ಉಪ ಮೇಯರ್ ಆಗಿ ಗಾಯತ್ರಿಬಾಯಿ ಖಂಡೋಜಿರಾವ್, ಮೂರನೇ ಬಾರಿಯೂ ಬಿಜೆಪಿಗೆ ಗೆಲವು
ದಾವಣಗೆರೆ, ಫೆ.25- ಮಹಾನಗರ ಪಾಲಿಕೆ ನೂತನ ಮೇಯರ್ ಆಗಿ ಬಿಜೆಪಿಯ ಜಯಮ್ಮ ಗೋಪಿನಾಯ್ಕ ಹಾಗೂ ಉಪ ಮೇಯರ್ ಆಗಿ ಗಾಯತ್ರಿಬಾಯಿ ಖಂಡೋಜಿರಾವ್ ಆಯ್ಕೆಯಾಗಿದ್ದಾರೆ.
ಜಯಮ್ಮ ಅವರು 30ನೇ ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಜಯ ಸಾಧಿಸಿ, ಬಿಜೆಪಿಗೆ ಸೇರ್ಪಡೆಗೊಂಡಿದ್ದರು. 8ನೇ ವಾರ್ಡ್‌ನ ಗಾಯತ್ರಿ ಬಾಯಿ ಖಂಡೋಜಿರಾವ್ ಮೊದಲ ಬಾರಿಗೆ ಉಪ ಮೇಯರ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ.
ಪರಿಶಿಷ್ಟ ಜಾತಿ (ಮಹಿಳೆ)ಗೆ ಮೀಸಲಾಗಿದ್ದ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಜಯಮ್ಮ ಗೋಪಿನಾಯ್ಕ ಹಾಗೂ ಕಾಂಗ್ರೆಸ್‌ನಿಂದ ನಾಗರತ್ನಮ್ಮ ನಾಮಪತ್ರ ಸಲ್ಲಿಸಿದ್ದರೆ, ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪ ಮೇಯರ್ ಸ್ಥಾನಕ್ಕೆ ಬಿಜೆಪಿಯ ಗಾಯತ್ರಿಬಾಯಿ ಖಂಡೋಜಿರಾವ್, ಕಾಂಗ್ರೆಸ್‌ನ ಶ್ವೇತಾ ಶ್ರೀನಿವಾಸ್ ಉಮೇದುವಾರಿಕೆ ಸಲ್ಲಿಸಿದ್ದರು.
ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿಗಳು ತಲಾ 29 ಮತಗಳನ್ನು ಪಡೆದರೆ ಕಾಂಗ್ರೆಸ್ ಅಭ್ಯರ್ಥಿಗಳು ತಲಾ 25 ಮತಗಳನ್ನು ಪಡೆದರು.
ಒಟ್ಟು 45 ಸದಸ್ಯ ಬಲದ ಪಾಲಿಕೆಯಲ್ಲಿ ಬಿಜೆಪಿಯ 18 ಸದಸ್ಯರು, ಓರ್ವ ಸಂಸದ, ಓರ್ವ ಶಾಸಕ, ಐದು ಜನ ಎಂಎಲ್‍ಸಿ, ನಾಲ್ಕು ಪಕ್ಷೇತರರು ಸೇರಿ ಒಟ್ಟು 29 ಜನ ಮತದಾನ ಮಾಡಿದರು.
ಚುನಾವಣೆಯಲ್ಲಿ ಬಿಜೆಪಿ ಗೆದ್ದು ಮೇಯರ್-ಉಪಮೇಯರ್ ಸ್ಥಾನ ಪಡೆದಿದೆ. ಐದು ವರ್ಷದಲ್ಲಿ ಮೂರು ಬಾರಿ ಅಧಿಕಾರ ಹಿಡಿದ್ದೇವೆ. ಮುಂದಿನ 5 ವರ್ಷಗಳಲ್ಲಿ ನಮ್ಮದೇ ಅಧಿಕಾರವಿರಲಿದೆ.
– ಜಿ.ಎಂ. ಸಿದ್ದೇಶ್ವರ,
ಬಿಜೆಪಿಯವರು ಮೋಸದಿಂದ ಅಧಿಕಾರ ಹಿಡಿದಿದ್ದಾರೆ.
