ಹರಿಹರದ ವ್ಯಾಪಾರಸ್ಥರಿಗೆ ಕೊರೊನಾ ಜಾಗೃತಿ

ಹರಿಹರ, ಜ. 19 – ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ರೋಗವು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವುದರಿಂದ ತಹಶೀ ಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಆರೋಗ್ಯ ಇಲಾಖೆ ಡಾ ಚಂದ್ರಮೋಹನ್, ನಗರಸಭೆ ಪೌರಾಯುಕ್ತೆ ಎಸ್ ಲಕ್ಷ್ಮಿ, ಸಿಪಿಐ ಸತೀಶ್ ಕುಮಾರ್ ಅವರು ನಗರದ ವಿವಿಧ ಅಂಗಡಿ ಮತ್ತು ವ್ಯಾಪಾರ, ವಹಿವಾಟು ಕೇಂದ್ರಗಳಿಗೆ ಭೇಟಿ ಮಾಡಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ವೇಳೆ ಮಾತನಾಡಿದ ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ, ಜನರು ಇನ್ನೂ ಜಾಗೃತರಾಗುತ್ತಿಲ್ಲ. ಹೊರಗಡೆ ಬರುವಾಗ ಮಾಸ್ಕ್ ಧರಿಸುವುದನ್ನು ಕೈ ಬಿಟ್ಟಿದ್ದಾರೆ ಮತ್ತು ಅಂತರವನ್ನು ಕಾಯ್ದುಕೊಂಡು ಓಡಾಟ ಮಾಡುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಜಾಗೃತಿ ಮೂಡಿಸುವ ಜೊತೆಗೆ, ಸಾರ್ವಜನಿಕರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಆಗ ಮಾತ್ರ ಮೂರನೇ ಅಲೆ ನಿಯಂತ್ರಣ ಸಾಧ್ಯ ಎಂದರು. 

ನಗರದ ಅಂಗಡಿಗಳಿಗೆ ಭೇಟಿ ಮಾಡಿ ಮಾಸ್ಕ್ ಧರಿಸಿಕೊಂಡು ಮತ್ತು ಅಂತರವನ್ನು ಕಾಯ್ದುಕೊಂಡು ವ್ಯಾಪಾರ, ವಹಿವಾಟು ನಡೆಸುವಂತೆ ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಕಾನೂನು ಉಲ್ಲಂಘನೆ ಮಾಡಿರುವ ವ್ಯಕ್ತಿಗಳಿಗೆ ದಂಡ ಹಾಕಲಾಗುತ್ತದೆ ಎಂದವರು ಹೇಳಿದರು.

ಸಿಪಿಐ ಸತೀಶ್ ಕುಮಾರ್ ಮಾತನಾಡಿ, ಮೊದಲು ಎಲ್ಲಾ ಸರ್ಕಾರಿ ನೌಕರರು ಮಾಸ್ಕ್ ಧರಿಸಿಕೊಂಡು ಮತ್ತು ಅಂತರವನ್ನು ಕಾಯ್ದುಕೊಂಡು ಓಡಾಡುವುದನ್ನು ರೂಢಿಸಿಕೊಳ್ಳಬೇಕು. ಬಹಳ ನೌಕರರು ಮಾಸ್ಕ್ ಧರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾನೂನು ಉಲ್ಲಂಘನೆ ಮಾಡಿ ಓಡಾಟ ಮಾಡಿದವರಿಂದ 18 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಆರೋಗ್ಯ ಇಲಾಖೆಯ ಡಾ. ಚಂದ್ರಮೋಹನ್ ಮಾತನಾಡಿ, ತಾಲ್ಲೂಕಿನಲ್ಲಿ ಈಗಾಗಲೇ 90 ಕ್ಕೂ ಹೆಚ್ಚು ಸಕ್ರಿಯ ಕೊರೊನಾ ಪಾಸಿಟಿವ್ ಪ್ರಕರಣಗಳಿದ್ದು, ಅವರಲ್ಲಿ 88 ರೋಗಿಗಳು ಮನೆಯಲ್ಲಿ ಹೋಂ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.

ಪೌರಾಯುಕ್ತೆ ಎಸ್ ಲಕ್ಷ್ಮಿ ಮಾತನಾಡಿ, ನಗರಸಭೆಯ ವತಿಯಿಂದ ಸಾರ್ವಜನಿಕರಿಗೆ ಇದುವರೆಗೂ ಯಾವುದೇ ರೀತಿಯ ದಂಡ ಹಾಕದೇ, ಬುಧವಾರದವರೆಗೆ ಸಮಯ ನೀಡಲಾಗಿತ್ತು. ಇಂದಿನಿಂದ ಕಾನೂನು ಉಲ್ಲಂಘನೆ ಮಾಡಿ ವ್ಯಾಪಾರ, ವಹಿವಾಟು ನಡೆಸುವವರ ಮೇಲೆ ದಂಡ ವಿಧಿಸುವುದಕ್ಕೆ ಮುಂದಾಗುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಆರೋಗ್ಯ, ನಗರಸಭೆ, ಕಂದಾಯ ಕಚೇರಿಗಳ ಸಿಬ್ಬಂದಿಗಳು ಹಾಜರಿದ್ದರು.

error: Content is protected !!