ದಾವಣಗೆರೆ, ಫೆ.17- ಸುನೀತ ಕವನಗಳ ವಿನೀತ ಕವಿಯಾಗಿದ್ದ ನಾಡೋಜ ಚೆನ್ನವೀರ ಕಣವಿಯವರು ಸದಾ ಸಾಮಾಜಿಕ ಬದಲಾವಣೆಗಾಗಿ ತುಡಿಯುತ್ತಿದ್ದ ಸಮನ್ವಯ ಕವಿಯಾಗಿದ್ದರು. ಹಾಗಾಗಿ ಸರ್ಕಾರವು ಚೆನ್ನವೀರ ಕಣವಿಯವರಿಗೆ ಮರಣೋತ್ತರವಾಗಿ ರಾಷ್ಟ್ರ ಕವಿ ಗೌರವ ನೀಡಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ತಿಳಿಸಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ನಾಡೋಜ ಚೆನ್ನವೀರ ಕಣವಿಯವರ ನಿಧನದ ಹಿನ್ನೆಲೆಯಲ್ಲಿ ಅವರ ಗೌರವಾರ್ಥ ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ನ ವತಿಯಿಂದ ಇಂದು ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಷ್ಟ್ರ ಕವಿ ಗೌರವ ಚೆನ್ನವೀರ ಕಣವಿಯವರಿಗೆ ಸಲ್ಲಬೇಕೆಂಬುದು ನಾಡಿನ ಹಲವಾರು ಸಾಹಿತ್ಯಾಸಕ್ತರ ಒತ್ತಾಸೆಯಾಗಿತ್ತು. ಇತ್ತೀಚಿಗೆ ಕಸಾಪ ಅಧ್ಯಕ್ಷ, ನಾಡೋಜ ಮಹೇಶ್ ಜೋಷಿಯವರು ಕೂಡಾ ಸರ್ಕಾರಕ್ಕೆ ಈ ಬಗ್ಗೆ ಮನವಿ ಮಾಡಿದ್ದರು.
ಆದರೆ, ಸರ್ಕಾರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮೊದಲೇ ಕಣವಿಯವರನ್ನು ನಾವು ಕಳೆದುಕೊಂಡಿದ್ದೇವೆ.
ಸರ್ಕಾರವು ಈಗಲಾದರೂ ಮರಣೋತ್ತರವಾಗಿ ಚೆನ್ನವೀರ ಕಣವಿಯವರಿಗೆ ರಾಷ್ಟ್ರ ಕವಿ ಗೌರವ ನೀಡಬೇಕೆಂದು ಮನವಿ ಮಾಡಿದರು.
ಸಾರಸ್ವತ ಲೋಕದ ಸಮಕಾಲೀನ ದಿಗ್ಗಜರು ಹಾಗೂ ಕಿರಿಯ ಕವಿಗಳೊಂದಿಗೂ ಅತ್ಯಂತ ಸಮನ್ವಯತೆಯಿಂದ ಇರುತ್ತಿದ್ದರು. ಯುವ ಪ್ರತಿಭೆಗಳನ್ನು ಪ್ರೀತಿಯಿಂದ ಬೆನ್ನು ತಟ್ಟಿ ಮಾರ್ಗದರ್ಶನ ಮಾಡಿ ಪ್ರೋತ್ಸಾಹಿಸುವ ಗುಣ ಅವರದಾಗಿತ್ತು ಎಂದು ಹೇಳಿದರು.
ಜಾನಪದ ತಜ್ಞ ಡಾ. ಎಂ.ಜಿ. ಈಶ್ವರಪ್ಪ ಮಾತನಾಡಿ, ನವೋದಯ-ನವ್ಯ ಕಾವ್ಯ ಕಾಲಘಟ್ಟದಲ್ಲಿ ಕಣವಿಯವರು ತಮ್ಮ ತನವನ್ನು ಉಳಿಸಿಕೊಳ್ಳುವ ಬದ್ಧತೆಯನ್ನು ತೋರಿದ್ದು ವಿಶೇಷವಾಗಿತ್ತು.
ಕಣವಿಯವರ `ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಹಸಿ ಗೋಡೆಯ ಹರಳಿನಂತೆ ಹುಸಿ ಹೋಗದ ಕನ್ನಡ ಎನ್ನುವ ಸೊಗಸಾದ ಕವನವು ಕನ್ನಡಿಗರಲ್ಲಿ ಭಾಷಾ ಅಭಿಮಾನದ ಪ್ರಜ್ಞೆ ಹೆಚ್ಚಿಸಲು ಕಾರಣವಾಗಿತ್ತು ಎಂದರು.
