ಪೊಲೀಸ್ ಧ್ವಜ ಕರ್ನಾಟಕದ ಹಿರಿಮೆ

ಪೊಲೀಸ್ ಧ್ವಜ ಕರ್ನಾಟಕದ ಹಿರಿಮೆ

ದಾವಣಗೆರೆ, ಏ. 2- ಕೆಲವು ರಾಜ್ಯಗಳಿಗೆ ಇನ್ನೂ ಪೊಲೀಸ್ ಧ್ವಜದ ಭಾಗ್ಯ ಸಿಕ್ಕಿಲ್ಲ. ಆದರೆ ಕರ್ನಾಟಕ ಪೊಲೀಸ್ ಗೆ ಅನೇಕ ದಶಕಗಳ ಹಿಂದೆಯೇ ರಾಷ್ಟ್ರಪತಿಗಳು ಪೊಲೀಸ್ ಧ್ವಜ ನೀಡಿರುವುದು ಕರ್ನಾಟಕದ ಹಿರಿಮೆ ಎಂದು ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕ ಡಾ. ರವಿಕಾಂತೇಗೌಡ ಹೇಳಿದರು.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಇಂದು ಏರ್ಪಡಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕರ್ನಾಟಕ ಕಾಯ್ದೆ ಜಾರಿಯಾದ ದಿನ ಕೂಡ ಆಗಿದ್ದು,  ಕರ್ನಾಟಕ ಪೊಲೀಸರಿಗೆ ಇಂದು ಮಹತ್ವ ದಿನವಾಗಿದೆ. ದೇಶದ ಅನೇಕ ರಾಜ್ಯಗಳಿಗೆ ಪೊಲೀಸ್ ಧ್ವಜದ ಭಾಗ್ಯ ಇನ್ನೂ ದೊರೆತಿಲ್ಲ. ಅನೇಕ ದಶಕಗಳ ಹಿಂದೆಯೇ ರಾಷ್ಟ್ರಪತಿಗಳು ಪೊಲೀಸ್ ಧ್ವಜ ನೀಡಿದ್ದಾರೆ ಎಂದು ತಿಳಿಸಿದರು.

ನಿವೃತ್ತ ಮತ್ತು ಸೇವೆಯಲ್ಲಿರುವ ಪೊಲೀಸರ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಪೊಲೀಸ್ ಧ್ವಜ ದಿನವನ್ನು ಆಚರಿಸಲಾಗುತ್ತಿದೆ. ಸಾರ್ವಜನಿಕ ರಲ್ಲಿ ಪೊಲೀಸ್ ಸೇವೆಯ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ದಿನದ 24 ಗಂಟೆ, ವರ್ಷದ 365 ದಿನಗಳು ಸಹ ಪೊಲೀಸರು ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುತ್ತಾರೆ. ಕುಟುಂಬ ಮತ್ತು ವೈಯಕ್ತಿಕ ಕೆಲಸಗಳನ್ನು ಬದಿಗೊತ್ತಿ ಕೆಲಸ ನಿರ್ವಹಿಸಬೇಕಾಗುತ್ತದೆ. ಇದು ಸರ್ಕಾರ ಮತ್ತು ಸಮಾಜ ಕೊಟ್ಟಂತಹ ಜವಾಬ್ದಾರಿ ಎಂದರು.

ಆದರೂ ಆರೋಗ್ಯದ ಮತ್ತು ಕುಟುಂಬದ ಕಡೆ ಗಮನಹರಿಸಬೇಕಾಗುತ್ತದೆ.ಪೊಲೀಸರ ಕಷ್ಟ- ಸುಖಗಳಲ್ಲಿ ಸಾರ್ವಜನಿಕರು ಭಾಗವಹಿಸುವ ಮೂಲಕ  ಇಲಾಖೆಗೆ ಸಹಕಾರ ನೀಡುವುದು ಅವಶ್ಯ ವಾಗಿರುತ್ತದೆ. ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ಸಾರ್ವಜನಿಕರ ಸಹಭಾಗಿತ್ವ ಸಹ ಬೇಕಾಗುತ್ತದೆ ಎಂಬುದು ನಮ್ಮ ನಿರೀಕ್ಷೆ ಎಂದು ಹೇಳಿದರು.

ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದ ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದೆ. ನಿವೃತ್ತ ಅಧಿಕಾರಿಗಳ ಅನುಭವಗಳನ್ನು ಕೇಳಿ ತಮ್ಮ ಸೇವೆಯಲ್ಲಿ ಅಳವಡಿಸುವುದು ಮುಖ್ಯ ಎಂದರು.

