ಖಾಸಗೀಕರಣ ಪ್ರಕ್ರಿಯೆ ತಕ್ಷಣ ನಿಲ್ಲಿಸಲು ಆಗ್ರಹ

ಕಾರ್ಮಿಕ ಸಂಘಟನೆಗಳಿಂದ ನಗರದಲ್ಲಿ ಮುಂದುವರೆದ ಎರಡನೇ ದಿನದ ಮುಷ್ಕರ

ದಾವಣಗೆರೆ, ಮಾ.29- ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನ ವಿರೋಧಿ ಧೋರಣೆ ಖಂಡಿಸಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜೆಸಿಟಿಯು ವತಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ನಂತರ, ಜಯದೇವ ವೃತ್ತದ ಬಳಿ ಬಹಿರಂಗ ಸಭೆ ನಡೆಸಲಾಯಿತು.

ಜೆಸಿಟಿಯು ನೇತೃತ್ವದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ನಗರದ ಪಿ.ಬಿ. ರಸ್ತೆ, ಅಶೋಕ ರಸ್ತೆ, ಲಾಯರ್ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆದು, ಜಯದೇವ ವೃತ್ತದ ಬಳಿ ಮುಕ್ತಾಯಗೊಂಡಿತು.

ಈ ವೇಳೆ ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ. ರಾಘವೇಂದ್ರ ನಾಯರಿ ಮಾತನಾಡಿ, `ದೇಶವನ್ನು ಉಳಿಸಿ, ಕಾರ್ಮಿಕರನ್ನು ರಕ್ಷಿಸಿ’ ಎನ್ನುವ ಘೋಷಣೆಯೊಂದಿಗೆ ದೇಶಾದ್ಯಂತ ಸುಮಾರು 25 ಕೋಟಿ ಕಾರ್ಮಿಕರು ಎರಡು ದಿನಗಳ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಸುವ ಮೂಲಕ ಕಾರ್ಮಿಕ ಶಕ್ತಿಯನ್ನು ಪ್ರದರ್ಶಿಸಿದ್ದಾರೆ.

ದೇಶದ ಆಸ್ತಿಗಳಾದ ಬ್ಯಾಂಕು, ವಿಮಾ ಕಂಪನಿಗಳು, ರೈಲ್ವೆ, ವಿದ್ಯುತ್ ಪ್ರಸರಣ ಸಂಸ್ಥೆಗಳು, ಟೆಲಿಕಾಂ, ಮೂಲ ಸೌಕರ್ಯ ಮುಂತಾದ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಪ್ರಕ್ರಿಯೆ ಕೂಡಲೇ ನಿಲ್ಲಬೇಕು. ರಾಷ್ಟ್ರೀಯ ಹಣ ಗಳಿಕೆಯ ಪೈಪ್‌ಲೈನ್ (ಎನ್‌ಎಂಪಿ) ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.

ದೇಶದ ಅಮೂಲ್ಯ ಆಸ್ತಿಯನ್ನು ಬಂಡವಾಳ ಶಾಹಿಗಳಿಗೆ ಮಾರುವ, ಬಂಡವಾಳ ಹಿಂತೆಗೆತ ಮಾಡುವ, ದೀರ್ಘಕಾಲದ ವರೆಗೆ ಖಾಸಗಿಯವರಿಗೆ ಲೀಸ್ ನೀಡುವ ಹುನ್ನಾರ ನಡೆಯುತ್ತಿದೆ. ಇದು ದೇಶದ ಭವಿಷ್ಯದ ಹಿತದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ ಎಂದು ಹೇಳಿದರು.

ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆವರಗೆರೆ ಹೆಚ್.ಜಿ. ಉಮೇಶ್ ಮಾತನಾಡಿ, ದೇಶದ ಸ್ವಾತಂತ್ರ್ಯದ 75 ನೇ ವರ್ಷದ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲೂ ಕಾರ್ಮಿಕರ ಶೋಷಣೆ ಅವ್ಯಾಹತವಾಗಿ ನಡೆಯುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದರು.

ಹೆಚ್ಚುತ್ತಿರುವ ನಿರುದ್ಯೋಗ, ಮುಳುಗುತ್ತಿರುವ ಆದಾಯ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಮಹಿಳೆಯರಿಗೆ ಸುರಕ್ಷತೆ ಮತ್ತು ಭದ್ರತೆ ಇಲ್ಲದಿರುವುದು ಸಂಕಷ್ಟದ ಸಮಯವಾಗಿದೆ. ಈ ಎಲ್ಲಾ ಸಂಕಷ್ಟಗಳು ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳಿಂದ ಸೃಷ್ಠಿಯಾಗಿವೆ ಎಂದು ಹೇಳಿದರು.

ಕಾರ್ಮಿಕ ಸಂಘಟನೆಗಳ ಮುಖಂಡರಾದ ಕೈದಾಳೆ ಮಂಜುನಾಥ್, ಆವರಗೆರೆ ಚಂದ್ರು, ಬಿ. ಆನಂದಮೂರ್ತಿ, ಜಬೀನಾ ಖಾನಂ, ಕರಿಬಸಪ್ಪ, ಶ್ರೀಹರ್ಷ, ಕೆ.ಪಿ. ಮಧುಸೂದನ್, ಆವರಗೆರೆ ವಾಸು, ರಾಜೇಂದ್ರ ಬಂಗೇರ, ಮತ್ತಿತರರು ಮಾತನಾಡಿದರು.

ಪ್ರತಿಭಟನೆಯಲ್ಲಿ ಆನಂದರಾಜ್, ವಿಶ್ವನಾಥ ಬಿಲ್ಲವ, ಎಂ.ಬಿ. ಶಾರದಮ್ಮ, ಸುನೀತ್ ಕುಮಾರ್, ಎಸ್. ನಾಗರಾಜ್, ಐರಣಿ ಚಂದ್ರು, ಆವರಗೆರೆ ರಂಗಸ್ವಾಮಿ, ಸರೋಜಮ್ಮ, ಹೆಚ್.ಎಸ್. ತಿಪ್ಪೇಸ್ವಾಮಿ, ಆರ್. ಆಂಜನೇಯ, ಎಸ್.ಎಸ್. ಮಲ್ಲಮ್ಮ, ಕಾಳಮ್ಮ , ವಿ. ಲಕ್ಷ್ಮಣ, ಭೀಮಾರೆಡ್ಡಿ, ಹನುಮಂತಪ್ಪ, ಕೆ. ಜಯಪ್ಪ ಮತ್ತಿತರರು ಭಾಗವಹಿಸಿದ್ದರು.

error: Content is protected !!