ಯಲವಟ್ಟಿ ಸಿದ್ಧಾಶ್ರಮದ ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ
ಸಣ್ಣ ಮಠಗಳಿಗೂ ಸರ್ಕಾರ ನೆರವು ನೀಡಲಿ
ಮಲೇಬೆನ್ನೂರು, ಮಾ.31- ನಮ್ಮ ನಾಡಿನ ಹಿರಿಮೆಯಲ್ಲಿ ಮಠ-ಮಾನ್ಯಗಳ ಪಾತ್ರ ಹೆಚ್ಚಿದೆ ಎಂದು ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ ಹೇಳಿದರು.
ಯಲವಟ್ಟಿ ಗ್ರಾಮದ ಶ್ರೀ ಗುರು ಸಿದ್ಧಾಶ್ರಮ ದಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮಲೀನ ಸದ್ಗುರು ಶ್ರೀ ಶಿವಾನಂದ ಸ್ವಾಮೀಜಿ ಹಾಗೂ ಶ್ರೀ ನಿತ್ಯಾನಂದ ಸ್ವಾಮೀಜಿಯವರ ಪುಣ್ಯಾರಾಧನೆ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿಶೇಷವಾಗಿ ರಾಜ್ಯದಲ್ಲಿ ಸರ್ಕಾರ ಮಾಡಬೇಕಾಗಿದ್ದ ಎಷ್ಟೋ ಕೆಲಸಗಳನ್ನು ಮಠಗಳು ಮಾಡುತ್ತಾ ಬಂದಿವೆ. ಸ್ವಾತಂತ್ರ್ಯ ಪೂರ್ವದಲ್ಲೇ ಜನರಿಗೆ ಶಿಕ್ಷಣ ಹಾಗೂ ಅನ್ನ ದಾಸೋಹ ಮಾಡಿ ರುವ ಮಠಗಳು, ಇಂದು ಲಕ್ಷಾಂತರ ಜನರ ಬದುಕು ಭದ್ರವಾಗುವಂತೆ ಮಾಡಿವೆ. ಸರ್ಕಾರ ಯಲವಟ್ಟಿ ಮಠ ಸೇರಿದಂತೆ, ಎಲ್ಲಾ ಸಣ್ಣಪುಟ್ಟ ಮಠಗಳಿಗೂ ನೆರವು ನೀಡಿ, ಅವುಗಳ ಶಕ್ತಿ ಹೆಚ್ಚಿಸಬೇಕು ಎಂದು ಮನವಿ ಮಾಡಿದ ನಿಖಿಲ್, ಯುವಕರು ಮಠಗಳ ಸಂಪರ್ಕ ಬೆಳೆಸಿಕೊಂಡು, ಅಧ್ಯಾತ್ಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ನಮ್ಮ ತಾತ ಕೊಂಡಜ್ಜಿ ಬಸಪ್ಪನವರು ಸಿದ್ಧಾರೂಢರ ಭಕ್ತರಾಗಿದ್ದರು. ಸಿದ್ಧಾಶ್ರಮದ ಅಭಿವೃದ್ಧಿಗೆ ವಿಧಾನ ಪರಿಷತ್ ಸದಸ್ಯ ಮೋಹನ್ ಕುಮಾರ್ ಕೊಂಡಜ್ಜಿ ಅನುದಾನ ನೀಡುವುದಾಗಿ ಭರವಸೆ ನೀಡಿದರಲ್ಲದೆ, ತಕ್ಷಣವೇ ಹೈಮಾಸ್ಟ್ ದೀಪ ಅಳವಡಿಸುವುದಾಗಿ ತಿಳಿಸಿದರು.
