ದಾವಣಗೆರೆ, ಜ. 28- ಹೆಣ್ಣು ಸಮಾಜದ ಮತ್ತು ದೇಶದ ಸಂಪತ್ತು. ಸೂಕ್ತ ಶಿಕ್ಷಣ, ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಿದಲ್ಲಿ ಆಕೆ ಜಗತ್ತನ್ನೇ ಆಳಬಲ್ಲಳು ಎಂದು ಜಿಲ್ಲಾ ಲೀಡ್ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಸುಶೃತ್ ಡಿ. ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಕ್ರಿಕೆಟ್ ಪಟು ರಕ್ಷಿತಾ ನಾಯಕ ಹಾಗೂ ಕರಾಟೆ ಪಟು ಡಿ. ಚಾಣಸ್ಯಾ ಅವರನ್ನು ಲೀಡ್ ಬ್ಯಾಂಕ್ ಕಛೇರಿಯಲ್ಲಿ ಸನ್ಮಾನಿಸಿ ಅವರು ಮಾತನಾಡಿದರು.
ಹೆಣ್ಣು ಮಗು ಎದುರಿಸುತ್ತಿರುವ ಅಸಮಾನತೆ, ಶಿಕ್ಷಣ, ಪೋಷಣೆ, ಬಾಲ್ಯ ವಿವಾಹ, ಕಾನೂನು ಹಕ್ಕುಗಳು ಮತ್ತು ವೈದ್ಯಕೀಯ ಆರೈಕೆ, ರಕ್ಷಣೆ, ಗೌರವದಂತಹ ಸಮಸ್ಯೆಗಳ ಬಗ್ಗೆ ಜನಜಾಗೃತಿಯನ್ನು ಉತ್ತೇಜಿ ಸುವುದು ಹೆಣ್ಣು ಮಕ್ಕಳ ಆಚರಣೆಯ ಮೂಲ ಉದ್ದೇಶವಾಗಿದೆ ಎಂದವರು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೆನರಾ ಬ್ಯಾಂಕ್ ಎಂ.ಎಸ್.ಎಂ.ಇ. ನ ವಿಭಾಗೀಯ ಪ್ರಬಂಧಕ ಅಶೋಕ ತೀಕೆ ಮಾತನಾಡಿದರು.
ರಕ್ಷಿತಾ ನಾಯಕ ಅವರ ತಂದೆ ರೈತ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ಹೆಣ್ಣು ಮಕ್ಕಳಿಗೆ ಪ್ರೋತ್ಸಾಹಿ ಸುವುದರ ಜೊತೆಗೆ ಕ್ರೀಡಾ ಪಟುಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಸಹ ಒದಗಿಸಲು ಮನವಿ ಮಾಡಿದರು.
ಕೆ. ರಾಘವೇಂದ್ರ ನಾಯರಿ ನಿರೂಪಿಸಿದರು. ಎನ್. ರಾಮಮೂರ್ತಿ ಸಾಧಕರನ್ನು ಪರಿಚಯಿಸಿದರು. ಸಿ.ಕೆ. ರುದ್ರಾಕ್ಷಿ ಬಾಯಿ ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಎಂ.ಎಂ. ಸಿದ್ದಲಿಂಗಯ್ಯ, ಜೆ. ಗೋಪಿಕೃಷ್ಣ, ದುರ್ಗೇಶ್ ಕುಮಾರ್ ದ್ವಿವೇದಿ, ಜ್ಯೋತಿರಂಜನ್ ಮಹಾಪಾತ್ರ, ಅಮರಜೀತ್ ಕುಮಾರ್, ಧನಂಜಯ ಪಾಡಿ, ವಿಶ್ವನಾಥ್ ಬಿಲ್ಲವ, ಕೆ. ಶಶಿಶೇಖರ್, ರೈತ ಮುಖಂಡ ಸಿದ್ದಪ್ಪ, ಪೋಷಕರುಗಳಾದ ಶ್ರೀಕಾಂತ್, ಉಷಾಶ್ರೀ, ಕರಾಟೆ ತರಬೇತುದಾರರಾದ ಪ್ರವೀಣ್, ಯುವರಾಜ್ ಹಾಗೂ ಶ್ರೀಧರ್, ನಿರಂಜನ್ ಉಪಸ್ಥಿತರಿದ್ದರು.