ದಾವಣಗೆರೆ ರಾಜಧಾನಿಯಾಗಿದ್ದರೆ ನಾಡು ಹೆಚ್ಚು ಸುಭಿಕ್ಷ

ಕಸಾಪ ಸಂಸ್ಥಾಪನಾ ದಿನಾಚರಣೆಯಲ್ಲಿ ಚಿಂತಕ ಕೆ.ರಾಜಕುಮಾರ್ ಅಭಿಮತ

ದಾವಣಗೆರೆ, ಮೇ 5- ದಾವಣಗೆರೆ ರಾಜ್ಯದ ರಾಜಧಾನಿಯಾಗಿದ್ದರೆ ಈ ನಾಡು ಹೆಚ್ಚು ಸುಭಿಕ್ಷವಾಗಿರುತ್ತಿತ್ತು ಎಂದು ಲೇಖಕ, ಕನ್ನಡ ಪರ ಚಿಂತಕರೂ ಆದ ಕೆ.ರಾಜಕುಮಾರ್ ಅಭಿಪ್ರಾಯಿಸಿದರು.

ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಕಸಾಪ 108ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು `ಕನ್ನಡ ಮನಸ್ಸುಗಳ ಮೇಲೆ ಕಸಾಪ ಬೀರಿದ ಪ್ರಭಾವ’ ಕುರಿತು ಉಪನ್ಯಾಸ ನೀಡಿದರು.

ಕಸಾಪ ಸಂಸ್ಥಾಪನಾ ದಿನಾಚರಣೆ ಜೊತೆಗೆ ದಾವಣಗೆರೆ ಜಿಲ್ಲೆಯಾಗಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಆರಂಭವಾಗಿ 25 ವರ್ಷಗಳು ಕಳೆದ ಹಿನ್ನೆಲೆಯಲ್ಲಿ ರಜತ ಸಂಭ್ರಮವೂ ಇದಾಗಿದೆ ಎಂದು ಹೇಳಿದರು.

ಹಲವು ಸಂಸ್ಥೆಗಳು ಚಿಕ್ಕದಾಗಿ ಆರಂಭವಾಗಿ ದೊಡ್ಡದಾಗಿ ಬೆಳೆಯಬೇಕೆಂಬ ಆಶಯದ ನಡುವೆಯೇ ಕಮರುತ್ತವೆ. ಮತ್ತೆ ಕೆಲವು ದೊಡ್ಡ ಮಟ್ಟದಲ್ಲಿ ಆರಂಭವಾಗಿ ಮುಂದೆ ಬೆಳೆಯದೇ ಹೋಗುತ್ತವೆ. ಆದರೆ 107 ವರ್ಷಗಳನ್ನು ಕ್ರಮಿಸಿರುವ ಕನ್ನಡ ಸಾಹಿತ್ಯ ಪರಿಷತ್ ಕೇವಲ ಆರಂಭ ಶೂರತ್ವದ ಸಂಸ್ಥೆಯಾಗಿರಲಿಲ್ಲ  ಎಂದರು.

ಭೂತ, ವರ್ತಮಾನ, ಭವಿಷ್ಯತ್ ಕಾಲದಲ್ಲೂ ತನ್ನ ಅಸ್ತಿತ್ವದ ಬೇರುಗಳನ್ನು ಈ ನಾಡಿನ ನೆಲದ ಆಳಕ್ಕೆ ಇಳಿಸಿ ದೃಢವಾಗಿ ಬೆಳೆದ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್. ಬೆಂಗಳೂರಿನಲ್ಲಿ ಕೇವಲ 10 ರೂಪಾಯಿ ಕೊಠಡಿಯೊಂದರಲ್ಲಿ ಆರಂಭವಾಗಿ ಇದೀಗ 30 ಜಿಲ್ಲಾ ಘಟಕ, 282 ತಾಲ್ಲೂಕು ಘಟಕಗಳನ್ನು ಹೊಂದಿದ್ದು, ಹೋಬಳಿ ಘಟಕಗಳನ್ನೂ ಮಾನ್ಯ ಮಾಡಲಿದೆ.` ಕನ್ನಡ’, `ಸಾಹಿತ್ಯ’ ಹಾಗೂ `ಪರಿಷತ್’ ಮೂರು ಹೆಸರುಗಳನ್ನೊಳಗೊಂಡ ಸಂಸ್ಥೆ ಇದಾಗಿದ್ದು, ಇದರಲ್ಲಿ ಪರಿಪೂರ್ಣತೆ ಇದೆ. ಜನರನ್ನು ಕೂಡಿಸಿ, ನಾಡನ್ನು ಬೆಳೆಸುವ ಸದುದ್ಧೇಶ ಹೊಂದಿರುವ ಸಂಸ್ಥೆ, ನಿರಂತರ ಜನಮಾನಸದ ಮೇಲೆ ತನ್ನ ಪ್ರಭಾವ ಬೀರುತ್ತಿದೆ ಎಂದರು.