 ನಿವೃತ್ತ ಪೊಲೀಸ್ ಉಪ ನಿರೀಕ್ಷಕ ಅಂಜಿನಪ್ಪ ಮಾತನಾಡಿ, ಹಿರಿಯ ಅಧಿಕಾರಿಗಳಿಗೆ ಗೌರವ ನೀಡುವುದು, ಅವರ ಆದೇಶವನ್ನು ಚಾಚೂ ತಪ್ಪದೇ ಪಾಲಿಸುವುದು ಪೊಲೀಸರ ಕರ್ತವ್ಯವಾಗಿದ್ದು, ಇಲಾಖೆಯ ನಿಯಮಗಳ ಅನ್ವಯ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಬೇಕೆಂದು ಕರೆ ನೀಡಿದರು.

ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಮೂಲಕ ಹಾಲಿ ಪೊಲೀಸರ ಮೇಲಿನ ಅಧಿಕ ಒತ್ತಡ, ಕರ್ತವ್ಯ ನಿರ್ವಹಣೆಯನ್ನು ಕಡಿಮೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಇತ್ತೀಚಿಗೆ ನ್ಯಾಮತಿಯಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಆರೋಪಿಗಳನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಜನರ ಸ್ವತ್ತು ಕಾಪಾಡಿದ್ದು ಪೊಲೀಸ್ ಇಲಾಖೆ ಹೆಗ್ಗಳಿಕೆಯಾಗಿದೆ. ಇಂತಹ ಕರ್ತವ್ಯಗಳಿಂದ ಪೊಲೀಸರು ಹಾಗೂ ಇಲಾಖೆ ಮೇಲಿನ ಗೌರವ ಹೆಚ್ಚುತ್ತದೆ ಎಂದು ಹಿತ ನುಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಉಮಾ ಪ್ರಶಾಂತ್ ಮಾತನಾಡಿ, ಪೊಲೀಸ್ ಧ್ವಜದಿಂದ ಸಂಗ್ರಹವಾದ ಹಣದಲ್ಲಿ ಶೇ. 50 ರಷ್ಟು ಹಣವನ್ನು ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ನಿಧಿಗೆ, ಉಳಿದ ಶೇ. 50 ರಷ್ಟು ಹಣವನ್ನು ಕೇಂದ್ರದ ಕ್ಷೇಮ ನಿಧಿಗೆ ನೀಡಲಾಗುವುದು. 2024-25 ನೇ ಸಾಲಿನಲ್ಲಿ ಒಟ್ಟು 15 ಪೊಲೀಸ್ ಅಧಿಕಾರಿಗಳು ನಿವೃತ್ತಿ ಹೊಂದಿದ್ದಾರೆಂದು ಮಾಹಿತಿ ನೀಡಿದರು.

ಜಿಲ್ಲೆಯ 13 ಪೊಲೀಸ್ ಅಧಿಕಾರಿಗಳು ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿದ್ದು, ದಿನದ 24 ಗಂಟೆಗಳ ಕಾಲ ಒತ್ತಡದ ಮಧ್ಯೆ ಪೊಲೀಸರು ಕರ್ತವ್ಯ ಮಾಡಬೇಕಾಗುತ್ತದೆ. ಅವರ ಆರೋಗ್ಯ ಕೂಡ ಮುಖ್ಯವಾಗಿರುತ್ತದೆ. ಇಲಾಖೆಯಿಂದಲೂ ಸಹ ಹೆಚ್ಚು ಹೆಚ್ಚು ಆರೋಗ್ಯ ತಪಾಸಣೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪೊಲೀಸರು ತಮ್ಮ ಕುಟುಂಬದ ಸದಸ್ಯರು ಯೋಗ, ಧ್ಯಾನದ ಕಡೆ ಗಮನ ಕೊಡಬೇಕೆಂದರು.

ಇದೇ ವೇಳೆ ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಎಎಸ್ಪಿ ಮಂಜುನಾಥ್, ನಿವೃತ್ತ ಕಮಾಂಡೆಂಟ್ ಕೃಷ್ಣಪ್ಪ, ಲೋಕಾಯುಕ್ತ ಎಸ್ಪಿ ಎಂ.ಎನ್.ಕೌಲಾಪುರೆ, ಪೊಲೀಸ್ ಅಧಿಕಾರಿಗಳಾದ ಮಾಲತೇಶ್, ಬಸವರಾಜ್, ನಿವೃತ್ತ ಅಧಿಕಾರಿಗಳಾದ ಲಿಂಗಾರೆಡ್ಡಿ, ರವಿನಾರಾಯಣ್, ಬಿ.ಬಿ. ಸಕ್ರಿ, ನಾರಾಯಣ ರಜಪೂತ್, ಪ್ರಹ್ಲಾದ್, ಗುರುದತ್ ಮತ್ತಿತರರು ಭಾಗವಹಿಸಿದ್ದರು.

error: Content is protected !!