ಅಡವಿಟ್ಟು ಪಡೆದಿದ್ದ ಹಣ ನೀಡಲಾಗದೇ ಕೊಲೆ !
ಕುಮಾರ್ ಎಂಬ ಪ್ರಮುಖ ಆರೋಪಿಯು ವೃದ್ಧ ಗುರುಸಿದ್ದಯ್ಯ ಅವರ ಬಳಿ ಕಳೆದ ಎರಡು ತಿಂಗಳ ಹಿಂದೆ ತನ್ನ ಹೆಂಡತಿಯ ಒಡವೆಗಳನ್ನು ಅಡವಿಟ್ಟು ಮೂರು ಲಕ್ಷ ರೂ. ಹಣ ಪಡೆದಿದ್ದ. ಹೀಗೆ ಪಡೆದಿದ್ದ ಹಣವನ್ನು ಜೂಜಾಡಿ ಕಳೆದುಕೊಂಡಿದ್ದ. ವೃದ್ಧ ದಂಪತಿಯ ಮನೆಯಲ್ಲಿ ಹಣ ಮತ್ತು ಬಂಗಾರ ಇರುವುದು ಆತನಿಗೆ ತಿಳಿದಿತ್ತು. ಅಡವಿಟ್ಟು ಪಡೆದಿದ್ದ ಹಣವನ್ನು ಕೊಡದೇ ಬಂಗಾರವನ್ನು ಪಡೆಯಬೇಕೆಂಬ ಉದ್ದೇಶವಿಟ್ಟುಕೊಂಡು ಸಂಚು ರೂಪಿಸಿದ್ದ. ಅಂತೆಯೇ ಕುಮಾರ್ ಬೆಂಗಳೂರಿನಲ್ಲಿದ್ದ ತನ್ನ ಇಬ್ಬರು ಸ್ನೇಹಿತರನ್ನು ಕರೆಸಿ ವೃದ್ಧ ದಂಪತಿಯ ಮನೆಗೆ ನುಗ್ಗಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದರು. ಅಲ್ಲದೇ ಮನೆಯಲ್ಲಿದ್ದ ನಗದು ಮತ್ತು ಬಂಗಾರವನ್ನು ದೋಚಲಾಗಿತ್ತು.
ಕೊಲೆಯ ಪ್ರಮುಖ ಆರೋಪಿ ಕುಮಾರ್ ಸಣ್ಣ ವಯಸ್ಸಿನಿಂದಲೇ ವೃದ್ಧ ದಂಪತಿ ಜೊತೆಗೆ ಒಡನಾಟವಿಟ್ಟುಕೊಂಡಿದ್ದ. ದಂಪತಿ ಕೊಲೆಯಾದ ದಿನದಂದು ಆ ದಂಪತಿ ಮನೆಯಲ್ಲೇ ಇದ್ದು, ಊಟ ಮಾಡಿ ರಾತ್ರಿ ವೇಳೆ ಮೊದಲೇ ಸಂಚು ರೂಪಿಸಿದಂತೆ ತನ್ನ ಸ್ನೇಹಿತರೊಂದಿಗೆ ಸೇರಿ ಚಾಕುವಿನಿಂದ ಕೊಲೆ ಮಾಡಿದ್ದನೆನ್ನಲಾಗುತ್ತಿದೆ.
ದಾವಣಗೆರೆ, ಫೆ.3- ಎಲೆಬೇತೂರು ಗ್ರಾಮದ ವೃದ್ಧ ದಂಪತಿಯ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪರಿಚಯಸ್ಥ ಸೇರಿದಂತೆ, ಮೂವರು ಆರೋಪಿಗಳನ್ನು ದಾವ ಣಗೆರೆ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿ, 9.27 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಮತ್ತು ಒಂದು ಬೈಕ್ ವಶಪಡಿಸಿ ಕೊಂಡಿದ್ದಾರೆ.
ಎಲೆಬೇತೂರು ಗ್ರಾಮದ ವೃದ್ಧ ದಂಪತಿಯ ಪರಿಚಯಸ್ಥ ನೆನ್ನಲಾದ ಕುಮಾರ್ ಹಾಗೂ ಹರ ಪನಹಳ್ಳಿಯ ಮರಿಯಪ್ಪ, ಕೂಡ್ಲಿ ಗಿಯ ಪರಶುರಾಮ್ ಬಂಧಿತರು.
