ತಾಳಿ ಕಟ್ಟಿದ ನಂತರವೂ ತಾಳಿಕೊಂಡು ಬಾಳು ನಡೆಸಿ

ಮುರುಘಾಮಠದಲ್ಲಿನ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶರಣರು

ಚಿತ್ರದುರ್ಗ, ಮೇ 5- ತಾಳಿ ಕಟ್ಟುವವರೆಗೆ ತಾಳಿ. ಕಟ್ಟಿದ ಮೇಲೂ ತಾಳಿಕೊಂಡು ನೆಮ್ಮದಿಯಿಂದ ಬಾಳು ನಡೆಸಬೇಕೆಂದು ಡಾ. ಶಿವಮೂರ್ತಿ ಮುರುಘಾ ಶರಣರು ಕರೆ ನೀಡಿದರು.

ನಗರದ ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಎಸ್.ಜೆ.ಎಂ. ಶಾಂತಿ ಮತ್ತು ಪ್ರಗತಿ ಫೌಂಡೇಶನ್ (ರಿ)  ಚಿತ್ರದುರ್ಗ ಇವರ ಸಹಯೋಗದಲ್ಲಿ ನಡೆದ ಮೂವತ್ತೆರಡನೆ ವರ್ಷದ ಐದನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ 41 ಜೋಡಿಗಳ ವಿವಾಹ ನೆರವೇರಿಸಿ ಶ್ರೀಗಳು ಮಾತನಾಡಿದರು.

ಮದುವೆ ಮಾನವ ಬದುಕಿನಲ್ಲಿ ಅನಿರೀಕ್ಷಿತ ಸಂದರ್ಭ. ಮಾನವ ಲೋಕದಲ್ಲಿ ಮಾತ್ರ ಮದುವೆಗಳು. ಮಾನವ ಸೃಷ್ಟಿಕರ್ತ, ಬುದ್ಧಿವಂತ, ಹೃದಯವಂತ, ಧರ್ಮವಂತ. ಅವನಿಗೆ ಮಾತ್ರ ಮದುವೆ ಮಾಡಿಸಬೇಕು. ಅವನ ಮೆದುಳಿನಲ್ಲಿ ಅನೇಕ ಉತ್ತಮ ಬುದ್ದಿ ಸುಳಿಯುತ್ತದೆ. ಉತ್ತಮ ಆಲೋಚನೆ ಜೊತೆ ಸಾಗಬೇಕು. ಮನೆ ಮುರಿಯಲು ಒಂದು ದುರಾಲೋಚನೆ ಸಾಕು. ಸದ್ವಿಚಾರದ ಜೊತೆ ಸಾಗಬೇಕು. ಸಮಾಜದಲ್ಲಿ ಜಾತಿಯ ಚೌಕಟ್ಟಿನೊಳಗೆ ಮದುವೆ ನಡೆಯುತ್ತಿವೆ. ಇಲ್ಲಿ ಅನೇಕ ಜಾತಿಯ ವಧು-ವರರು ಇದ್ದಾರೆ. ಜಾತಿ ಆಧಾರಿತ ಮದುವೆಗಳು ಪ್ರೀತಿ ಆಧಾರಿತ ಮದುವೆಗಳಾಗಿ ಪರಿವರ್ತನೆಯಾಗಬೇಕು ಎಂದು ಹೇಳಿದರು.

ತಿಪ್ಪಾಯಿಕೊಪ್ಪದ ಶ್ರೀಗುರು ಮೂಕಪ್ಪ ಶಿವಯೋಗಿಗಳ ಮಠದ ಶ್ರೀ ಮ.ನಿ.ಪ್ರ. ಮಹಾಂತ ಸ್ವಾಮಿಗಳು ಮಾತನಾಡಿ, ಶರಣರ ಆದರ್ಶ ಜೀವನ ನಮಗೆ ಮಾರ್ಗದರ್ಶನ. ಮದುವೆ ಎಂದರೆ ಎರಡು ಮನಸ್ಸುಗಳ ಮಿಲನ. ಭಾರತೀಯ ಪರಂಪರೆಯಲ್ಲಿ ವಿವಾಹಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಮುರುಘಾ ಶರಣರ ಮಾರ್ಗದರ್ಶನದಲ್ಲಿ ವಿವಾಹ ನೆರವೇರುತ್ತಿದೆ. ಪ್ರತಿಯೊಬ್ಬರು ನಂಬಿಕೆಗಳ ಮಧ್ಯೆ ಬದುಕಬೇಕು. ಆಗ ಮಾತ್ರ ಜೀವನ ಸುಗಮವಾಗುತ್ತದೆ ಎಂದರು.

ಮುಖ್ಯಅತಿಥಿ ಮಲ್ಲಿಕಾರ್ಜುನ ಪಿ. ಭಂಗಿ ಮಾತನಾಡಿದರು. ಕಾರ್ಯಕ್ರಮದ ದಾಸೋಹಿಗಳಾದ ಎಂ.ಜೆ. ಮಲ್ಲಿಕಾರ್ಜುನ್ ವೇದಿಕೆಯಲ್ಲಿದ್ದರು.

ಕುಂಬಾರ (ವರ) – ಆದಿಕರ್ನಾಟಕ (ವಧು) ಮತ್ತು ಲಿಂಗಾಯತ (ವರ) – ನಾಯಕ (ವಧು) ಎರಡು ಜೋಡಿ ಅಂತರ್ಜಾತಿ ಸೇರಿದಂತೆ 41 ಜೋಡಿಗಳು ವಿವಾಹವಾದರು.

ಮರಳೇ ಗವಿಮಠದ ಡಾ. ಮುಮ್ಮಡಿ ಶಿವರುದ್ರ ಸ್ವಾಮಿಗಳು, ಹಾವೇರಿ ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮಿಗಳು, ನಿಪ್ಪಾಣಿ ಶ್ರೀ ಮುರುಘೇಂದ್ರ ಮಠದ ಶ್ರೀ ಬಸವ ಮಲ್ಲಿಕಾರ್ಜುನ ಸ್ವಾಮಿಗಳು, ಎನ್.ಆರ್. ಪುರ ಬಸವ ಕೇಂದ್ರದ ಶ್ರೀ ಬಸವಯೋಗಪ್ರಭು ಸ್ವಾಮಿಗಳು, ಕುಂಬಾರ ಗುರುಪೀಠದ ಶ್ರೀ ಬಸವಕುಂಬಾರ ತಿಪ್ಪೇಸ್ವಾಮಿ ಸ್ವಾಮಿಗಳು, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎಸ್.ಕೆ.ಬಸವರಾಜನ್, ಕೆ.ಇ.ಬಿ. ಷಣ್ಮುಖಪ್ಪ, ಪೈಲ್ವಾನ್ ತಿಪ್ಪೇಸ್ವಾಮಿ, ಸೊಂಡೇಕೊಳ ಶ್ರೀನಿವಾಸ್ ಮೊದಲಾದವರಿದ್ದರು.

ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ವೀರಭದ್ರಪ್ಪ ಸ್ವಾಗತಿಸಿದರು. ಬಸವಲಿಂಗದೇವರು ನಿರೂಪಿಸಿದರು.

error: Content is protected !!