ಜಿಲ್ಲೆಯಲ್ಲಿ ಅಂತರ್ಜಲ ಗಣನೀಯ ಏರಿಕೆ

ಅಂತರ್ಜಲದ ಅತಿ ಬಳಕೆ ತಾಲ್ಲೂಕುಗಳಾದ ಚನ್ನಗಿರಿ, ಜಗಳೂರಲ್ಲೂ ಹೆಚ್ಚಳ

ದಾವಣಗೆರೆ, ನ. 28 – ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಮಳೆ ಉತ್ತಮವಾಗಿರುವುದರಿಂದ ಅಂತರ್ಜಲ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಕೇಂದ್ರ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಅಂತರ್ಜಲದ ಅತಿ ಬಳಕೆಯ ತಾಲ್ಲೂಕುಗಳು ಎಂದು ಗುರುತಿಸಲಾಗಿದ್ದ ಚನ್ನಗಿರಿ ಹಾಗೂ ಜಗಳೂರುಗಳಲ್ಲಿಯೂ ಅಂತರ್ಜಲ ಮಟ್ಟ ಏರುಮುಖವಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗಿರುವ ಜೊತೆಗೆ ನವೆಂಬರ್‌ವರೆಗೂ ಮಳೆ ಯಾಗುತ್ತಿದೆ. ನದಿ ನೀರನ್ನು ಕೆರೆಗಳಿಗೆ ತುಂಬಿಸುವ ಕಾಮಗಾರಿಗಳು ಪೂರ್ಣಗೊಳ್ಳುತ್ತಿರುವುದರಿಂದ ಅಂತರ್ಜಲದ ಮೇಲಿನ ಅವಲಂಬನೆ ಕಡಿಮೆ ಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2017 ಹಾಗೂ 2018ರಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ ಅಂತರ್ಜಲ ಮಟ್ಟ ಜಿಲ್ಲಾದ್ಯಂತ ಕುಸಿತ ಕಂಡಿತ್ತು. ನಂತರದ ಮೂರು ವರ್ಷಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿನ ಮಟ್ಟದಲ್ಲಿದೆ. 2021ರಲ್ಲಿಯೂ ನವೆಂಬರ್‌ವರೆಗೆ ಮಳೆ ಬಂದ ಕಾರಣದಿಂದ, 2022ರಲ್ಲಿಯೂ ಅಂತರ್ಜಲ ಮಟ್ಟ ಹೆಚ್ಚಿನ ಹಂತದಲ್ಲೇ ಮುಂದುವರೆಯಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಜಿಲ್ಲೆಯ ಒಟ್ಟು 48 ಬೋರ್‌ವೆಲ್‌ ಹಾಗೂ ತೆರೆದ ಬಾವಿಗಳಲ್ಲಿ ಪ್ರತಿ ತಿಂಗಳು ಅಂತರ್ಜಲ ಮಟ್ಟದ ಅಧ್ಯಯನ ಮಾಡಿ ವರದಿ ರೂಪಿಸಲಾಗುತ್ತದೆ. ಎಷ್ಟು ಮೀಟರ್ ಆಳದಲ್ಲಿ ನೀರು ಸಿಗುತ್ತದೆ ಎಂಬ ಆಧಾರದ ಮೇಲೆ ಅಂತರ್ಜಲ ಮಟ್ಟ ನಿರ್ಧಾರವಾಗುತ್ತದೆ. ನೀರು ಸಿಗುವ ಆಳ ತಳ ಮಟ್ಟಕ್ಕೆ ಹೋದಷ್ಟೂ ಅಂತರ್ಜಲ ಕಡಿಮೆಯಾಗುತ್ತದೆ ಎಂದು ಅಂತರ್ಜಲ ನಿರ್ದೇಶನಾಲಯದ ಜಿಲ್ಲಾ ಹಿರಿಯ ಭೂವಿಜ್ಞಾನಿ ಆರ್. ಬಸವರಾಜ್ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಪ್ರತಿ ಮೂರು ವರ್ಷಗಳಿಗೊಮ್ಮೆ ಅಂತರ್ಜಲ ಕುರಿತು ಅಧ್ಯಯನ ನಡೆಸುತ್ತದೆ. 2015 ಹಾಗೂ 2017ರಲ್ಲಿ ನಡೆಸಲಾದ ಅಧ್ಯಯನದಲ್ಲಿ ಜಗಳೂರು ಹಾಗೂ ಚನ್ನಗಿರಿಗಳು ಅಂತರ್ಜಲ ಅತಿ ಬಳಕೆ ತಾಲ್ಲೂಕುಗಳೆಂದು ಗುರುತಿಸಲ್ಪಟ್ಟಿದ್ದವು ಎಂದವರು ತಿಳಿಸಿದ್ದಾರೆ.

