ಚೀಟಿ ಮೂಲಕ ದೊರೆತ ಪಟ್ಟ….
ಭಾವೈಕ್ಯತೆಯನ್ನು ಆಚರಣೆಯಲ್ಲಿ ತೊಡಗಿಸಿಕೊಂಡಿದ್ದ ನನಗೆ ಈ ಪಟ್ಟ ಕೊಡಲು ಈಗಿನ ಜಗದ್ಗುರುಗಳು ಕಳೆದ 18 ವರ್ಷಗಳಿಂದ ಪ್ರಯತ್ನ ನಡೆಸಿದ್ದರು. ನಾನು ಸಮ್ಮತಿ ನೀಡಿರಲಿಲ್ಲ. ತಮ್ಮ ಮನಸ್ಸಿನಲ್ಲಿದ್ದ ಹತ್ತಾರು ಶ್ರೀಗಳ ಹೆಸರು ಹಾಕಿ ಸುಮಾರು 50 ಬಾರಿ ಚೀಟಿ ಎತ್ತಿದರೂ ನನ್ನ ಹೆಸರೇ ಬಂದಿತೆನ್ನುವ ಅವರ ಒತ್ತಡ, ಹಾಗಾಗಿ ನಾನು ಈ ಜವಾಬ್ದಾರಿ ವಹಿಸಿಕೊಂಡೆ ಎಂದು ಶಿರಹಟ್ಟಿ ಮಠದ ಪೀಠಾಧಿಕಾರ ತಮಗೆ ದೊರೆತ ಬಗ್ಗೆ ವಿವರಿಸಿದ ಪಕೀರ ದಿಂಗಾಲೇಶ್ವರ ಶ್ರೀಗಳು ಅಲ್ಲಿನ ಆಚರಣೆ, ಧಾರ್ಮಿಕ ವಿಧಿ, ವಿಧಾನಗಳ ಬಗ್ಗೆ ವಿವರಿಸಿದರು.
ರಾಣೇಬೆನ್ನೂರು, ಫೆ.17- ಓದಲು ಇಷ್ಟಪಡದ ನಿಮ್ಮ ಮಕ್ಕಳಿಗಿಂತ, ಓದಲು ಬಯಸುವ ಇತರರ ಮಕ್ಕಳಿಗೆ ಶಿಕ್ಷಣ ಕೊಡಿಸಿದರೆ ಬಹಳಷ್ಟು ಪುಣ್ಯ ಸಂಪಾದಿಸುವಿರಿ ಎಂದು ಶಿರಹಟ್ಟಿ ಭಾವೈಕ್ಯ ಮಠದ ನೂತನ ಜಗದ್ಗುರು ಶ್ರೀ ಪಕೀರ ದಿಂಗಾಲೇಶ್ವರ ಸ್ವಾಮೀಜಿ ನುಡಿದರು.
ಇಲ್ಲಿನ ಪ್ರಾಚೀನ ಬನಶಂಕರಿ ದೇವಸ್ಥಾನದಲ್ಲಿ ನಡೆದ ಮಂಡಲ ಪೂಜೆ ಹಾಗೂ ಚಂಡಿಕಾ ಹೋಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಹೊಸ ಗುಡಿಗಳನ್ನು ಕಟ್ಟದೇ ಹಾಳಾದ ಗುಡಿಗಳನ್ನು ಜೀರ್ಣೋದ್ಧಾರ ಮಾಡಿ, ಕಟುಕರ ಕೈಗೆ ಹೋಗುವ ಆಕಳುಗಳನ್ನ ರಕ್ಷಿಸಿ, ಪರೋಪಕಾರದೊಂದಿಗೆ ಬದುಕಿನಲ್ಲಿ ಆನಂದ, ಪರಮಾನಂದ ಪಡೆದುಕೊಳ್ಳಿರಿ ಎಂದು ಶ್ರೀಗಳು ಬೋಧಿಸಿದರು.