ರಂಗಕರ್ಮಿ ಬಾ.ಮ. ಬಸವರಾಜಯ್ಯ ಮಾತನಾಡಿ, ಕನ್ನಡದ ಶ್ರೇಷ್ಠ ಕವಿ ಹಾಗೂ ಬರಹಗಾರರಾಗಿದ್ದ ಚೆನ್ನವೀರ ಕಣವಿಯವರ ಸತ್ವಯುತ ಬರಹ ಹಾಗೂ ಮೌಲ್ಯಯುತ ಬದುಕು ಅನೇಕರಿಗೆ ಸ್ಪೂರ್ತಿ ಎಂದರು.
ಜಿಲ್ಲಾ ಕಸಾಪ ನಿಕಟ ಪೂರ್ವ ಅಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ ಮಾತನಾಡಿ, ಕನ್ನಡ ಕಾವ್ಯ ಲೋಕದ ಶ್ರೀಮಂತಿಕೆಗೆ ಕಣವಿಯವರ ಕೊಡುಗೆ ಗಣನೀಯವಾಗಿದೆ ಎಂದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಸ್.ಬಿ. ರಂಗನಾಥ್, ವಿಶ್ರಾಂತ ಪ್ರಾಂಶುಪಾಲ ಎ.ಬಿ. ರಾಮಚಂದ್ರಪ್ಪ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎ.ಆರ್. ಉಜ್ಜನಪ್ಪ, ಜಿಲ್ಲಾ ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ, ತಾಲ್ಲೂಕು ಕಸಾಪ ಅಧ್ಯಕ್ಷರಾದ ಸುಮತಿ ಜಯಪ್ಪ ಅವರು ಅಗಲಿದ ಕಣವಿಯವರಿಗೆ ನುಡಿ ನಮನ ಸಲ್ಲಿಸಿದರು.
ಸಾಹಿತಿ ವೀಣಾ ಕೃಷ್ಣಮೂರ್ತಿ ಅವರು ಚೆನ್ನವೀರ ಕಣವಿಯವರ ಕುರಿತ
ಸ್ವರಚಿತ ಕವನವನ್ನು ವಾಚಿಸಿ, ಕಾವ್ಯ
ನಮನ ಸಲ್ಲಿಸಿದರು. ಜಿಲ್ಲಾ ಕಸಾಪ
ಗೌರವ ಕೋಶಾಧ್ಯಕ್ಷ ಕೆ. ರಾಘವೇಂದ್ರ ನಾಯರಿ ಸ್ವಾಗತಿಸಿದರು.
ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ ನಿರೂಪಿಸಿದರು. ಗೌರವ ಕಾರ್ಯದರ್ಶಿ ಬಿ. ದಿಳ್ಯೆಪ್ಪ ವಂದಿಸಿದರು.
ಹಿರಿಯ ಛಾಯಾಗ್ರಾಹಕ ಹೆಚ್.ಬಿ. ಮಂಜುನಾಥ್, ಜಾನಪದ ಅಕಾಡೆಮಿ ಸದಸ್ಯರಾದ ಶ್ರೀಮತಿ ಸಿ.ಕೆ.ರುದ್ರಾಕ್ಷಿ ಬಾಯಿ, ಇಂದಿರಾ ಗುರುಸ್ವಾಮಿ, ಕನ್ನಡಪರ ಹೋರಾಟಗಾರ ಬಂಕಾಪುರ ಚನ್ನಬಸಪ್ಪ, ವಿಶ್ರಾಂತ ಉಪನ್ಯಾಸಕ ಸುಭಾಷ್
ಚಂದ್ರ ಭೋಸ್, ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷ ಕೆ.ಎನ್. ಸ್ವಾಮಿ, ಸಂತೆಬೆನ್ನೂರು ಕೆ.ಸಿ. ರಾಜ್ ಅಹಮದ್, ಬೇತೂರು ಷಡಾಕ್ಷರಪ್ಪ, ಗೋಪನಾಳ್ ಪಾಲಾಕ್ಷಪ್ಪ, ಎಮ್.ಬಿ. ರೇವಣಸಿದ್ದಪ್ಪ, ದಾಗಿನಕಟ್ಟೆ ಪರಮೇಶ್ವರಪ್ಪ, ಎಸ್.ಎಮ್. ಮಲ್ಲಮ್ಮ, ಜ್ಯೋತಿ ಉಪಾಧ್ಯಾಯ, ಸತ್ಯಭಾಮ ಮಂಜುನಾಥ, ಶಿಕ್ಷಕಿಯರಾದ ಎಮ್. ರಾಧಾ, ಕಲ್ಪನಾ, ಕೆ. ವೀಣಾ, ಎಲ್. ನಾಗವೇಣಿ, ರುಕ್ಮಾಬಾಯಿ, ಕೂಲಂಬಿ ಜಗದೀಶ್, ಬಿ.ಎಸ್. ಜಗದೀಶ್, ಸಿರಿಗೆರೆ ನಾಗರಾಜ, ಭೈರವೇಶ್ವರ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.