ಸಮಾನತೆಯ ಸೌಲಭ್ಯ ಸಿಗದಿದ್ದಾಗ ಹೋರಾಟ ಅನಿವಾರ್ಯ

ಕುಣಿಬೆಳಕೆರೆ: ದೇವಸ್ಥಾನದ ಕಾರ್ಯಕ್ರಮದಲ್ಲಿ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಅಭಿಮತ

ಮಲೇಬೆನ್ನೂರು, ಫೆ. 17- ಸಮಾನತೆಯ ಸೌಲಭ್ಯ ಸಿಗದಿದ್ದಾಗ ಹೋರಾಟ ಅನಿವಾರ್ಯ ಎಂದು ನಿಜ ಶರಣ ಅಂಬಿಗರ ಚೌಡಯ್ಯ ಗುರುಪೀಠದ ಶ್ರೀ ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ ಹೇಳಿದರು.

ಕುಣಿಬೆಳಕೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಗಂಗಾ ಪರಮೇಶ್ವರಿ ದೇವಿಯ ದೇವಸ್ಥಾನದಲ್ಲಿ ನೂತನ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಗಂಗಾಮತ ಸಮಾಜವನ್ನು ಸಂವಿಧಾನದ ಆಶಯದಂತೆ ಎಸ್ಟಿ ಸೌಲಭ್ಯಕ್ಕೆ ಒಳಪಡಿಸದಿರುವುದು ದುರ್ದೈವದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಯಾವುದೇ ಹಿಂದುಳಿದ ಸಮಾಜ ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯ ವಾಗಿ ಬಲಿಷ್ಠವಾದಾಗ ಮಾತ್ರ ಆ ಸಮಾಜದ ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಗಂಗಾಮತ ಸಮಾಜದಲ್ಲಿ ಧಾರ್ಮಿಕ, ಶೈಕ್ಷಣಿಕ ಮತ್ತು ರಾಜಕೀಯ ಕ್ರಾಂತಿ ಆಗಬೇಕೆಂದು ಸ್ವಾಮೀಜಿ ಕರೆ ನೀಡಿದರು.

ಸಮಾರಂಭವನ್ನು ಉದ್ಘಾಟಿಸಿದ ಮಾಜಿ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಈ ಗ್ರಾಮದಲ್ಲಿ ಗಂಗಾಮತ ಸಮಾಜ ಸಣ್ಣ ಸಮಾಜವಾಗಿದ್ದರೂ ಧಾರ್ಮಿಕವಾಗಿ ದೊಡ್ಡ ಸಾಧನೆ ಮಾಡಿದೆ. ನಂಬಿಕೆಗೆ ಮತ್ತೊಂದು ಹೆಸರೇ ಅಂಬಿಗರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಮಾತನಾಡಿ, ಹಿಂದುಳಿದ ಸಮಾಜಗಳ ಸಂಘಟನೆ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಮಠ, ದೇವಸ್ಥಾನಗಳ ಅವಶ್ಯಕತೆ ಇದೆ. ಶ್ರೀಗಳು ಬಹಳ ಜವಾಬ್ದಾರಿ ವಹಿಸಿ ಸಮಾಜದ ಸಂಘಟನೆ ಮತ್ತು ಸಮಾಜಕ್ಕೆ ಸಿಗಬೇಕಾದ ಸೌಲಭ್ಯಗಳ ಕುರಿತು ಸದ್ದಿಲ್ಲದ ಸಾಧನೆ ಮಾಡುತ್ತಿದ್ದಾರೆ ಎಂದರು.

ಗಂಗಾಮತ ಸಮಾಜದ ಜಿಲ್ಲಾಧ್ಯಕ್ಷ ಬಿ.ಕೆ. ಮಂಜುನಾಥ್ ಮಾಗಾನಹಳ್ಳಿ ಮಾತನಾಡಿ, ಈ ಹಿಂದೆ ಹಳ್ಳಿಗಳಲ್ಲಿ  ಹನುಮಪ್ಪ, ಬಸವಣ್ಣ ಮತ್ತು ದುರ್ಗಾಂಬಿಕಾ ದೇವಸ್ಥಾನ ಮಾತ್ರ ಇದ್ದವು. ಈಗ ಜಾತಿಗೊಂದು, ಓಣಿಗೊಂದು ದೇವಸ್ಥಾನಗಳಾಗಿ ಸಾಮರಸ್ಯದ ಜೀವನಕ್ಕೆ ಧಕ್ಕೆ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾಜದ ಮುಖಂಡ ಮಾಗಾನಹಳ್ಳಿ ಹಾಲಪ್ಪ ಮಾತನಾಡಿ, ಹಳ್ಳಿಗಳಲ್ಲಿರುವ ಗಂಗಾಮತ ಸಮಾಜದವರು ಇತರೆ ಸಮಾಜದವರ ಜೊತೆ ಪ್ರೀತಿ-ವಿಶ್ವಾಸದಿಂದಿರಬೇಕೆಂದು ಕಿವಿಮಾತು ಹೇಳಿದರು.

ನಿವೃತ್ತ ಪೊಲೀಸ್ ಅಧಿಕಾರಿ ಕುಣೆಬೆಳಕೆರೆ ದೇವೇಂದ್ರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ಜಿ.ಪಂ. ಮಾಜಿ ಸದಸ್ಯ ಎಂ. ನಾಗೇಂದ್ರಪ್ಪ, ಗೋವಿನಾಳ್ ಬಸವರಾಜಪ್ಪ, ಉದ್ಯಮಿ ಕುಂಬಳೂರು ವಿರೂಪಾಕ್ಷಪ್ಪ, ಸಮಾಜ ಸೇವಕ ನಂದಿಗಾವಿ ಶ್ರೀನಿವಾಸ್, ಸಮಾಜದ ಮುಖಂಡರಾದ ಕೆಂಚನಹಳ್ಳಿ ಮಹಾಂತೇಶಪ್ಪ, ಸಾರಥಿ ಹೊನ್ನಪ್ಪ, ಗ್ರಾಮದ ರುದ್ರಪ್ಪ, ನಿವೃತ್ತ ಡಿವೈಎಸ್ಪಿ ಕೆ. ನಾಗರಾಜಪ್ಪ, ಉಪ ತಹಶೀಲ್ದಾರ್ ಆರ್. ರವಿ, ಮಲೇಬೆನ್ನೂರು ಪುರಸಭೆ ಸದಸ್ಯ ಗೌಡ್ರ ಮಂಜಣ್ಣ, ಸಿಪಿಐ ಹನುಮಂತಪ್ಪ ಶಿರಹಳ್ಳಿ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

ಗಂಗಾಪರಮೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷ ಕೂಲಂಬಿ ಮಹಾದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಕೆ.ಎಂ. ಶಿವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾರುತಿ ಬಾರ್ಕಿ ಸ್ವಾಗತಿಸಿದರು. ಉಪನ್ಯಾಸಕರಾದ ಶ್ರೀಮತಿ ಸುಮತಿ ಜಯ್ಯಪ್ಪ ನಿರೂಪಿಸಿದರು. ಟಿ.ಹೆಚ್. ನಾಗರಾಜ್ ವಂದಿಸಿದರು. 

error: Content is protected !!