– ಶಾಮನೂರು ಶಿವಶಂಕರಪ್ಪ,
ಕಾಂಗ್ರೆಸ್ನವರು ರಾಜಕೀಯ ನಿರುದ್ಯೋಗಿಗಳಾಗಿದ್ದಾರೆ
ಕಾಂಗ್ರೆಸ್ನವರು ರಾಜಕೀಯ ನಿರುದ್ಯೋಗಿಗಳಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ವ್ಯಂಗ್ಯವಾಡಿ ದರು. ಪಾಲಿಕೆ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಾಗ ಮಾತ್ರ ಚುನಾವಣೆ ಸುಲಲಿತವಾಗಿ ನಡೆದಿದೆ. ಬಿಜೆಪಿಯವರು ಗೆದ್ದಾಗ ಮಾತ್ರ ಇವಿಎಂ ಕೆಟ್ಟು ಹೋಗಿದೆ. ಕಾಂಗ್ರೆಸ್ಗೆ ಹಾಕಿದ ಮತ ಗಳು ಬಿಜೆಪಿಗೆ ಪರಿವರ್ತನೆ ಆಗುತ್ತಿವೆ ಎಂದು ಹೇಳುವ ಕಾಂಗ್ರೆಸ್ನವರ ಹೇಳಿಕೆಗಳು ಹತಾಷೆಯಿಂದ ಹೇಳುವ ಹೇಳಿಕೆಗಳು. ಇಂದು ಕಾಂಗ್ರೆಸ್ ನಿಜವಾಗಿ ಸೋತಿದೆ. ಇಡೀ ದೇಶದಲ್ಲಿ ಕಾಂಗ್ರೆಸ್ ಬಗ್ಗೆ ಜನರು ಒಲವು ತೋರಿಸುತ್ತಿಲ್ಲ ಎಂದರು.
ಎಲ್ಲೋ ಗೆದ್ದವರಿಂದ ಇಲ್ಲಿ ಮತದಾನ ಸರಿಯಲ್ಲ
ಎಲ್ಲೋ ಗೆದ್ದಿರುವ ವಿಧಾನ ಪರಿಷತ್ ಸದಸ್ಯರು ಬೇರೆಡೆ ಬಂದು ಮತದಾನ ಮಾಡಿದ್ದಾರೆ. ಈ ರೀತಿ ಮುಂದೆ ಆಗದಂತೆ ತಡೆ ಯಲು ನ್ಯಾಯಾಲಯಕ್ಕೆ ಹೋಗುವ ಚಿಂತನೆಯಿದೆ ಎಂದು ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ ಹೇಳಿದರು. ವಿಧಾನ ಪರಿಷತ್ತಿನ ಸದಸ್ಯರು ಎಲ್ಲಿ ಆಯ್ಕೆ ಆಗಿರುತ್ತಾರೋ, ಅಲ್ಲಿಯೇ ಇರಬೇಕು. ಆದರೆ ಈ ರೀತಿ ಅಧಿಕಾರ ಪಡೆಯಲು ಎಲ್ಲೋ ಬಂದು ಮತದಾನ ಮಾಡುವುದು ತಪ್ಪು. ಇದು ಸರಿಯಲ್ಲ. ಮುಂದಿನ ದಿನಗಳಲ್ಲಿ ಇಂತಹ ವರ್ತನೆ ನಿಲ್ಲಬೇಕು ಎಂದು ಹೇಳಿದರು.
4 ಸ್ಥಾಯಿ ಸಮಿತಿಗೆ ಆಯ್ಕೆ
ಮಹಾನಗರ ಪಾಲಿಕೆಯ ವಿವಿಧ ಸ್ಥಾಯಿ ಸಮಿತಿಗೆ ಮತದಾನದ ಮೂಲಕ ಆಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸೋಗಿ ಶಾಂತ ಕುಮಾರ್, ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿ ಪಕ್ಷೇತರ ಸದಸ್ಯ ಉದಯ ಕುಮಾರ್, ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಮಂಜಾನಾಯ್ಕ, ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ರಾಕೇಶ್ ಜಾಧವ್ ಆಯ್ಕೆಯಾಗಿದ್ದಾರೆ.
