ಹರಾಗಿದ್ದ ಯುವ ಕಾಂಗ್ರೆಸ್ ಸದಸ್ಯರು ತಮ್ಮ ಮೊಬೈಲ್ ಮೂಲಕವೇ ಮತದಾನ ಮಾಡಿದ್ದರು.
ಪಕ್ಷದೊಳಗಿನ ಹುದ್ದೆಗಾಗಿ ಸ್ವಪಕ್ಷೀಯ ನಾಯಕರೇ ಎದುರಾಳಿಗಳಾಗಿ ಸ್ಪರ್ಧಿಸಿದ್ದ ಈ ಚುನಾವಣೆಯು ಕಳೆದ ಜನವರಿ 12 ರಂದು ನಡೆದಿತ್ತು. ಜಿಲ್ಲಾ ಘಟಕದ ಅಧ್ಯಕ್ಷ ಹುದ್ದೆಗೆ 10 ಮಂದಿ ಸ್ಪರ್ಧೆ ಮಾಡಿದ್ದರೂ ಅವರು ಮತ ಪಡೆಯುವ ಸಂಖ್ಯೆಗೆ ಅನುಗುಣವಾಗಿ ಉಪಾಧ್ಯಕ್ಷ, ಕಾರ್ಯದರ್ಶಿ ಹುದ್ದೆಗಳನ್ನು ಪಡೆದಿದ್ದಾರೆ.
ಅತೀ ಹೆಚ್ಚು ಮತ ಪಡೆದವರು ಜಿಲ್ಲಾ ಘಟಕದ ಅಧ್ಯಕ್ಷರಾದರೆ, 2ನೇ ಹೆಚ್ಚು ಮತ ಪಡೆದವರು ಉಪಾಧ್ಯಕ್ಷರಾಗುತ್ತಾರೆ. 3ನೇ ಸ್ಥಾನ ಪಡೆದವರು ಪ್ರಧಾನ ಕಾರ್ಯದರ್ಶಿಯಾಗುತ್ತಾರೆ. ಜಿಲ್ಲಾ ಘಟಕದಲ್ಲಿ 7 ಪ್ರಧಾನ ಕಾರ್ಯದರ್ಶಿ ಸ್ಥಾನಗಳಿವೆ.