ಕೇಂದ್ರ ಸರ್ಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಪ್ರತಿಭಟನೆ
ದಾವಣಗೆರೆ, ಫೆ.4- ಪೆಟ್ರೋಲ್, ಡೀಸೆಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ವತಿಯಿಂದ ನಗರ ಪಾಲಿಕೆ ಮುಂಭಾಗದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ತಮ್ಮ ಸರ್ಕಾರ ಬಂದರೆ ಇಂಧನ ಹಾಗೂ ಅಗತ್ಯ ವಸ್ತುಗಳ ಬೆಲೆ ಇಳಿಸುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇತ್ತೀಚೆಗೆ ಮಂಡನೆಯಾದ ಬಜೆಟ್‍ನಲ್ಲಿ 60 ರೂ.ಗೆ ಇದ್ದ ಪೆಟ್ರೋಲ್ ದರವನ್ನು 100ಕ್ಕೆ ಹಾಗೂ 40 ರೂ.ಗೆ ಇದ್ದ ಡೀಸೆಲ್ ಬೆಲೆಯನ್ನು 90 ರೂ.ಗೆ ಮತ್ತು ಅಡುಗೆ ಎಣ್ಣೆಯನ್ನು 140 ರೂ.ಗೆ, ಸಿಲಿಂಡರ್ ಅನ್ನು 750 ರಿಂದ 800 ರೂ.ಗೆ ಏರಿಕೆ ಮಾಡಿದ್ದು, ಅಗತ್ಯ ವಸ್ತುಗಳ ಬೆಲೆಯನ್ನೂ ಸಹ ಗಗನಮುಖಿಯಾಗಿಸಿ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬರೆ ಹಾಕಿರುವುದಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳೀಯ ನಗರ ಪಾಲಿಕೆಯಲ್ಲಿ ಗದ್ದುಗೆ ಏರಲು ಬಿಜೆಪಿ ವಾಮಮಾರ್ಗ ಹಿಡಿದಿದ್ದು, ಮತದಾರರಲ್ಲದವರನ್ನೆಲ್ಲಾ ಮತದಾರರ ಪಟ್ಟಿಗೆ ಸೇರಿಸಿ ಅಧಿಕಾರ ಹಿಡಿಯಲು ಹವಣಿಸುತ್ತಿದೆ. ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅವಕಾಶ ನೀಡುವುದಿಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಪುನಃ ಅಧಿಕಾರಕ್ಕೆ ಬಂದೇ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡ ಎಸ್. ಮಲ್ಲಿಕಾರ್ಜುನ್ ಮಾತನಾಡಿ, ಭ್ರಷ್ಟ ಬಿಜೆಪಿ ಸರ್ಕಾರ ಬೆಲೆ ಏರಿಕೆ ಮಾಡಿ ಬಡವರನ್ನು ಹಿಂಸಿಸುತ್ತಿದ್ದು, ಅವರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನೆಲ್ಲಾ ಧ್ವಂಸ ಮಾಡಿ ಬಡವರ ಸಮಾಧಿ ಕಟ್ಟುತ್ತಿದೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕರ ವಿಭಾಗದ ಕಾರ್ಯಾಧ್ಯಕ್ಷ ಸುಭಾನ್ ಸಾಬ್, ಲಿಯಾಖತ್ ಅಲಿ, ಮಮ್ತಾತಾಜ್ ಬೇಗಂ, ಇಟ್ಟಿಗುಡಿ ಮಂಜುನಾಥ, ದಾಕ್ಷಾಯಿಣಮ್ಮ, ಮಲ್ಲಿಕಾರ್ಜುನ ಇಂಗಳೇಶ್ವರ, ಕೆ.ಹೆಚ್. ಮಂಜುನಾಥ, ಅಬ್ದುಲ್ ಜಬ್ಬಾರ್, ಆರ್.ಬಿ.ಝಡ್ ಬಾಷಾ, ಹೆಚ್. ಹರೀಶ್, ಜಾಕೀರ್, ರಹೀಂ, ದಾದಾಪೀರ್, ನದೀಂ, ಹನುಮಂತಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.