ಅಭಿವೃದ್ಧಿಗೆ ಶ್ರಮಿಸುವೆ: ಮೇಯರ್
ನಗರದ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಹಂತ ಹಂತವಾಗಿ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ನೂತನ ಮೇಯರ್ ಜಯಮ್ಮ ಗೋಪಿನಾಯ್ಕ ಹೇಳಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನನ್ನ ಅವಧಿಯಲ್ಲಿ ಉತ್ತಮ ಕೆಲಸ ಮಾಡುತ್ತೇನೆ. ನೀರು, ಒಳಚರಂಡಿ ಸೇರಿದಂತೆ ಮೂಲ ಸೌಕರ್ಯಗಳಿಗೆ ಒತ್ತು ನೀಡುತ್ತೇನೆ ಎಂದರು.
ಕಾಂಗ್ರೆಸ್ 21 ಸದಸ್ಯರು, ಓರ್ವ ಶಾಸಕ, ಇಬ್ಬರು ಎಂಎಲ್‍ಸಿ ಹಾಗೂ ಓರ್ವ ಪಕ್ಷೇತರ ಸೇರಿ ಒಟ್ಟು 25 ಜನ ಮತದಾನ ಮಾಡಿದರು. ಜೆಡಿಎಸ್ ಸದಸ್ಯೆ ಗೈರು ಹಾಜರಾಗಿದ್ದರು.
ವಿಧಾನ ಪರಿಷತ್ ಸದಸ್ಯರಾದ ಎನ್. ರವಿಕುಮಾರ್, ಡಾ. ತೇಜಸ್ವಿನಿ ರಮೇಶ್, ಆರ್. ಶಂಕರ್, ಕೆ.ಪಿ. ನಂಜುಂಡಿ ಅವರುಗಳು ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ದಾವಣಗೆರೆಗೆ ಆಗಮಿಸಿ, ಜಿಎಂಐಟಿ ಅತಿಥಿ ಗೃಹಕ್ಕೆ ತೆರಳಿ, ನಂತರ ಪಾಲಿಕೆಗೆ ಆಗಮಿಸಿ ಮತ ಚಲಾಯಿಸಿದರು. ಮತ್ತೊಂದೆಡೆ ಬಿಜೆಪಿ ಸದಸ್ಯರು ಬಸ್‌ನಲ್ಲಿ ಒಟ್ಟಿಗೆ ಪಾಲಿಕೆ ಆವರಣಕ್ಕೆ ಬಂದರೆ, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ರವೀಂದ್ರನಾಥ್ ನಂತರ ಆಗಮಿಸಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.
ಇತ್ತ ಶಾಸಕ ಶಾಮನೂರು ಶಿವಶಂಕರಪ್ಪ ಅವರೊಂದಿಗೆ ಎಂ.ಎಲ್.ಸಿ.ಗಳಾದ ಯು.ಬಿ. ವೆಂಕಟೇಶ್, ಮೋಹನ್ ಕೊಂಡಜ್ಜಿ ಆಗಮಿಸಿದರೆ, ವಿಪಕ್ಷ ನಾಯಕ ಎ.ನಾಗರಾಜ್ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ಆಗಮಿಸಿದ್ದರು. ಒಟ್ಟಾರೆ ಚುನಾವಣೆಯಲ್ಲಿ ಎರಡೂ ಪಕ್ಷಗಳ ಏಳು ಜನ ವಿಧಾನ ಪರಿಷತ್ ಸದಸ್ಯರು ಭಾಗವಹಿಸಿದ್ದರು.
ದೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್, ಮಾಜಿ ಅಧ್ಯಕ್ಷರುಗಳಾದ ರಾಜನಹಳ್ಳಿ ಶಿವಕುಮಾರ್, ಯಶವಂತರಾವ್ ಜಾಧವ್, ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ.ಪಾಟೀಲ್ ಇತರರು ಚುನಾವಣಾ ಪ್ರಕ್ರಿಯೆ ಮುಗಿಯವವರೆಗೆ ಪಾಲಿಕೆ ಆವರಣದಲ್ಲಿದ್ದು ನೂತನ ಮೇಯರ್ ಅವರಿಗೆ ಅಭಿನಂದಿಸಿದರು.