ಕನ್ನಡಿಗರು ಮಾತೃಭಾಷೆಗೆ ಆದ್ಯತೆ ನೀಡಬೇಕು

ಶಾಸಕ ಎಸ್.ರಾಮಪ್ಪ ಕರೆ

ಹರಿಹರ, ಮೇ 5 – ಕನ್ನಡಿಗರು ಇತರೆ ಭಾಷೆಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವುದಕ್ಕಿಂತ ಮಾತೃಭಾಷೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಶಾಸಕ ಎಸ್. ರಾಮಪ್ಪ ಕರೆ ನೀಡಿದರು.

ನಗರದ ಎಸ್.ಜೆ.ವಿ.‌ಪಿ. ಕಾಲೇಜು ಸಭಾಂಗಣದಲ್ಲಿ ಇಂದು ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ 108 ನೇ ಸಂಸ್ಥಾಪನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಭಾಷೆಯ ಉಳಿವಿಗಾಗಿ ಮತ್ತು ಬೆಳವಣಿಗೆಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ. ವಿಶ್ವೇಶ್ವರಾಯ, ಸರ್ ಮಿರ್ಜಾ ಇಸ್ಮಾಯಿಲ್ ಸೇರಿದಂತೆ ದಾರ್ಶನಿಕರು, ಶರಣರು, ವಾಗ್ಮಿಗಳು, ಚಿಂತಕರು, ಸಾಹಿತಿಗಳು ತಮ್ಮದೇ ಆದ ರೀತಿಯಲ್ಲಿ ಕೊಡುಗೆಗಳನ್ನು ನೀಡಿದ್ದಾರೆ ಎಂದರು.

ಅವರ ಆಸೆಯಂತೆ ಕನ್ನಡ ನಾಡಿನ ಭಾಷೆಯ ಬೆಳವಣಿಗೆಗೆ ಮತ್ತು ಪ್ರಗತಿಗಾಗಿ ಎಲ್ಲರೂ ಶ್ರಮಿಸು ವುದಕ್ಕೆ ಮುಂದಾಗಬೇಕಾಗಿದೆ ಎಂದು ಹೇಳಿದರು.

ವಿಶ್ರಾಂತ ಪ್ರಾಧ್ಯಾಪಕ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಸ್.ವಿ. ಪಟ್ಟಣಶೆಟ್ಟಿ ಮಾತನಾಡಿ, ಕನ್ನಡದ ಮನಸ್ಸುಗಳ ಮೇಲೆ ಕನ್ನಡ ಸಾಹಿತ್ಯ ಪರಿಷತ್ತು ಬೀರಿದ ಪ್ರಭಾವದಿಂದಾಗಿ ಕನ್ನಡದ ಮೌಲ್ಯ ಹಾಗೂ ಆಚಾರ, ವಿಚಾರಕ್ಕೆ ಹೆಚ್ಚಿನ ಘನತೆಯನ್ನು ತಂದು ಕೊಟ್ಟಿದೆ ಎಂದರು.

ಇತ್ತೀಚೆಗೆ ರಾಜ್ಯದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋಶಿ ಅವರು ಸರ್ವಾಧಿಕಾರ ಧೋರಣೆಯ ಆಡಳಿತ ಮಾಡುವುದಕ್ಕೆ ಮುಂದಾಗಿರುವುದು ಕನ್ನಡ ಸಾಹಿತ್ಯ ಪರಿಷತ್ತಿನ ವಿರೋಧಿ ಕೆಲಸವಾಗಿದೆ. ಇದರಿಂದ ಹೊರಬರುವ ಕೆಲಸವನ್ನು ಮಾಡಲಿ ಎಂದು ಹೇಳಿದರು.

