ದಾವಣಗೆೆರೆ, ಮಾ.31- ನಗರದ ವಿವಿಧ ಬಡಾವಣೆಗಳ ವಸತಿ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸದೆ ನಡೆಸಲಾಗುತ್ತಿರುವ ಕಾಲೇಜುಗಳು ಬಡಾವಣೆಗಳ ನಾಗರಿಕರ ನೆಮ್ಮದಿ ಕಸಿದುಕೊಳ್ಳುತ್ತಿವೆ.
ಕಾಲೇಜುಗಳಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣವಾಗಬೇಕಾದರೆ ಮೂಲ ಭೂತ ಸೌಕರ್ಯಗಳು ಅತಿ ಮುಖ್ಯ. ಆದರೆ ನಗರದ ಬಹುತೇಕ ಕಾಲೇಜುಗಳು ಸರ್ಕಾರದ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಕಾಲೇಜುಗಳು ಸುಸಜ್ಜಿತ ಕಟ್ಟಡದೊಂದಿಗೆ ಪ್ರಯೋಗಾಲಯ, ಗ್ರಂಥಾಲಯ ಇತ್ಯಾದಿ ಮೂಲಭೂತ ಸೌಕರ್ಯಗಳ ಜೊತೆಗೆ ಮುಖ್ಯವಾಗಿ ಪಾರ್ಕಿಂಗ್ ವ್ಯವಸ್ಥೆ ಹೊಂದಿರಬೇಕು. ಆದರೆ ಅನೇಕ ಕಾಲೇಜುಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ, ವಿದ್ಯಾರ್ಥಿಗಳು ಹತ್ತಿರದ ಖಾಲಿ ನಿವೇಶನಗಳು, ನಿವಾಸಿಗಳ ಮನೆಗಳ ಮುಂದೆ ಅಥವಾ ರಸ್ತೆಗಳಲ್ಲಿ ತಮ್ಮ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದಾರೆ. ಇದು ಸ್ಥಳೀಯ ನಿವಾಸಿಗಳಿಗೆ ಕಿರಿ ಕಿರಿ ಎನಿಸಲಾರಂಭಿಸಿದೆ. ಇದೀಗ ನಗರದ ಹದಡಿ ರಸ್ತೆಯಲ್ಲಿರುವ ಸರ್.ಎಂ.ವಿ. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಉಂಟಾಗುತ್ತಿರುವ ತೊಂದರೆಗಳ ಬಗ್ಗೆ ಶಿವಕುಮಾರ ಸ್ವಾಮಿ ಬಡಾವಣೆಯ ಈಶ್ವರ ವಿನಾಯಕ ಟ್ರಸ್ಟ್ ಪದಾಧಿಕಾರಿಗಳು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಕಾಲೇಜಿನ ಬಸ್ಗಳು, ಕಾರುಗಳು ಹಾಗೂ ವಿದ್ಯಾರ್ಥಿಗಳು ತರುವ ನೂರಾರು ಬೈಕ್ಗಳಿಗೆ ಕಾಲೇಜು ಯಾವುದೇ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಂಡಿಲ್ಲ. ಪರಿಣಾಮ ಬಡಾವಣೆ ನಿವಾಸಿಗಳ ಮನೆಗಳ ಮುಂದೆ, ಖಾಲಿ ನಿವೇಶನಗಳಲ್ಲಿ ಬೆಳಿಗ್ಗೆಯಿಂದ ರಾತ್ರಿ ವರೆಗೆ ಪಾರ್ಕಿಂಗ್ ಮಾಡುತ್ತಿದ್ದಾರೆ ಎಂದು ಬಡಾವಣೆ ನಿವಾಸಿಗಳು ದೂರಿದ್ದಾರೆ.
ಕಾಲೇಜು ವಿದ್ಯಾರ್ಥಿಗಳ ಹಾರನ್ ಸದ್ದು ಬಡಾವಣೆಯ ವೃದ್ದರಿಗೆ, ಮಹಿಳೆಯರಿಗೆ ಕಿರಿ ಕಿರಿ ಎನಿಸುತ್ತಿದೆ. ಅಲ್ಲದೆ ಅತಿ ವೇಗದಲ್ಲಿ ತಮ್ಮ ದ್ವಿಚಕ್ರ ವಾಹನ ಓಡಿಸುವ ವಿದ್ಯಾರ್ಥಿಗಳಿಂದ ಮನೆಗಳ ಮುಂದೆ ಆಟವಾಡುವ ಚಿಕ್ಕ ಚಿಕ್ಕ ಮಕ್ಕಳನ್ನು ರಕ್ಷಿಸಿಕೊಳ್ಳುವುದೇ ತಲೆನೋವಾಗಿ ಪರಿಣಮಿಸಿದೆ ಎನ್ನುವುದು ಗೃಹಿಣಿಯರ ದೂರು.
