ಗ್ರಾಮದಲ್ಲಿ ಈಗಾಗಲೇ ಕಳೆದ ತಿಂಗಳಿನಿಂದ ಎರಡ್ಮೂರು ಬಾರಿ ಫಾಗಿಂಗ್ ಮಾಡಿಸಲಾಗಿದ್ದು, ಜೊತೆಗೆ ಬ್ಲೀಚಿಂಗ್ ಪೌಡರ್, ಸ್ಯಾನಿಟೈಜರ್ ಸಿಂಪರಣೆ ಮಾಡಲಾಗಿದೆ. ಗ್ರಾಮದಲ್ಲಿ ಚರಂಡಿ ಸ್ವಚ್ಛತೆ ಸೇರಿದಂತೆ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು.
– ಅನ್ನದಾನ ನಾಯ್ಕ್, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯ್ತಿ, ಕೆ.ಕಲ್ಲಹಳ್ಳಿ
ಗ್ರಾಮದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಜೊತೆಗೂಡಿ ನೀಲಗುಂದ ಪ್ರಾಥಮಿಕ ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ತೆರಳಿ ಆರೋಗ್ಯ ಸರ್ವೆ ಕಾರ್ಯ ಮಾಡುತ್ತಿದ್ದು, ಕೆಲವೊಬ್ಬರಿಗೆ ಸಾಧಾರಣ ಶೀತ, ಜ್ವರ, ನೆಗಡಿ ಹೊರತುಪಡಿಸಿದರೆ ಇನ್ನಿತರೆ ಯಾವುದೇ ಆರೋಗ್ಯ ಸಮಸ್ಯೆ ಕಂಡು ಬಂದಿಲ್ಲ.
ಇನ್ನು ಗ್ರಾಮಕ್ಕೆ ನದಿ ನೀರು ಪೂರೈಕೆಯಾಗುತ್ತಿರುವುದರಿಂದ ಸದ್ಯಕ್ಕೆ ಗ್ರಾಮದಲ್ಲಿರುವ ಕೊಳವೆ ಬಾವಿ ನೀರನ್ನು ಬಳಸದಂತೆ ಗ್ರಾಮಸ್ಥರಿಗೆ ತಿಳಿ ಹೇಳಲಾಗಿದೆ.
– ಡಾ. ಅರ್ಪಿತಾ, ನೀಲಗುಂದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ
ಹರಪನಹಳ್ಳಿ, ಜ.19- ತಾಲ್ಲೂಕಿನ ವ್ಯಾಸನ ತಾಂಡಾದಲ್ಲಿ 2-3 ಮಕ್ಕಳಿಗೆ ಸಾಮಾನ್ಯ ಶೀತ, ಜ್ವರ, ನೆಗಡಿ ಇರುವುದು ಬಿಟ್ಟರೆ ಬೇರೆ ಯಾರಿಗೂ ಆರೋಗ್ಯದಲ್ಲಿ ತೊಂದರೆ ಆಗಿಲ್ಲ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಹಾಲಸ್ವಾಮಿ ತಿಳಿಸಿದ್ದಾರೆ.
ಗ್ರಾಮದಲ್ಲಿ ಈಚೆಗೆ 3 ವರ್ಷದ ಬಾಲಕಿಯೊಬ್ಬಳು ತೀವ್ರ ಜ್ವರದಿಂದಾಗಿ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಜ.16 ರಂದು ಬಾಲಕಿ ಮೃತಪಟ್ಟ ಹಿನ್ನೆಲೆಯಲ್ಲಿ ಬುಧವಾರ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಹಾಲಸ್ವಾಮಿ ನೇತೃತ್ವದ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಡೆಂಗ್ಯೂ ಜ್ವರದಿಂದ ಬಾಲಕಿಯೋರ್ವಳು ಮೃತಪಟ್ಟಿದ್ದಾಳೆಂದು ಹೇಳುವುದಕ್ಕೆ ಇನ್ನು ವರದಿ ಬಂದಿಲ್ಲ, ವರದಿ ತರಿಸಿಕೊಂಡು ಪರಿಶೀಲಿಸಿದ ನಂತರ ತಿಳಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಕಳೆದ ತಿಂಗಳ ಹಿಂದೆ ಗ್ರಾಮದಲ್ಲಿ ಸುಮಾರು ಜನರಿಗೆ ಜ್ವರ, ಮೈಕೈ ನೊವು, ಸುಸ್ತು ಕಾಣಿಸಿಕೊಂಡ ಪರಿಣಾಮ ಗ್ರಾಮಕ್ಕೆ ಶಾಸಕ ಜಿ.ಕರುಣಾಕರ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆಗ ಗ್ರಾಮಸ್ಥರು ಕುಡಿಯುವ ನೀರಿನಿಂದಾಗಿ ಈ ಸಮಸ್ಯೆ ಉಂಟಾಗಿರಬಹುದೆಂದು ತಿಳಿಸಿದಾಗ ಶಾಸಕರು ನೀರಿನ ಸ್ಯಾಂಪಲ್ ಪರೀಕ್ಷಿಸಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಜೊತೆಗೆ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ್ದರು.
ಸದ್ಯ ಗ್ರಾಮಕ್ಕೆ ತುಂಗಭದ್ರಾ ನದಿ ನೀರು ಪೂರೈಕೆಯಾಗುತ್ತಿದ್ದು, ಗ್ರಾಮಸ್ಥರು ನದಿ ನೀರನ್ನೇ ಬಳಸುತ್ತಿದ್ದಾರೆ. ಹಾಗಾಗಿ ಕಳೆದ ತಿಂಗಳಿಂದ ಜನರಿಗೆ ಆರೋಗ್ಯದಲ್ಲಿ ಇದುವರೆಗೂ ಯಾವುದೇ ಸಮಸ್ಯೆ ಕಂಡು ಬಂದಿಲ್ಲ. ಗ್ರಾಮದಲ್ಲಿ ಇರುವ ಕೊಳವೆ ಬಾವಿ ನೀರನ್ನು ಸದ್ಯಕ್ಕೆ ಉಪಯೋಗಿಸದಂತೆ, ನದಿ ನೀರನ್ನೇ ಬಳಸಿ ಎಂದು ವೈದ್ಯರು ಗ್ರಾಮಸ್ಥರಿಗೆ ಸಲಹೆ ನೀಡಿದರು.