ಸಾಹಿತಿ ಹುಲಿಕಟ್ಟಿ ಚೆನ್ನಬಸಪ್ಪ ಮಾತನಾಡಿ, ಕನ್ನಡಿಗರಲ್ಲಿ ಆತ್ಮ ಸ್ಥೈರ್ಯ ತುಂಬುವ ಮೂಲಕ ಹರಿದು ಹಂಚಿ ಹೋಗಿದ್ದ ಕನ್ನಡಿಗರನ್ನು ಒಂದುಗೂಡಿಸಬೇಕೆನ್ನುವ ಆಕಾಂಕ್ಷೆಯಿಂದ 1915, ಮೇ 5 ರಂದು ಕರ್ನಾಟಕ ಸಾಹಿತ್ಯ ಪರಿಷತ್ತು ಉದಯವಾಯಿತು ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಹುಟ್ಟು ಮತ್ತು ಬೆಳವಣಿಗೆಯ ಬಗ್ಗೆ ಎಲ್ಲಾ ರೀತಿಯ ಮಾಹಿತಿ ಇರಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಈ ವೇಳೆ ನಿಕಟ ಪೂರ್ವ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ರೇವಣಸಿದ್ದಪ್ಪ ಅಂಗಡಿ, ಕಲೀಂ ಬಾಷಾ, ಎಸ್.ವಿ. ಪಟ್ಟಣಶೆಟ್ಟಿ ಇವರಿಗೆ ಸನ್ಮಾನಿಸಿ, ಗೌರವಿಸಲಾಯಿತು.

ನಗರಸಭೆ ಅಧ್ಯಕ್ಷರಾದ ಶಾಹೀನಾಬಾನು ದಾದಾಪೀರ್, ಎಸ್.ಜೆ.ವಿ.ಪಿ ಕಾಲೇಜು ಕಾರ್ಯದರ್ಶಿ ಆರ್.ಟಿ. ಪ್ರಶಾಂತ್, ಜೆ ಕಲೀಂ ಭಾಷಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ, ಎಸ್.ಜೆ.ವಿ.ಪಿ. ಕಾಲೇಜು ಪ್ರಾಂಶುಪಾಲರಾದ ಎಸ್.ಜೆ. ಶಾರದಮ್ಮ, ಹಿರಿಯ ಸಾಹಿತಿಗಳಾದ ಸುಬ್ರಹ್ಮಣ್ಯ ನಾಡಿಗೇರ, ಹೆಚ್.ಕೆ.ಕೊಟ್ರಪ್ಪ, ಹೆಚ್.ನಿಜಗುಣ, ರಕ್ಷಣಾ ವೇದಿಕೆಯ ನಾಗರಾಜ್ ಮೆಹರ್ವಾಡೆ, ಸದಾನಂದ ಕುಂಬಳೂರು,  ಕನ್ನಡ ಸಾಹಿತ್ಯ ಪರಿಷತ್‌ನ ಸಂಚಾಲಕ ಎ. ರಿಯಾಜ್ ಆಹ್ಮದ್, ಹರಿಹರ ಗೌರವ ಕಾರ್ಯದರ್ಶಿಗಳಾದ ಎಂ. ಚಿದಾನಂದ ಕಂಚಿಕೇರಿ, ಬಿ.ಬಿ. ರೇವಣನಾಯ್ಕ್, ಖಜಾಂಚಿ ವಿಜಯ ಮಹಾಂತೇಶ್, ಈಶಪ್ಪ ಬೂದಿಹಾಳ, ವಿಜಯಕುಮಾರ್ ಓಲೇಕಾರ್, ಡಿ.ಡಿ. ಸಿಂಧಗಿ, ಹರಿ ಜಾದುಗಾರ, ನಾಗರಾಜ್, ಎನ್.ಇ. ಸುರೇಶ್, ಶ್ರೀಧರ್‌ಮಯ್ಯ, ಯಕ್ಕೆಗೊಂದಿ ರುದ್ರೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಭಿದಾಲಿ, ನಗರಸಭೆ ಮಾಜಿ ಸದಸ್ಯ ಹಂಚಿನ ನಾಗಪ್ಪ ಹಾಗು ಇತರರು ಹಾಜರಿದ್ದರು. 

ಪ್ರಾರ್ಥನೆಯನ್ನು ಪರಮೇಶ್ವರಪ್ಪ ಕತ್ತಿಗೆ ನೆರವೇರಿಸಿದರು. ಮಾಧುರಿ, ರೇಖಾ ಸಂಗಡಿಗರು ಹಾಡಿದರು. ಸ್ವಾಗತ ಕುಬೇಂದ್ರಪ್ಪ, ನಿರೂಪಣೆ ಬಿ. ಬಿ. ರೇವಣನಾಯ್ಕ್, ವಂದನಾರ್ಪಣೆಯನ್ನು ಎಂ. ಚಿದಾನಂದ ಕಂಚಿಕೇರಿ ನೆರವೇರಿಸಿದರು.

error: Content is protected !!