`ಕಡುದರ್ಪವೇರಿದ ಒಡಲೆಂಬ ಬಂಡಿಗೆ ಮೃಢ ಶರಣರ ನುಡಿಗಡಣವೇ ಕಡೆಗೀಲು’ ಕಾಣಾ ರಾಮನಾಥ ಎನ್ನುವ ಶರಣರ ನುಡಿಯಂತೆ, ಹತ್ತಾರು ವಿಷಯಗಳಿಂದ ತುಂಬಿದ ಮನುಷ್ಯನ ಬದುಕಿಗೆ ಸದ್ಗುರುವಿನ ಬೋಧನೆ ಕಡೆಗೀಲಾಗಿ ಬಂಡಿ ಉರುಳದಂತೆ ಕಾಯುತ್ತದೆ ಎಂದು ಲಿಂಗನಾಯ್ಕನಹಳ್ಳಿ ಜಂಗಮ ಕ್ಷೇತ್ರದ ಶ್ರೀ ಚನ್ನವೀರ ಮಹಾಸ್ವಾಮಿಗಳು ನುಡಿದರು.
ಕಲ್ಲಿಗೆ ಸಂಸ್ಕಾರ ನೀಡಿ ಅದು ಪೂಜೆಗೊಳ್ಳುವಂತೆ ಮಾಡುವ ಶಿಲ್ಪಿಯಂತೆ, ಗುರುಗಳು ಸಂಸ್ಕಾರದ ಸಂಸ್ಕೃತಿ ನೀಡಿ ಅಹಂಕಾರವನ್ನು ಹೋಗಲಾಡಿಸಿ, ಮಮಕಾ ರವನ್ನು ನೀಡುವುದರೊಂದಿಗೆ ಕಡುದರ್ಪ ವೇರಿದ ಮನುಷ್ಯನೆಂಬ ಬಂಡಿ ಉರುಳದಂತೆ ಕಡೆಗೀಲಾಗಿ ಕಾರ್ಯನಿರ್ವಹಿಸುತ್ತಾರೆಂದು ಶ್ರೀಗಳು ನುಡಿದರು.
ಕೆಜಿಗಟ್ಟಲೇ ತುಪ್ಪ ಸುರಿದು, ಉತ್ತಮವಾದ ಮಡಿ ಅರ್ಪಿಸುವುದಕ್ಕಿಂತ, ನಮ್ಮಲ್ಲಿರುವ ದುರಾಚಾರ, ದುರ್ನಡತೆ, ದುರ್ಗುಣ, ದುರ್ವಿಚಾರ ಮುಂತಾದವುಗಳನ್ನು ಹೋಮಕ್ಕೆ ಅರ್ಪಿಸಿದಾಗ ನಮ್ಮ ಬದುಕು ಸಾರ್ಥಕತೆ ಪಡೆಯಲಿದೆ. ಅತ್ತೆ ಹೆಸರಿಟ್ಟರೆ, ತನ್ನ ಉಸಿರು ನೀಡಿ ನಮ್ಮ ಹುಟ್ಟಿಗೆ ಕಾರಣಳಾಗುವ ತಾಯಿಯನ್ನು ತನ್ನ ಉಸಿರಿರುವವರೆಗೂ ಗೌರವಿಸುವವರ ಬದುಕು ಊರ್ಜಿತಗೊಳ್ಳಲಿದೆ ಎಂದು ಶ್ರೀಗಳು ಹೇಳಿದರು.
ದೇವಸ್ಥಾನ ಸಮಿತಿಯ ಅಧ್ಯಕ್ಷ ಮಂಜುನಾಥ ಗೌಡ್ರ ಶಿವಣ್ಣನವರ ದೇವಸ್ಥಾನ ನಿರ್ಮಾಣದಲ್ಲಿ ನಡೆದ ಎಲ್ಲರ ಸಹಕಾರವನ್ನು ಸ್ಮರಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಖಜಾಂಚಿ ಶಿವಪ್ಪ ಹೆದ್ದೇರಿ ಸ್ವಾಗತಿಸಿದರು. ವಾಸ್ತು ತಜ್ಞ ರುದ್ರಪ್ಪ ಕಮ್ಮಾರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ನಗರಾಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ಮುಖಂಡರುಗಳಾದ ಭಾರತಿ ಜಂಬಗಿ, ಭಾರತಿ ಅಳವಂಡಗಿ, ಕರಿಬಸಪ್ಪ ಮಾಕನೂರ, ಅರ್ಚಕ ಗಿರೀಶ ಶರ್ಮಾ ಮತ್ತಿತರರಿದ್ದರು.