ಇನ್ನು ದಾರಿ ಮಧ್ಯೆದಲ್ಲಿಯೇ ಗುಂಪು ಗುಂಪಾಗಿ ಹರಟೆ ಹೊಡೆಯುತ್ತಾ ನಿಲ್ಲುವ ವಿದ್ಯಾರ್ಥಿಗಳಿಗೆ ನಮ್ಮ ವಾಹನದ ಹಾರನ್ ಕೇಳಿಸದು. ಕೇಳಿದರೂ ಅಸಡ್ಡೆ ಮಾಡುವವರಿಗೆ ಬುದ್ದಿ ಹೇಳ ಹೊರಟರೆ ವಿದ್ಯಾರ್ಥಿಗಳ ತಲೆ ಪ್ರತಿಷ್ಠೆ ಮಾತುಗಳನ್ನು ಕೇಳಬೇಕಾಗುತ್ತದೆ. ಕಾಲೇಜು ದಾಖಲಾತಿ ಆರಂಭವಾದ ಸಮಯದಲ್ಲಂತೂ ನಾವು ಮನೆ ಸೇರುವುದು ಕಷ್ಟ. ಅಷ್ಟರ ಮಟ್ಟಿಗೆ ವಿದ್ಯಾರ್ಥಿಗಳು, ಪೋಷಕರು ಹಾಗೂ ವಾಹನಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಆದ್ದರಿಂದ ನಮ್ಮ ಖಾಲಿ ನಿವೇಶನಗಳಿಗೆ ನಾವೇ ಬೇಲಿ ಹಾಕಿಕೊಂಡಿದ್ದೇವೆ ಎನ್ನುತ್ತಾರೆ ಶಿವಕುಮಾರ ಸ್ವಾಮಿ ಬಡಾವಣೆಯ ನಿವಾಸಿಯೊಬ್ಬರು.
ವಿದ್ಯಾರ್ಥಿಗಳ ಪಾರ್ಕಿಂಗ್ ಸಮಸ್ಯೆ ಒಂದು ರೀತಿಯ ತಲೆನೋವಾದರೆ, ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಕರೆ ತರುವ ಬಸ್ಗಳಿಗೂ ಸಮರ್ಪಕವಾಗಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿಕೊಂಡಿಲ್ಲ. ಖಾಲಿ ನಿವೇಶನಗಳಲ್ಲಿ ಬಸ್ ಪಾರ್ಕಿಂಗ್ ಮಾಡುವ ಇವರು, ನಂತರ ಅಲ್ಲಿಯೇ ರಿಪೇರಿ ಮಾಡುತ್ತಾ, ನಿವೇಶನವನ್ನು ತಾತ್ಕಾಲಿಕ ಗ್ಯಾರೇಜ್ ಆಗಿ ಪರಿವರ್ತಿಸಿಕೊಳ್ಳುತ್ತಿದ್ದಾರೆ ಎಂಬುದು ಮತ್ತೊಂದು ಆರೋಪ.
ಕೊರೊನಾ ಪೂರ್ವದಲ್ಲಿ ನಗರದ ಬಡಾವಣೆಗಳಲ್ಲಿದ್ದ ಜನಸಂಖ್ಯೆ ಕೊರೊನಾ ನಂತರ ತುಸು ಹೆಚ್ಚಾಗಿದೆ. ಸೋಂಕು ಹರಡುವಿಕೆ, ಲಾಕ್ಡೌನ್ ಮತ್ತಿತರೆ ಕಾರಣಗಳಿಂದಾಗಿ ಹೊರ ಜಿಲ್ಲೆ, ರಾಜ್ಯಗಳಲ್ಲಿ ಕೆಲಸಕ್ಕೆ ತೆರಳಿದ್ದ ಸ್ಥಳೀಯರು ಇದೀಗ ವರ್ಕ್ ಫ್ರಂ ಹೋಂ ಕಾರಣದಿಂದ ತಾವು ಬಳಸುವ ದ್ವಿಚಕ್ರ. ನಾಲ್ಕು ಚಕ್ರದ ವಾಹನಗಳೊಂದಿಗೆ ಮನೆಗೆ ಮರಳಿದ್ದಾರೆ. ಪರಿಣಾಮ ಬಡಾವಣೆಗಳಲ್ಲೂ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಏತನ್ಮದ್ಯೆ ವಿದ್ಯಾರ್ಥಿಗಳ ಪಾರ್ಕಿಂಗ್ ಸಮಸ್ಯೆ ನಾಗರಿಕರ ಅಳಲು.
ಒಟ್ಟಿನಲ್ಲಿ ವಸತಿ ಪ್ರದೇಶದಲ್ಲಿ ಕನಿಷ್ಟ ಮೂಲ ಸೌಕರ್ಯಗಳಿಲ್ಲದ ಅನೇಕ ಕಾಲೇಜುಗಳಿಂದ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ. ಜೊತೆಗೆ ವಾರ್ಡ್ಗಳ ಪಾಲಿಕೆ ಸದಸ್ಯರು ಸ್ಥಳೀಯರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯಕ್ಕೆ ಮುಂದಾಗಬೇಕಿದೆ.