5 ಕೋಟಿ ರೂ. ನಿವ್ವಳ ಲಾಭದಲ್ಲಿ ಕನ್ನಿಕಾಪರಮೇಶ್ವರಿ ಬ್ಯಾಂಕ್

5 ಕೋಟಿ ರೂ. ನಿವ್ವಳ ಲಾಭದಲ್ಲಿ  ಕನ್ನಿಕಾಪರಮೇಶ್ವರಿ ಬ್ಯಾಂಕ್

ಬ್ಯಾಂಕಿನ ಅಧ್ಯಕ್ಷ ಆರ್.ಜಿ. ಶ್ರೀನಿವಾಸಮೂರ್ತಿ ಹರ್ಷ

ದಾವಣಗೆರೆ, ಏ.2-  ನಗರದ ಶ್ರೀ ಕನ್ನಿಕಾಪರಮೇಶ್ವರಿ ಕೋ ಆಪರೇಟಿವ್ ಬ್ಯಾಂಕ್ 2024-25ನೇ ಸಾಲಿನಲ್ಲಿ  5 ಕೋಟಿ 57 ಸಾವಿರ ನಿವ್ವಳ ಲಾಭ  ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ  ಆರ್.ಜಿ.ಶ್ರೀನಿವಾಸಮೂರ್ತಿ ಮತ್ತು ಉಪಾಧ್ಯಕ್ಷ ಎ.ಎಸ್.ಸತ್ಯನಾರಾಯಣ ಸ್ವಾಮಿ ತಿಳಿಸಿದ್ದಾರೆ. ಬ್ಯಾಂಕಿನ ಸಭಾಂಗಣದಲ್ಲಿ ನಿನ್ನೆ ನಡೆದ ಬ್ಯಾಂಕಿನ ಆಡಳಿತ ಮಂಡಳಿಯ ಸಭೆಯಲ್ಲಿ ಅವರು ಮಾತನಾಡಿದರು.

ಒಟ್ಟು ವ್ಯವಹಾರ ಲಾಭ  ರೂ. 7 ಕೋಟಿ 81 ಲಕ್ಷ 22 ಸಾವಿರಗಳಲ್ಲಿ,  ಸಹಕಾರ ಸಂಘಗಳ ಕಾಯ್ದೆ ಮತ್ತು ನಿಯಮಗಳ ಅಡಿಯಲ್ಲಿ ರೂ.83 ಲಕ್ಷ 85 ಸಾವಿರಗಳನ್ನು ಹಾಗೂ ಭಾರತೀಯ ರಿಸರ್ವ್ ಬ್ಯಾಂಕಿನ ಸಾಮಾನ್ಯ ನಿರ್ದೇಶನದನ್ವಯ ಶಾಸನಬದ್ಧ ಪ್ರವದಾನ ರೂ.52 ಲಕ್ಷ ಮತ್ತು   ರೂ.1 ಕೋಟಿ 45 ಲಕ್ಷಗಳ ಆದಾಯ ತೆರಿಗೆಯನ್ನು ಪಾವತಿ ಮಾಡಿದ ನಂತರ ದಿನಾಂಕ 31.03.2025ರ ಅಂತ್ಯಕ್ಕೆ ನಿವ್ವಳ ಲಾಭ ರೂ 5 ಕೋಟಿ 57 ಸಾವಿರಗಳನ್ನು ಗಳಿಸಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಬ್ಯಾಂಕು ನಿವ್ವಳ ಲಾಭದಲ್ಲಿ ಶೇ.20ರಷ್ಟು ಪ್ರಗತಿಯನ್ನು ಸಾಧಿಸುವುದರ ಜೊತೆಗೆ ಒಟ್ಟು ರೂ.168 ಕೋಟಿ 28 ಲಕ್ಷಗಳ ಠೇವಣಿಯನ್ನು ಹೊಂದುವ ಮೂಲಕ ಸದಸ್ಯರಿಗೆ ರೂ. 138 ಕೋಟಿ ಸಾಲ-ಮುಂಗಡಗಳನ್ನು ನೀಡಿ ಬ್ಯಾಂಕಿನ ಸ್ವಂತ ನಿಧಿಗಳನ್ನು ರೂ.30 ಕೋಟಿಗಳಿಗೆ ಹೆಚ್ಚಿಸಿಕೊಂಡು ವಾರ್ಷಿಕ ಅಂತ್ಯಕ್ಕೆ ನಿವ್ವಳ ಎನ್.ಪಿ.ಎ. ಪ್ರಮಾಣವನ್ನು ‘ಶೂನ್ಯ’ಕ್ಕೆ ಕಾಯ್ದುಕೊಳ್ಳುವ ಮೂಲಕ ಬ್ಯಾಂಕು ಸತತವಾಗಿ 4 ಹಣಕಾಸು ವರ್ಷಗಳಿಂದಲೂ ‘ಶೂನ್ಯ’ ಎನ್.ಪಿ.ಎ. ಪ್ರಮಾಣವನ್ನು ಕಾಯ್ದುಕೊಳ್ಳಲಾಗಿದೆ. 