ಇತ್ತೀಚೆಗೆ ತಮ್ಮ ಕಚೇರಿಯಿಂದ ಅಂತರ್ಜಲ ಮಾಪನ ಮಾಡಿದಾಗ ಎರಡೂ ತಾಲ್ಲೂಕುಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದು ಕಂಡು ಬಂದಿದೆ. 2017ರ ಡಿಸೆಂಬರ್‌ನಲ್ಲಿ ಚನ್ನಗಿರಿಯಲ್ಲಿ 9.66 ಮೀಟರ್ ಆಳದಲ್ಲಿ ಅಂತರ್ಜಲ ದೊರೆಯುತ್ತಿತ್ತು. ಇದು 2021ರ ಡಿಸೆಂಬರ್‌ನಲ್ಲಿ 2.90 ಮೀಟರ್‌ಗೆ ತಲುಪಿದೆ.

2017ರ ಡಿಸೆಂಬರ್‌ನಲ್ಲಿ ಜಗಳೂರಿನಲ್ಲಿ 19.81 ಮೀಟರ್ ಆಳದಲ್ಲಿ ಅಂತರ್ಜಲ ಸಿಗುತ್ತಿತ್ತು. 2021ರ ಡಿಸೆಂಬರ್‌ನಲ್ಲಿ 14.33 ಮೀಟರ್ ಮಟ್ಟದಲ್ಲಿ ಅಂತರ್ಜಲ ದೊರೆಯುತ್ತಿದೆ ಎಂದು ಬಸವರಾಜ್‌ ತಿಳಿಸಿದ್ದಾರೆ.

ದಾವಣಗೆರೆ ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ 13.47 ಮೀಟರ್‌ಗಳಿಂದ 3.58 ಮೀಟರ್‌ಗೆ ತಲುಪಿದೆ. ಹರಿಹರದಲ್ಲಿ 4.65 ಮೀಟರ್‌ಗಳಿಂದ 3.18 ಮೀಟರ್‌ಗೆ ತಲುಪಿದೆ.

2017ರಲ್ಲಿ ಅವಿಭಜಿತ ಹೊನ್ನಾಳಿಯಲ್ಲಿ ಅಂತರ್ಜಲ ದೊರೆಯುವ ಮಟ್ಟ 6.02 ಮೀಟರ್‌ ಆಳದಲ್ಲಿತ್ತು. 2021ರಲ್ಲಿ ಹೊನ್ನಾಳಿಯಲ್ಲಿ 1.97 ಮೀಟರ್ ಆಗಿದ್ದರೆ, ನ್ಯಾಮತಿಯಲ್ಲಿ 4.13 ಮೀಟರ್ ಆಗಿದೆ ಎಂದು ಬಸವರಾಜ್ ಹೇಳಿದ್ದಾರೆ.

ಜಿಲ್ಲೆಯ ಆರು ತಾಲ್ಲೂಕುಗಳ ಅಂತರ್ಜಲ ಮಟ್ಟವನ್ನು ಪರಿಗಣಿಸಿದಾಗ, ಒಟ್ಟಾರೆ ಶೇ.40ರವರೆಗೂ ಆಂತರ್ಜಲ ಏರಿಕೆಯಾಗಿರುವ ಅಂದಾಜು ಸಿಗುತ್ತದೆ. ಜಿಲ್ಲೆಯಲ್ಲಿ ಪ್ರಸಕ್ತ ನಡೆಯುತ್ತಿರುವ ಕೆರೆ ತುಂಬಿಸುವ ಯೋಜನೆಗಳು ತ್ವರಿತವಾಗಿ ಜಾರಿಯಾದಲ್ಲಿ ಅಂತರ್ಜಲ ಮಟ್ಟ ಇನ್ನಷ್ಟು ಹೆಚ್ಚಿ, ಜನರಿಗೆ ವಿಶೇಷವಾಗಿ ರೈತರಿಗೆ ಅನುಕೂಲವಾಗುವುದರಲ್ಲಿ ಸಂಶಯವಿಲ್ಲ.

error: Content is protected !!