ಒಳ್ಳೆಯದು ಸ್ಮರಿಸುವ, ಕೆಟ್ಟದ್ದು ಮರೆಯುವ ಗುಣ ಇರಲಿ

ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಗಳ 14 ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಸಾಣೇಹಳ್ಳಿ, ಫೆ. 17-ಒಳ್ಳೆಯದನ್ನು ಸ್ಮರಿಸುವ, ಕೆಟ್ಟದ್ದನ್ನು ಮರೆಯುವ ಗುಣ ಬೆಳೆಸಿಕೊಳ್ಳಬೇಕು  ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದರು.

ಇಲ್ಲಿನ ಎಸ್.ಎಸ್. ರಂಗಮಂದಿರ ದಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಚರಪಟ್ಟಾಧ್ಯಕ್ಷರಾಗಿದ್ದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳವರ 14 ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ಶ್ರೀಗಳು ಮಾತನಾಡಿದರು.  

ಇಂತಹ ಪೂಜ್ಯರುಗಳನ್ನು ಸ್ಮರಿಸಿಕೊಳ್ಳುವುದೇ ಒಂದು ಸ್ಫೂರ್ತಿ. ಈ ಮೂಲಕ ತರಳಬಾಳು ಗುರು ಪರಂಪರೆಯ ಪರಿಚಯವನ್ನು ಮಕ್ಕಳಿಗೆ ಮಾಡಿಸುತ್ತಿರುವುದು ಸ್ತುತ್ಯಾರ್ಹ ಕೆಲಸವೂ ಆಗಿದೆ ಎಂದರು.

ಶ್ರೀ ತರಳಬಾಳು ಬೃಹನ್ಮಠದಲ್ಲಿ ಪಟ್ಟ, ಚರ, ವಿರಕ್ತ ಎನ್ನುವ ಮೂರು ರೀತಿಯ ಗುರು ವರ್ಗ ಇತ್ತು. ನಾವು ಮಠಕ್ಕೆ ಬಂದಾಗ ಪಟ್ಟದಲ್ಲಿದ್ದವರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾ ಸ್ವಾಮಿಗಳು. ಚರಪಟ್ಟದಲ್ಲಿದ್ದವರು ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿ ಗಳು. ವಿರಕ್ತ ಸ್ವಾಮಿಗಳಾಗಿದ್ದವರು ಶ್ರೀ ಕಾಶಿ ಮಹಲಿಂಗ ಸ್ವಾಮಿಗಳು.  ನಮಗೆ ಈ ಮೂರೂ ಗುರುಗಳ ದರ್ಶನಾಶೀ ರ್ವಾದ ಲಭಿಸಿದ್ದು ನಮ್ಮ ಪುಣ್ಯ. ಮಲ್ಲಿಕಾರ್ಜುನ ಶ್ರೀಗಳು ಸರಳ ಜೀವನ ಸಾಗಿಸಿದವರು. ಕೃಷಿಯನ್ನು, ಕೃಷಿಕರನ್ನು ಬಹುವಾಗಿ ನಂಬಿಕೊಂಡಿದ್ದವರು. ಪೂಜ್ಯರು ನಮಗಿಂತ ಮೂವತ್ತು ವರ್ಷಗಳಷ್ಟು ಹಿರಿಯರಾದರೂ ನಮ್ಮನ್ನು ತುಂಬಾ ಗೌರವದಿಂದ ಕಾಣುತ್ತಿದ್ದರು. ಕಾವಿಧಾರಿಗಳೆಲ್ಲರೂ ಒಂದೇ ಎನ್ನುವ ಭಾವನೆ ಅವರಲ್ಲಿತ್ತು. 

ಹಗಲಿರುಳೆನ್ನದೆ ನಿತ್ಯವೂ ಹೊಲ-ತೋಟಗಳಿಗೆ ಭೇಟಿ ನೀಡುತ್ತಿದ್ದರು. ಇಂದಿನ ಮಠದ ಆರ್ಥಿಕ ಸ್ಥಿತಿ ಸುಧಾರಿ ಸುವಲ್ಲಿ ಅವರು ಹಾಕಿ ಬೆಳೆಸಿದ ಅಡಿಕೆ, ತೆಂಗು, ಹೊಲಗದ್ದೆಗಳ ಆದಾಯವೂ ಕಾರಣ. ಈ ಹಿನ್ನೆಲೆಯಲ್ಲಿ ಅವರು ಕರ್ಮಯೋಗಿಯೆಂದೇ ಹೆಸರಾಗಿದ್ದರು  ಎಂದು ನುಡಿದರು.

ಮುಖ್ಯ ಉಪನ್ಯಾಸಕ ಐ.ಜಿ.ಚಂದ್ರಶೇಖರಯ್ಯ ಮಾತನಾಡಿ, ಮಲ್ಲಿಕಾರ್ಜುನ ಸ್ವಾಮಿಗಳವರು ವಿಭೂತಿ ಪುರುಷರು, ತ್ರಿವಿಧ ದಾಸೋಹಿ ಗಳು, ನೇಗಿಲ ಯೋಗಿಗಳು, ವಿವೇಕಕ್ಕೆ, ವಿದ್ಯೆಗೆ, ವಿಧೇಯತೆಗೆ ಮಾದರಿಯಾದ ವರು. ಇಂತಹ ಪೂಜ್ಯರ ಸ್ಮರಣೆ ಎಲ್ಲ ರಿಗೂ ಪ್ರೇರಣದಾಯಕವಾದುದು ಎಂದರು. 

ಪ್ರಾಸ್ತಾವಿಕವಾಗಿ ಅಧ್ಯಾಪಕ ಹೆಚ್. ಎಸ್. ದ್ಯಾಮೇಶ್ ಮಾತನಾಡಿದರು. ಶಿವ ಸಂಚಾರದ ಹೆಚ್. ಎಸ್. ನಾಗರಾಜ್ ಮತ್ತು ಶರಣ್ ವಚನಗೀತೆ ಹಾಡಿದರು. ಅಧ್ಯಾಪಕ ಜಯಣ್ಣ ಕಾರ್ಯಕ್ರಮ ನಡೆಸಿಕೊಟ್ಟರೆ, ಸಂತೋಷ್ ವಂದಿಸಿದರು. 

error: Content is protected !!