ಕಳೆದ ಜನವರಿ 24, 2022ರಂದು ರಾತ್ರಿ ಗುರುಸಿದ್ದಯ್ಯ ಮತ್ತು ಸರೋಜಮ್ಮ ಎಂಬ ವೃದ್ಧ ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಲು ಮತ್ತು ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚಿಸಲಾಗಿತ್ತು. ಜಿಲ್ಲಾ ಎಸ್ಪಿ ಸಿ.ಬಿ. ರಿಷ್ಯಂತ್, ಹೆಚ್ಚುವರಿ ಎಸ್ಪಿ ರಾಮಗೊಂಡ ಬಸರಗಿ, ಪ್ರೊಬೇಷನರಿ ಐಪಿಎಸ್ ಹೆಚ್.ಎನ್. ಮಿಥುನ್, ಜಿಲ್ಲಾ ಅಪರಾಧ ದಾಖಲೆಗಳ ಘಟಕದ ಆರಕ್ಷಕ ಉಪಾಧೀಕ್ಷ ಬಿ.ಎಸ್. ಬಸವರಾಜ್, ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ಲಿಂಗನಗೌಡ ನೆಗಳೂರು, ಪಿಎಸ್ಐ ಲಕ್ಷ್ಮಣ್, ಡಿಸಿಆರ್ಬಿ ಎಎಸ್ಐ ಎಂ. ಆಂಜಿನಪ್ಪ ಸಿಬ್ಬಂದಿಗಳಾದ ಕೆ.ಸಿ. ಮಜೀದ್, ಕೆ.ಟಿ. ಆಂಜನೇಯ, ಡಿ. ರಾಘವೇಂದ್ರ, ಯು. ಮಾರುತಿ, ಪಿ. ಸುರೇಶ್, ಜೆ.ಹೆಚ್.ಆರ್. ನಟರಾಜ್, ಇ.ಬಿ. ಅಶೋಕ, ಆರ್. ರಮೇಶ್ನಾಯ್ಕ್, ಸಿ.ಎಸ್. ಬಾಲರಾಜ್, ಸಿ. ಮಲ್ಲಿಕಾರ್ಜುನ್, ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಮಂಜನಗೌಡ, ದೇವೇಂದ್ರ ನಾಯ್ಕ, ಮಹೇಶ್, ರಾಜು ಲಂಬಾಣಿ, ಷಣ್ಮುಖ, ಮಂಜುನಾಥ, ನಾಗರಾಜಯ್ಯ, ಅಣ್ಣಪ್ಪ, ರಾಘವೇಂದ್ರ, ಉಮೇಶ್ ಬಿಸ್ನಾಳ, ಶಾಂತರಾಜ್, ಬಸವರಾಜ್, ನಿಂಗರಾಜ್, ನೂರುಲ್ಲಾ ಷರೀಫ್, ನೂರುಲ್ಲಾ ಒಳಗೊಂಡ ತಂಡವು ಈ ಕೊಲೆ ಪ್ರಕರಣವನ್ನು ಭೇದಿಸಿದೆ.
ಮನೆಯಿಂದ ದೋಚಿಕೊಂಡು ಹೋಗಿದ್ದ 1.75 ಲಕ್ಷ ನಗದು, 188 ಗ್ರಾಂ ಬಂಗಾರದ ಆಭರಣಗಳು ಸೇರಿ ಒಟ್ಟು 9.27 ಲಕ್ಷ ಮೌಲ್ಯದ ಬಂಗಾರ, ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹವನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಇಂದು ಮಾಹಿತಿ ನೀಡಿದರು.
ಸಾರ್ವಜನಿಕರಲ್ಲಿ ಈ ಕೊಲೆ ಪ್ರಕರಣ ನಾನಾ ಊಹಾ-ಪೋಹಕ್ಕೆ ಎಡೆಮಾಡಿಕೊಟ್ಟಿತ್ತು. ಅದರೊಂದಿಗೆ ಬಹಳಷ್ಟು ಕುತೂಹಲ ಮೂಡಿಸಿದ್ದ ಜೋಡಿ ಕೊಲೆ ಪ್ರಕರಣವನ್ನು ಪೊಲೀಸರು 10 ದಿನಗಳಲ್ಲಿ ಭೇದಿಸಿದ್ದಾರೆ.
ಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ರಾಮಗೊಂಡ ಬಸರಗಿ ಸೇರಿದಂತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.