ಪ್ರಶಸ್ತಿಗೆ ಯಡಿಯೂರಪ್ಪನವರು ಅರ್ಹ ವ್ಯಕ್ತಿ: ಶಾಮನೂರು ಶಿವಶಂಕರಪ್ಪ ಪ್ರಶಂಸೆ
ಶಿವಮೊಗ್ಗ, ಮಾ.6- ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಭಾನುವಾರ ಶಿವಮೊಗ್ಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪನ ವರಿಗೆ ಕೆಳದಿ ಶಿವಪ್ಪ ನಾಯಕ ಪ್ರಶಸ್ತಿಯನ್ನು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಡಾ|| ಶಾಮನೂರು ಶಿವಶಂಕರಪ್ಪನವರು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್ಸೆಸ್, ಕೆಳದಿ ಶಿವಪ್ಪನಾಯಕರು ಉತ್ತಮ ಆಡಳಿತಗಾರರಾಗಿ ಸರ್ವ ಜನಾಂಗಕ್ಕೆ ಅನುಕೂಲವಾಗುವಂತಹ ಆಡಳಿತ ನಡೆಸಿ ಜನಮನ್ನಣೆ ಗಳಿಸಿದ್ದರು. ಕಾಕತಾಳೀಯ ಎಂಬಂತೆ ಇಂದು ಪ್ರತ್ಯೇಕ ರೈತ ಬಜೆಟ್ ಮಂಡಿಸಿ ಸರ್ವ ಜನಾಂಗದ ನಾಯಕ ರಾಗಿರುವ ಯಡಿಯೂರಪ್ಪ ನವರಿಗೆ ಅವರ ಹೆಸರಿನಲ್ಲಿ ಪ್ರಶಸ್ತಿ ಸಂದಿರು ವುದು ಶ್ಲ್ಯಾಘನೀಯ ಎಂದರು.
ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಗೊ.ರು.ಚನ್ನಬಸಪ್ಪನವರು ಅಭಿನಂದನಾ ನುಡಿಗಳನ್ನಾಡಿದರು. ಪ್ರಶಸ್ತಿ ಸ್ವೀಕರಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂ ರಪ್ಪನವರು ಈ ನಾಡಿನ ಜನತೆಯ ವಿಶ್ವಾಸಕ್ಕೆ ಚಿರಋಣಿಯಾಗಿದ್ದೇನೆ ಎಂದರು.
ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿದರು. ಬೆಕ್ಕಿನ ಕಲ್ಮಠದ ಡಾ|| ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ, ಬಸವ ಕೇಂದ್ರದ ಶ್ರೀ ಬಸವ ಮರಳಸಿದ್ಧ ಸ್ವಾಮೀಜಿಗಳ ದಿವ್ಯಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಮುನಿ ಸಜ್ಜನ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕರು ಗಳಾದ ಆಯನೂರು ಮಂಜು ನಾಥ್,ಅಶೋಕ ನಾಯ್ಕ, ಶ್ರೀಮತಿ ಭಾರತಿ ಶೆಟ್ಟಿ, ಡಿ.ಎಸ್.ಅರುಣ, ಎಸ್.ರುದ್ರೇಗೌಡ, ಮಾಜಿ ಶಾಸಕ ಹೆಚ್.ಎಂ.ಚಂದ್ರಶೇಖರಪ್ಪ, ಅಖಿಲ ಭಾರತ ವೀರಶೈವ ಮಹಾಸಭಾದ ರೇಣುಕ ಪ್ರಸನ್ನ, ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಅರುಣಾದೇವಿ, ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಪರಮಶಿವಯ್ಯ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ, ಮುಖಂಡ ವಿಜಯೇಂದ್ರ, ಚನ್ನವೀರಪ್ಪ, ಗುರುಮೂರ್ತಿ, ನಾಗರಾಜ್, ಜಗದೀಶ್, ಜ್ಯೋತಿ ಪ್ರಕಾಶ್, ಅನಿತಾ ರವಿಶಂಕರ್ ಮತ್ತಿತರರಿದ್ದರು.