ಬಿಟ್ಟು ಹೋಗಿರುವ ಮಕ್ಕಳು – ಮಹಿಳೆಯರಿಗೆ ಲಸಿಕೆ

ಫೆಬ್ರವರಿ ಮಾರ್ಚ್ ಮಾಹೆಗಳಲ್ಲಿ ಇಂದ್ರಧನುಷ್ ಲಸಿಕಾ ಅಭಿಯಾನ

– ಶ್ರೀಮತಿ ಪದ್ಮಾ ಬಸವಂತಪ್ಪ, ಸಿಇಓ, ಜಿಲ್ಲಾ ಪಂಚಾಯತ್

ದಾವಣಗೆರೆ, ಫೆ.4 – ಸಾರ್ವತ್ರಿಕ ಲಸಿಕೆ ಕಾರ್ಯಕ್ರಮದಲ್ಲಿ ಬಿಟ್ಟು ಹೋದ ಮಕ್ಕಳು ಮತ್ತು ಗರ್ಭಿಣಿಯರನ್ನು ಗುರುತಿಸಿ ಲಸಿಕೆ ಹಾಕಿಸುವ ತೀವ್ರಗೊಂಡ ಇಂದ್ರಧನುಷ್ ಲಸಿಕಾ ಅಭಿಯಾನವನ್ನು ಫೆಬ್ರವರಿ ಮತ್ತು ಮಾರ್ಚ್ ಮಾಹೆಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಪದ್ಮಾ ಬಸವಂತಪ್ಪ ತಿಳಿಸಿದ್ದಾರೆ.

ಇಲ್ಲಿನ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಇಂದು ಏರ್ಪಡಿಸಲಾಗಿದ್ದ ತೀವ್ರಗೊಂಡ ಇಂದ್ರಧನುಷ್ ಲಸಿಕಾ ಅಭಿಯಾನ 3.0 (ಇಂಟೆನ್ಸಿಫೈಡ್ ಮಿಷನ್ 3.0) ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಾತನಾಡಿದರು.

ದಾವಣಗೆರೆ ಮತ್ತು ಹರಿಹರ ನಗರ ಪ್ರದೇಶದಲ್ಲಿ ಮುಖ್ಯವಾಗಿ ವಲಸೆ ಪ್ರದೇಶಗಳು, ಕೊಳಚೆ ಪ್ರದೇಶಗಳಲ್ಲಿ ಸಾರ್ವತ್ರಿಕ ಲಸಿಕೆ ಯಿಂದ ಬಿಟ್ಟು ಹೋದ 02 ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿಯರನ್ನು ಗುರುತಿಸಿ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಈಗಾಗಲೇ ಕ್ರಿಯಾ ಯೋಜನೆ ಸಿದ್ದವಾಗಿದ್ದು, ಈ ಕಾರ್ಯ ಕ್ರಮವನ್ನು ನಿಗದಿತ ಗುರಿ ಸಾಧಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಆರ್‍ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ ಮಾತನಾಡಿ, ರಾಜ್ಯದಲ್ಲಿ ಇಂಟೆನ್ಸಿಫೈಡ್ ಮಿಷನ್ 3.0 ಕಾರ್ಯಕ್ರಮದಲ್ಲಿ ರಾಜ್ಯದ 13 ಜಿಲ್ಲೆಗಳ ಪೈಕಿ ದಾವಣಗೆರೆಯೂ ಒಂದಾಗಿದೆ. ಈ ಕಾರ್ಯಕ್ರಮದಲ್ಲಿ ಲಸಿಕೆಗಳಾದ ಡಿಟಿಪಿ, ಮೀಸಲ್ಸ್, ಟಿಟಿ, ಬಿಸಿಜಿ, ರುಬೇಲ್ಲಾ ಸೇರಿದಂತೆ ಸಾರ್ವತ್ರಿಕೆ ಲಸಿಕೆಗಳನ್ನು ಹಾಕಿಸಿಕೊಳ್ಳುವಲ್ಲಿ ಬಿಟ್ಟುಹೋದ 2 ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿಯನ್ನು ಗುರುತಿಸಿ ಈ ಲಸಿಕೆಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ಈ ಲಸಿಕಾ ಕಾರ್ಯಕ್ರಮವನ್ನು ಫೆಬ್ರವರಿ ಮತ್ತು ಮಾರ್ಚ್ ಮಾಹೆಗಳ 8, 9, 10 ಮತ್ತು 12 ನೇ ದಿನಾಂಕಗಳಂದು ದಾವಣಗೆರೆ ಮತ್ತು ಹರಿಹರ ನಗರಗಳಲ್ಲಿ ಈಗಾಗಲೇ ಗುರುತಿಸ ಲಾದ ಸ್ಥಳಗಳಲ್ಲಿ ನಡೆಸಲಾಗುವುದು. ಕೋವಿಡ್ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಸಿಕಾಕರಣದಲ್ಲಿ ಶೇ.26 ಇಳಿಕೆ ಕಂಡು ಬಂದಿದ್ದು, ಇದನ್ನು ಸರಿದೂಗಿಸಲು ಮತ್ತು ಲಸಿಕಾಕರಣದಲ್ಲಿ ಶೇ.90 ಗುರಿ ಸಾಧಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ದಾವಣಗೆರೆ ಮತ್ತು ಹರಿಹರ ನಗರಗಳ ವಲಸೆ ಪ್ರದೇಶ, ಕೊಳಚೆ ಪ್ರದೇಶಗಳಲ್ಲಿ ಲಸಿಕೆ ಬಿಟ್ಟು ಹೋದ ಮಕ್ಕಳು ಮತ್ತು ಗರ್ಭಿಣಿಯರನ್ನು ಗುರುತಿಸಿ ಮೈಕ್ರೋ ಯೋಜನೆ ತಯಾರಿಸಿದ್ದು ಈ ಪ್ರಕಾರ ಲಸಿಕೆಗಳನ್ನು ನೀಡಲಾಗುವುದು ಎಂದವರು ತಿಳಿಸಿದರು.  

ಸಾರ್ವತ್ರಿಕ ಲಸಿಕಾಕರಣದ ಕುರಿತು ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ನಗರಾಭಿವೃದ್ದಿ ಕೋಶ, ಯುವಜನ ಸಬಲೀಕರಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಮಕ್ಕಳು ಮತ್ತು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಮೂಲಕ ಲಸಿಕಾಕರಣದ ಯಶಸ್ಸಿಗೆ ಸಹಕರಿಸಬೇಕೆಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಚಿಗಟೇರಿ ಜಿಲ್ಲಾಸ್ಪತ್ರೆಯ ಅಧೀಕ್ಷಕ ಜಯಪ್ರಕಾಶ್, ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ನಟರಾಜ್ ಮತ್ತಿತರರು ಹಾಜರಿದ್ದರು.

error: Content is protected !!