33 ಕೋಟಿ ಬಿಡುಗಡೆ : ಸಂಸದರ ಹೇಳಿಕೆ ಸುಳ್ಳು

ಹರಿಹರ, ಫೆ. 23 – ಹರಿಹರ ತಾಲ್ಲೂಕಿನ ವಿವಿಧ ರಸ್ತೆಗಳ ಅಭಿವೃದ್ಧಿಗೆ 33 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಲಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿರುವುದು ಶುದ್ಧ ಸುಳ್ಳು ಎಂದು ಶಾಸಕ ಎಸ್. ರಾಮಪ್ಪ ಹೇಳಿದ್ದಾರೆ.

ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ಹರಿಹರ ವಿಧಾನಸಭಾ ಕ್ಷೇತ್ರದ ಜಿಲ್ಲಾ ಮುಖ್ಯ ರಸ್ತೆ ಹಾಗೂ ರಾಜ್ಯ ಹೆದ್ದಾರಿಗಳ ಅಭಿ ವೃದ್ಧಿಗೆ ಲೋಕೋಪಯೋಗಿ ಇಲಾಖೆಯ ವತಿ ಯಿಂದ 33 ಕೋಟಿ ರೂ. ಬಿಡುಗಡೆಯಾಗಿದ್ದು, ವಾರದೊಳಗೆ ಕಾಮಗಾರಿಗಳ ಶಂಕುಸ್ಥಾಪನೆ ಮಾಡುವುದಾಗಿ ಸಂಸದರು ಹೇಳಿದ್ದು ಶುದ್ಧ ಸುಳ್ಳು ಹೇಳಿಕೆಯಾಗಿದೆ ಎಂದವರು ಹೇಳಿದ್ದಾರೆ.

ನಾನು ಈ ಹಿಂದೆ ಹೋರಾಟ ಮಾಡಿ ಎಕ್ಕೇಗೊಂದಿ – ನಂದಿಗುಡಿ ರಸ್ತೆಯ ಅಭಿವೃದ್ಧಿಗೆ 13.50 ಕೋಟಿ ರೂ. ಅನುದಾನವನ್ನು ಅಂದಿನ ಲೋಕೋಪಯೋಗಿ ಇಲಾಖೆ ಸಚಿವರಾಗಿದ್ದ ಹೆಚ್.ಡಿ.ರೇವಣ್ಣ ಅವರ ಗಮನಕ್ಕೆ ತಂದು ಅನುದಾನ ಬಿಡುಗಡೆ ಮಾಡಿಸಿದ್ದನ್ನು ಬಿಜೆಪಿ ಸರ್ಕಾರ ಆಡಳಿತದ ಸಮಯದಲ್ಲಿ ಅದನ್ನು ತಡೆದರು ಎಂದು ರಾಮಪ್ಪ ಹೇಳಿದ್ದಾರೆ.

ಚಿಕ್ಕಬಿದರಿ – ಕಕ್ಕರಗೊಳ್ಳದವರಗೆ ರಸ್ತೆ ಅಭಿವೃದ್ಧಿ ಮಾಡುವುದಕ್ಕೆ ನಾನು ಲೋಕೋಪಯೋಗಿ ಸಚಿವರಾದ ಗೋವಿಂದ ಕಾರಜೋಳ ಅವರ ಹತ್ತಿರ ಓಡಾಡಿ, ಸಾರಥಿ – ಚಿಕ್ಕಬಿದರಿ ಕಾಮಗಾರಿಗೆ 10 ಕೋಟಿ ಹಣ ಬಿಡುಗಡೆ ಮಾಡಿಸಿದ್ದು ಮತ್ತು ಎಂ.ಎಲ್.ಸಿ. ಕೊಂಡಜ್ಜಿ ಮೋಹನ್ ಅವರು ಬಿಡುಗಡೆ ಮಾಡಿಸಿದ್ದು 5 ಕೋಟಿ ಅನುದಾನ. ಇದನ್ನು ನಾನು ಬಿಡುಗಡೆ ಮಾಡಿಸಿದ್ದು ಎಂದು ಸಿದ್ದೇಶ್ವರ ಹೇಳುತ್ತಾರೆ ಎಂದು ರಾಮಪ್ಪ ಹೇಳಿದ್ದಾರೆ.

