22ನೇ ವಾರ್ಡ್ ಯಲ್ಲಮ್ಮನಗರದಲ್ಲಿ ಬಿಜೆಪಿಯ ಆರ್. ಶಿವಾನಂದ, 20ನೇ ವಾರ್ಡ್ ಭಾರತ್ ಕಾಲೋನಿಯಲ್ಲಿ ಮೀನಾಕ್ಷಿ ಎಂ. ಜಗದೀಶ್‌ಗೆ ಗೆಲುವು
ದಾವಣಗೆರೆ, ಮಾ. 31 – ನಗರ ಪಾಲಿಕೆಯ ಎರಡು ವಾರ್ಡ್‌ಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ ಒಂದರಲ್ಲಿ ಗೆಲುವು ಸಾಧಿಸಿವೆ. 22ನೇ ಯಲ್ಲಮ್ಮನಗರ ವಾರ್ಡ್‌ನಲ್ಲಿ ಬಿಜೆಪಿಯ ಆರ್. ಶಿವಾನಂದ ಹಾಗೂ ಭಾರತ್ ಕಾಲೋನಿಯ 20ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಮೀನಾಕ್ಷಿ ಎಂ. ಜಗದೀಶ್ ಗೆದ್ದಿದ್ದಾರೆ.
ಹಿಂದಿನ ಚುನಾವಣೆಯಲ್ಲಿ ಈ ಎರಡೂ ವಾರ್ಡ್‌ಗಳು ಕಾಂಗ್ರೆಸ್ ವಶದಲ್ಲಿದ್ದವು. ವಾರ್ಡ್‌ಗಳ ಸದಸ್ಯರಾದ ದೇವರಮನಿ ಶಿವಕುಮಾರ್ ಹಾಗೂ ಯಶೋಧ ಜೆ. ಉಮೇಶ್ ರಾಜೀನಾಮೆ ನೀಡಿದ್ದರಿಂದ ಸ್ಥಾನಗಳು ತೆರವಾಗಿದ್ದವು. ಬುಧವಾರದ ಫಲಿತಾಂಶದಿಂದ ಪಾಲಿಕೆಯಲ್ಲಿ ಕಾಂಗ್ರೆಸ್ ಆರಂಭದಲ್ಲಿ ಹೊಂದಿದ್ದಕ್ಕಿಂತ ಒಂದು ಸ್ಥಾನ ಕುಸಿದಂತಾಗಿದೆ.
ಪಾಲಿಕೆಯಲ್ಲಿ ಪ್ರಸಕ್ತ ಬಿಜೆಪಿ 18 ಹಾಗೂ ಕಾಂಗ್ರೆಸ್ 21 ಸದಸ್ಯರನ್ನು ಹೊಂದಿದಂತಾಗಿದೆ. ಐವರು ಪಕ್ಷೇತರರಿದ್ದರೆ, ಒಬ್ಬ ಜೆಡಿಎಸ್ ಸದಸ್ಯರಿದ್ದಾರೆ.
ಯಲ್ಲಮ್ಮನಗರ 22ನೇ ವಾರ್ಡ್‌ನಲ್ಲಿ ಆರ್. ಶಿವಾನಂದ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಎಸ್. ರವಿಸ್ವಾಮಿ ಅವರನ್ನು 470 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.
ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಹಮ್ಮದ್ ಮುಜಾಹಿದ್ ಪಾಷ ಅವರು 978 ಮತಗಳನ್ನು ಪಡೆದು ಫಲಿತಾಂಶದಲ್ಲಿ ನಿರ್ಣಾಯಕರಾಗಿದ್ದಾರೆ. ಉಚ್ಛಾಟನೆಯೇ ಕಾಂಗ್ರೆಸ್ ಸೋಲಿಗೆ ಕಾರಣವಾಗಿದೆ. ಉಳಿದಂತೆ ಮೊಹಮ್ಮದ್ ಅಲಿ ಶೋಯೇಬ್ ಅವರು 20 ಮತ್ತು ಖಲೀಲ್ ಬೇಗ್ ಅವರು 10 ಮತ ಪಡೆದಿದ್ದಾರೆ. ನೋಟಾಗೆ 18 ಮತ ಚಲಾವಣೆಯಾಗಿವೆ.
ಭಾರತ್ ಕಾಲೋನಿಯ 20ನೇ ವಾರ್ಡ್‌ನಲ್ಲಿ ನಡೆದ ನೇರ ಸ್ಪರ್ಧೆಯಲ್ಲಿ ಕಾಂಗ್ರೆಸ್‌ನ ಮೀನಾಕ್ಷಿ ಎಂ. ಜಗದೀಶ್ ಅವರು 2392 ಮತ ಪಡೆದು ಗೆದ್ದಿದ್ದಾರೆ. ಬಿಜೆಪಿಯ ಎಂ. ರೇಣುಕಾ 2,046 ಮತಗಳನ್ನು ಪಡೆದಿದ್ದಾರೆ. ಗೆಲುವಿನ ಅಂತರ 346 ಆಗಿದೆ. ನೋಟಾಗೆ 55 ಮತಗಳು ದೊರೆತಿವೆ.
ಗೆಲುವಿನ ನಂತರ ಪತ್ರಿಕೆಯೊಂದಿಗೆ ಮಾತನಾಡಿರುವ ಕಾಂಗ್ರೆಸ್‌ನ ನೂತನ ಕಾರ್ಪೊರೇಟರ್ ಮೀನಾಕ್ಷಿ ಎಂ. ಜಗದೀಶ್, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಜನತೆಯ ಶ್ರಮದಿಂದ ಗೆಲುವು ಸಾಧಿಸಿದ್ದೇನೆ. ನಾಗರಿಕರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವುದು ಹಾಗೂ ವಾರ್ಡ್ ಅಭಿವೃದ್ಧಿ ಮೊದಲ ಆದ್ಯತೆಯಾಗಿರಲಿದೆ ಎಂದಿದ್ದಾರೆ.
ಯಲ್ಲಮ್ಮನಗರದ ಬಿಜೆಪಿಯ ನೂತನ ಕಾರ್ಪೊರೇಟರ್ ಆರ್. ಶಿವಾನಂದ ಮಾತನಾಡಿದ್ದು, ಪಕ್ಷದ ಮುಖಂಡರು, ಇತರೆ ಕಾರ್ಪೊರೇಟರ್‌ಗಳು ಹಾಗೂ ಕಾರ್ಯಕರ್ತರ ಹುಮ್ಮಸ್ಸಿನಿಂದ ಗೆಲುವಿನ ವಿಶ್ವಾಸ ಇತ್ತು. ಅದರಂತೆ ಫಲಿತಾಂಶ ಬಂದಿದೆ. ಮೊದಲ ಬಾರಿಗೆ ವಾರ್ಡ್‌ನಲ್ಲಿ ಬಿಜೆಪಿ ಗೆದ್ದಿದ್ದೆ ಎಂದಿದ್ದಾರೆ.
ಡೋರ್ ನಂಬರ್ ಕಲ್ಪಿಸುವುದು, ಚರಂಡಿ, ನೀರು ಹಾಗೂ ಸ್ವಚ್ಛತೆ ವಾರ್ಡ್‌ನ ಪ್ರಮುಖ ಸಮಸ್ಯೆಗಳಾಗಿದ್ದು, ಆ ಬಗ್ಗೆ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದ್ದಾರೆ.