ಕಸಾಪ ಹೊರತುಪಡಿಸಿದರೆ ಇಡೀ ಜಗತ್ತಿನಲ್ಲಿಯೇ ನಾಡು-ನುಡಿಯ ಸಮರ್ಥನೆಗಾಗಿ, ನಾಡಿನ ಜನರ ಹಿತ ಕಾಯುವ ಬೇರಾವ ಸಂಘಟನೆಯೂ ಇಲ್ಲ ಎಂದ ರಾಜಕುಮಾರ್,  ಶೀಘ್ರವೇ ಒಂದು ನಿವೇಶನ ಪಡೆದು ನಿರ್ದಿಷ್ಟ ಕಾರ್ಯಸೂಚಿ ಇಟ್ಟುಕೊಂಡು ರಾಜ್ಯದ ಬೇರೆಲ್ಲಾ ಜಿಲ್ಲಾ ಘಟಕಗಳಿಗಿಂತ ದಾವಣಗೆರೆ ಘಟಕ ಮಾದರಿಯಾಗಲಿ ಎಂದು ಆಶಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಸುರೇಶ್, ಜನ್ಮ ದಿನದಂತೆ ಕನ್ನಡ ಸಾಹಿತ್ ಪರಿಷತ್ ಸಂಸ್ಥಾಪನಾ ದಿನವನ್ನೂ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಶ್ಲ್ಯಾಘನೀಯ ಎಂದರು.

ಕನ್ನಡ ನಾಡು-ನುಡಿಗಾಗಿ ಒಂದು ಸಂಸ್ಥೆ ಬೇಕು ಎಂಬ ದೂರದೃಷ್ಟಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕಸಾಪ ಸ್ಥಾಪಿಸಿದರು. ಕೆಆರ್‌ಎಸ್ ಜಲಾಶಯ ನಿರ್ಮಾಣವೂ ಸಹ ಮಹಾರಾಜರ ದೂರದೃಷ್ಟಿಯ ಫಲವಾಗಿತ್ತು. ಹಣದ ಕೊರತೆಯಾದಾಗ ಆಭರಣ ಮಾರಿ ಅಣೆಕಟ್ಟು ಕಟ್ಟಿ ಜನಪರ ಕೆಲಸ ಮಾಡಿದ್ದರು. ಇಂದು ಅದರ ಫಲವನ್ನು ನಾವು ಕಾಣುತ್ತಿದ್ದೇವೆ. ಬೇಂದ್ರೆ, ಕುವೆಂಪು ಅವರಂತಹ ಕವಿ, ಸಾಹಿತಿಗಳು ಉದಾತ್ತ ಮನಸ್ಸಿನಿಂದ ಭಾಷೆ, ನಾಡು ಉಳಿಸಿ, ಬೆಳೆಸಿದ್ದಾರೆ ಎಂದು ಸ್ಮರಿಸಿದರು.

ದೂಡಾದಲ್ಲಿ ಸಂಘ-ಸಂಸ್ಥೆಗಳಿಗೆ ನೀಡಬಹುದಾದ ಸಾಕಷ್ಟು ಸಿಎ ನಿವೇಶನಗಳಿದ್ದು, ಕನ್ನಡ ಸಾಹಿತ್ಯ ಪರಿಷತ್‌ ತನ್ನ ಕಾರ್ಯಚಟುವಟಿಕೆಗಳಿಗಾಗಿ ಅಗತ್ಯವಾದರೆ ಅರ್ಜಿ ಸಲ್ಲಿಸಿದಲ್ಲಿ ಎರಡು ತಿಂಗಳಲ್ಲಿ ನಿವೇಶನ ಮಂಜೂರು ಮಾಡುವುದಾಗಿ ಹೇಳಿದರು.

ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಮಾತನಾಡುತ್ತಾ, ಪೋಷಕರಲ್ಲಿ ಆಂಗ್ಲಭಾಷಾ ವ್ಯಾಮೋಹ ಹೆಚ್ಚಾಗುತ್ತಿದೆ. ಮಕ್ಕಳನ್ನು ಆಂಗ್ಲ ಭಾಷಾ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಿರುವುದರಿಂದ ಹಲವಾರು ಕನ್ನಡ ಪದಗಳ ಅರ್ಥವೇ ತಿಳಿಯದಾಗಿದ್ದಾರೆ. ಇಂಗ್ಲಿಷ್ ಭಾಷೆ ಜೊತೆ ಕನ್ನಡವನ್ನೂ ಹೇಳಿ ಕೊಡುವ ಮೂಲಕ ಕನ್ನಡ ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

ಒಂದು ಸಂಸ್ಥೆ ಸ್ಥಾಪನೆಯಾಗಿ ಇಷ್ಟು ವರ್ಷಗಳು ಸೇವೆ ಸಲ್ಲಿಸುತ್ತಿರುವುದು ಸಾಮಾನ್ಯ ಮಾತಲ್ಲ. ಕನ್ನಡ ಮನಸ್ಸುಗಳನ್ನು ಒಂದುಗೂಡಿಸಬೇಕೆಂಬ ದೂರದೃಷ್ಟಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್.ಎಂ. ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಅವರು ಸ್ಥಾಪಿಸಿದ ಕಸಾಪ ಇಂದು ಬೃಹದಾಕಾರವಾಗಿ ಬೆಳೆದಿದೆ. ಕಸಾಪದಲ್ಲಿ ವಿಕೇಂದ್ರೀಕೃತ ವ್ಯವಸ್ಥೆ ಇರುವುದರಿಂದ ಜನರಿಗೆ ಹತ್ತಿರವಾಗಲು ಸಾಧ್ಯವಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಮಾತನಾಡುತ್ತಾ, ಸಾಹಿತ್ಯ ಪರಿಷತ್ ಆರಂಭಿಸಿ, ನಾಡಿನಾದ್ಯಂತ ಉತ್ತಮ ಚಟುವಟಿಕೆಗಳನ್ನು ನಡೆಯುವಂತೆ ಮಾಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು `ಪರಿವರ್ತಕ’ ಎಂದೇ ಕರೆಯಬಹುದು. ಜಗತ್ತಿನಲ್ಲಿನ ಎಲ್ಲಾ ಭಾಷೆಗಳಿಗಿಂತಲೂ ಸುಂದರವಾದ, ಐತಿಹಾಸಿಕ ನೆಲೆಯುಳ್ಳ ಭಾಷೆ ಕನ್ನಡ. ಇಂತಹ ನಾಡಿನಲ್ಲಿ ಜನಿಸಿದ ನಾವೇ ಧನ್ಯರು ಎಂದರು.

ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷೆ ಸುಮತಿ ಜಯಪ್ಪ ವೇದಿಕೆ ಮೇಲಿದ್ದರು. 

ಕಸಾಪ ಗೌರವ ಕಾರ್ಯದರ್ಶಿ ಬಿ.ದಿಳ್ಯೆಪ್ಪ ಸ್ವಾಗತಿಸಿದರು. ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಕಾರ್ಯಕ್ರಮ ನಿರೂಪಿಸಿದರು. ಜಗದೀಶ್ ಕೂಲಂಬಿ ಅತಿಥಿಗಳನ್ನು ಪರಿಚಯಿಸಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೆಚ್.ಬಿ. ಮಂಜುನಾಥ್, ಕಸಾಪ ಮಾಜಿ ಅಧ್ಯಕ್ಷ ಎ.ಆರ್. ಉಜ್ಜಿನಪ್ಪ, ಬಂಕಾಪುರ ಚನ್ನಬಸಪ್ಪ, ನಾಗೇಂದ್ರ ಬಂಡೀಕರ್, ಸತ್ಯಭಾಮ, ರುದ್ರಾಕ್ಷಿಬಾಯಿ ಹಾಗು ಇತರರು ಇದ್ದರು.

error: Content is protected !!