ಸಂಸದರಿಂದ ಹರಿಹರ ತಾಲ್ಲೂಕಿನಲ್ಲಿ ಇದುವರೆಗೆ ಒಂದೂ ಕಾರ್ಖಾನೆ ಪ್ರಾರಂಭಿಸಲು ಆಗಿಲ್ಲ.

ಹರಿಹರ ನಗರದಲ್ಲಿ ವೈದ್ಯಕೀಯ ಕಾಲೇಜು ಮಂಜೂರು ಮಾಡಿಸುವುದಕ್ಕೆ ಸರ್ಕಾರದ ಮಾನದಂಡಗಳ ಪ್ರಕಾರ ಬರಲ್ಲ ಎಂದು ಸಬೂಬು ಹೇಳುತ್ತಿದ್ದಾರೆ ಎಂದವರು ಆರೋಪಿಸಿದರು.

ಮೊನ್ನೆ ಹರಿಹರ ನಗರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿ 100 ಕೋಟಿ ರೂ. ಹಣ ಬಿಡುಗಡೆ ಮಾಡುವಂತೆ ಕೇಳಿಕೊಂಡಾಗ ಗ್ರಾಮೀಣ ಪ್ರದೇಶಕ್ಕೆ 50 ಕೋಟಿ, ನಗರದ ಪ್ರದೇಶಕ್ಕೆ 50 ಕೋಟಿ ಬಿಡುಗಡೆ ಮಾಡುವುದಾಗಿ ಹೇಳಿದರು. ಆದರೆ, ಈಗ 25 ಲಕ್ಷ ರೂ. ನೀಡಿದ್ದಾರೆ. ಉಳಿದ ಹಣವನ್ನು ಯಾವತ್ತು ಬಿಡುಗಡೆ ಮಾಡುತ್ತಾರೋ ಕಾದು ನೋಡಬೇಕು ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆಯಲು 2013 ರಲ್ಲಿ 18 ಆಕಾಂಕ್ಷಿತರು ಇದ್ದರು. 2018 ರಲ್ಲಿ 6 ಆಕಾಂಕ್ಷಿಗಳು ಇದ್ದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 4 ರಿಂದ 6 ಆಕಾಂಕ್ಷಿಗಳು ಇದ್ದಾರೆ. ಯಾವ ಅಭ್ಯರ್ಥಿಗಳು ನ್ಯಾಯದ ಪರವಾಗಿ, ಜನರ ಪರವಾಗಿ, ಅಭಿವೃದ್ಧಿ ಚಿಂತನೆಯನ್ನು ಮಾಡುತ್ತಾರೋ ಅವರನ್ನು ಗುರುತಿಸಿ, ಪಕ್ಷ ಟಿಕೆಟ್ ನೀಡುತ್ತದೆ. ಚುನಾವಣೆ ಸಮಯದಲ್ಲಿ ಈ ಬಗ್ಗೆ ಯೋಚನೆ ಮಾಡೋಣ. ನಾನು ಯಾರಿಗೂ ಆಕಾಂಕ್ಷಿ ಆಗಬೇಡಿ ಎಂದು ಹೇಳಿಲ್ಲ. ಕಾಗಿನಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಜಗದ್ಗುರುಗಳು ಈ ಬಾರಿ ಬೇರೆಯವರಿಗೆ ಹಾಗೂ ಯುವಕರಿಗೆ ಬಿಟ್ಟು ಕೊಡಿ ಎಂದು ಹೇಳುವ ಸಾಧ್ಯತೆ ಕಡಿಮೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಅಬ್ದುಲ್ ಅಲಿಂ, ಮಾಜಿ ಸದಸ್ಯ ಮಹಮ್ಮದ್ ಸಿಗ್ಬತ್ ಉಲ್ಲಾ, ಅಂಜುಮನ್ ಸಂಸ್ಥೆಯ ಅಧ್ಯಕ್ಷ ಮಹಮ್ಮದ್ ಫೈರೋಜ್, ಸನಾವುಲ್ಲಾ ಮತ್ತಿತರರು ಉಪಸ್ಥಿತರಿದ್ದರು.

error: Content is protected !!