ವ್ಯಕ್ತಿತ್ವ ವಿಕಸನದಿಂದ ಉನ್ನತ ಹುದ್ದೆ ಹೊಂದಲು ಸಾಧ್ಯ : ತರಳಬಾಳು ಶ್ರೀ

ಸಿರಿಗೆರೆ, ಫೆ.17- ವಿದ್ಯಾರ್ಥಿಗಳು  ಕಿವಿಕೊಟ್ಟು ಕೇಳುವುದರ ಜೊತೆಗೆ ಮನನ ಮಾಡಿಕೊಂಡು ಅದರ ಬಗ್ಗೆ ವಿಚಾರ ಮಾಡುವುದು ಸೂಕ್ತ. ಕೇಳುವಾಗ ಶ್ರದ್ಧೆಯಿಂದ ಕೇಳಬೇಕು. ನಂತರ ವಿಚಾರಿಸಿ ಬಳಸಿಕೊಳ್ಳಬೇಕು. ಚೆನ್ನಾಗಿ ಓದದೇ ಇದ್ದರೆ ಜೀವನ ಪರಿವರ್ತನೆಯಾಗುವುದಿಲ್ಲ ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ಇಲ್ಲಿನ ಶ್ರೀ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವದ ಮೂರನೇ ದಿನದ ಕಾರ್ಯಕ್ರಮದಲ್ಲಿ ವ್ಯಕ್ತಿತ್ವ ವಿಕಸನ ವಿಚಾರ ಗೋಷ್ಠಿಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ವ್ಯಕ್ತಿತ್ವ ವಿಕಸನದಿಂದ ಉನ್ನತ ಹುದ್ದೆ ಹೊಂದಲು ಸಾಧ್ಯ. ಪ್ರತಿಕ್ರಿಯೆ ನೀಡಿದ ರೀತಿ ನೀವುಗಳು ಪ್ರತಿಜ್ಞಾ ವಿಧಿಯನ್ನು ಪಾಲಿಸಬೇಕು. ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು.  ಚಿಂತನೆ, ತಪಸ್ಸು ಮಾಡಿ ಉತ್ತಮ ಜ್ಞಾನಿಗಳಾಗಬೇಕು ಎಂದು ಹೇಳಿದರು.

ಶಿಕಾರಿಪುರ ಸಾಧನಾ ಅಕಾಡೆಮಿಯ ಸಂಸ್ಥಾಪಕ ಬಿ.ಮಂಜುನಾಥ್,  ಎಸ್ಸೆಸ್ಸೆಲ್ಸಿ, ಪಿಯುಸಿ ನಂತರ ಮುಂದೇನು ಎಂಬ ವಿಷಯದ ಬಗ್ಗೆ ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿ,  ವಿದ್ಯಾರ್ಥಿಗಳಲ್ಲಿ ಬದುಕಿನ ಆಯ್ಕೆ ಹೇಗಿರಬೇಕೆಂದರೆ ನಾವು ಗುಣಾತ್ಮಕವಾಗಿ ಯೋಚಿಸುವ ಆಯ್ಕೆಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಇನ್ನೊಬ್ಬರ ಸಿದ್ಧಾಂತಗಳಿಗೆ ಸಿಲುಕಬೇಡಿ. ನಿಮ್ಮದೇ ಆದ ಸಿದ್ಧಾಂತಗಳನ್ನು ರೂಪಿಸಿಕೊಳ್ಳಿ. ಆಗ ಮಾತ್ರ ಬದುಕಿನ ಫಲಿತಾಂಶ ವೃದ್ಧಿಸುತ್ತದೆ. ವಿದ್ಯಾರ್ಥಿಗಳಾದ ನಿಮಗೆ ಜೀವನದಲ್ಲಿ ಅತ್ಯುತ್ತಮ ಶಕ್ತಿ ಇದೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.

ಮೈಸೂರಿನ ವ್ಯಕ್ತಿತ್ವ ವಿಕಸನ ತರಬೇತುದಾರ ಡಾ. ಚೇತನ್ ರಾಮ್‌ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ವ್ಯಕ್ತಿತ್ವ ಇರುತ್ತದೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಇರುವುದನ್ನು ತಿಳಿದರೆ ಮುಂದಿನದನ್ನು ಯೋಚಿಸಿ, ಕಂಡುಹಿಡಿದು ಬದಲಾವಣೆ ತಂದು ಇನ್ನು ಉತ್ತಮಗೊಳಿಸಬಹುದು. ಆಗ ಮಾತ್ರ ಬದಲಾವಣೆ ತರಲು ಸಾಧ್ಯ. 

ಪ್ರತಿಯೊಬ್ಬರೂ ಅಗತ್ಯವಾದುದನ್ನು ಮಾತ್ರ ಬಳಸಿ ಕೊಳ್ಳಿ. ಸಾಧನೆಗಾಗಿ ಬದಲಾವಣೆ ಅಗತ್ಯ. ಸಮಯ ಚಿಕ್ಕ ದಾದರೂ ಸರಿ ಒಬ್ಬ ಮನುಷ್ಯ ಒಂದಷ್ಟು ಹೊತ್ತು ಒಂದೇ ಕೆಲಸವನ್ನು ಮಾಡಿದರೆ ಅದೇ ಏಕಾಗ್ರತೆ ಎಂದರು.

ಕಾರ್ಯಕ್ರದಲ್ಲಿ   ಜಿ.ಮಂಜುನಾಥ್, ಡಾ.ಆರ್.ಎ. ಚೇತನ್‍ರಾಮ್‌, ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಎಸ್.ಬಿ.ರಂಗನಾಥ್, ವಿಶೇಷಾಧಿಕಾರಿ ಎಚ್.ವಿ.ವಾಮದೇವಪ್ಪ, ಶಾಲಾ-ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕ ವರ್ಗ, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೆ.ಎನ್.ನಟರಾಜ್ ಸ್ವಾಗತಿಸಿದರು, ಎಚ್.ವಿ.ನವೀನ್‍ಕುಮಾರ್ ನಿರೂಪಿಸಿದರು, ಸಿ.ಜಿ.ಗೋವರ್ಧನ್ ಶರಣು ಸಮರ್ಪಿಸಿದರು.

error: Content is protected !!