ಹದಡಿ ಚಂದ್ರಗಿರಿ ಮಠದ ಶ್ರೀ ಮುರುಳೀಧರ ಸ್ವಾಮೀಜಿ ಮಾತನಾಡಿ, ಗುರುವಿನ ಸಂಗದಿಂದ ಪರಮಾನಂದವಾಗುತ್ತದೆ. ಗುರುವಿನ ಭಕ್ತರಾದವರು ಹೆಚ್ಚು ಕಲ್ಯಾಣ ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಹೋತನಹಳ್ಳಿಯ ಸಿದ್ಧಾರೂಢ ಮಠದ ಶ್ರೀ ಶಂಕರಾನಂದ ಸ್ವಾಮೀಜಿ ಮಾತನಾಡಿ, ನಮ್ಮ ಒಳ್ಳೆಯ ಮನಸ್ಸಿನ ಕೆಲಸ-ಸೇವೆಗಳು ನಮಗೆ ಹೆಚ್ಚು ಶಾಂತಿ, ನೆಮ್ಮದಿ ತಂದು ಕೊಡುತ್ತವೆ. ಈ ನಿಟ್ಟಿನಲ್ಲಿ ಜನರು ಒಳ್ಳೆಯ ಆಲೋಚನೆಗಳನ್ನು ಮಾಡಿ, ಧಾರ್ಮಿಕತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ನರಸಾಪುರದ ಶ್ರೀ ಅಭಿನವ ಸಿದ್ಧರಾಮ ಶಿವಯೋಗಿ, ಯಕ್ಕನಹಳ್ಳಿಯ ಶ್ರೀ ಕೃಷ್ಣಾನಂದ ಭಾರತಿ ಸ್ವಾಮೀಜಿ, ಮಣಕೂರಿನ ಶ್ರೀ ಚನ್ನಬಸಮ್ಮ ತಾಯಿ ಮಾತನಾಡಿ, ಯಾರು ನುಡಿದಂತೆ ನಡೆದುಕೊಳ್ಳುತ್ತಾರೋ ಅವರು ಬದುಕಿನಲ್ಲಿ ತಡವಾದರೂ ಸಾಧಕರಾಗುತ್ತಾರೆ ಎಂದರು.
ದಾವಣಗೆರೆ ಜಡೆ ಸಿಧ್ಧ ಶಿವಯೋಗೀಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನುಷ್ಯ ವ್ಯಾಮೋಹಗಳಿಂದ ದೂರವಿದ್ದರೆ ಮಾತ್ರ ನೆಮ್ಮದಿ ಇರಲು ಸಾಧ್ಯ. ಗುರುವಿನ ಕರುಣೆ ಪಡೆದವರು ಜೀವನದಲ್ಲಿ ಎಂದಿಗೂ ಸೋಲಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.
ಶ್ರೀ ಯೋಗಾನಂದ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ, ಬ್ರಹ್ಮಲೀನ ಸದ್ಗುರುಗಳ ಪವಾಡ ಶ್ರೀ ಮಠದಲ್ಲಿ ಯಾವತ್ತೂ ಇರುತ್ತದೆ ಎಂಬುದಕ್ಕೆ ನಾವು ಮಾಡುವ ಕೆಲಸಗಳಿಗೆ ಭಕ್ತರು ನೀಡುವ ಸಹಕಾರವೇ ಸಾಕ್ಷಿ ಎಂದರು. ಡಿಸಿಸಿ ಬ್ಯಾಂಕಿನ ನಿರ್ದೇಶಕ ಸಿರಿಗೆರೆ ಹಾಲೇಶಪ್ಪ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಜಿ. ಆಂಜನೇಯ, ಗ್ರಾಮದ ಮುರುಗೆಪ್ಪಗೌಡ್ರು, ಜಿ. ಬಸಪ್ಪ ಮೇಷ್ಟ್ರು, ಹೊಸಮನಿ ಮಲ್ಲಪ್ಪ, ಎ. ಸುರೇಶ್, ಕುಂಬಳೂರಿನ ಸದಾಶಿವ, ಜಿಗಳಿಯ ರಂಗಪ್ಪ ಇನ್ನಿತರರು ಭಾಗವಹಿಸಿದ್ದರು.
ದೀಕ್ಷಾ, ಕೃತ್ತಿಕಾ, ಚೇತನ ತಂಡ ನಡೆಸಿಕೊಟ್ಟ ಶಿವತಾಂಡವ ನೃತ್ಯ ಗಮನ ಸೆಳೆಯಿತು. ಕುಂಬಳೂರು ಕುಬೇರಪ್ಪ ಪ್ರಾರ್ಥಿಸಿದರು. ಪ್ರವಚನಕಾರ ಸಿರಿಗೆರೆ ಸಿದ್ದೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಎಸಿಎಸ್ ಸಿಇಒ ಶೇಖರಪ್ಪ ನಿರೂಪಿಸಿ, ವಂದಿಸಿದರು.