ಬ್ಯಾಂಕಿನ ಸಿ.ಆರ್.ಎ.ಆರ್  ಪ್ರಮಾಣ ಶೇ.22.47ರಷ್ಟು ಕಾಯ್ದುಕೊಳ್ಳಲು ಸಲಹೆ ಸಹಕಾರ ನೀಡಿದ ಆಡಳಿತ ಮಂಡಳಿ ಸದಸ್ಯರುಗಳಿಗೆ, ಸಾಲ ವಸೂಲಾತಿ ಪ್ರಗತಿಯಲ್ಲಿ ಸಹಕರಿಸಿದ ಷೇರುದಾರ ಬಾಂಧವರಿಗೂ, ಗ್ರಾಹಕರುಗಳಿಗೂ ಮತ್ತು ಸಿಬ್ಬಂದಿ ವರ್ಗದವರಿಗೂ ಧನ್ಯವಾದಗಳನ್ನು ತಿಳಿಸಿದರು.

ಮೇ 7 ರಂದು   ಆಚರಿಸುವ  ವಾಸವಿ ಜಯಂತಿ ಸವಿನೆನಪಿಗೆ, ಠೇವಣಿ ಸಂಗ್ರಹಣಾ ಯೋಜನೆಯ ಅಡಿ ಆಕರ್ಷಕ ಬಡ್ಡಿ ದರದಲ್ಲಿ ವಿಶೇಷ  ‘ಕನ್ನಿಕಾ ಧನ್ವಂತರಿ’ ಎಂಬ ಠೇವಣಿಯನ್ನು ಸ್ವೀಕರಿಸಲಾಗುತ್ತದೆ.  ಸದಸ್ಯರು ಮತ್ತು ಠೇವಣಿದಾರರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

2025-26ನೇ ಹಣಕಾಸು ವರ್ಷದಲ್ಲಿ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳಾದ ‘ಮೊಬೈಲ್ ಬ್ಯಾಂಕಿಂಗ್’ ಮತ್ತು ‘ಯು.ಪಿ.ಐ’ ಸೇವೆಗಳನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿಯೇ ಗ್ರಾಹಕರಿಗೆ ಸಮರ್ಪಿಸಲು ಕಾರ್ಯೋನ್ಮುಖವಾಗಿರುತ್ತೇವೆ. ಬ್ಯಾಂಕಿಂಗ್ ಸೇವೆಯನ್ನು ಕರ್ನಾಟಕ ರಾಜ್ಯಾದ್ಯಂತ ವಿಸ್ತರಿಸಿಕೊಂಡು ತಾಲ್ಲೂಕು ಕೇಂದ್ರಗಳಲ್ಲಿ ಶಾಖೆಗಳನ್ನು ತೆರೆಯುವ ಉದ್ದೇಶವನ್ನು ಹೊಂದಿರುತ್ತೇವೆ ಎಂದು ತಿಳಿಸಿದರು.

ನಿರ್ದೇಶಕರುಗಳಾದ  ಆರ್.ಎಲ್. ಪ್ರಭಾಕರ್, ಕಾಸಲ್ ಎಸ್. ಸತೀಶ್,   ಕೆ.ಎನ್. ಅನಂತರಾಮ ಶೆಟ್ಟಿ,  ಬಿ.ಪಿ.ನಾಗಭೂಷಣ್,  ಕೆ.ವಿ.ಮಂಜುನಾಥ್,  ಎನ್.ಕಾಶೀನಾಥ್, ಜೆ.ರವೀಂದ್ರ ಗುಪ್ತಾ,  ಬಿ.ಎಸ್.ಶಿವಾನಂದ್  ವೈ.ಬಿ.ಸತೀಶ್,   ಆರ್.ಬಿ.ಗೀತಾ,  ಸುಧಾ ನಾಗರಾಜ್,  ಶ್ರೀಧರ್ ಜಿ.,  ಹನುಮಂತ ಶೆಟ್ಟಿ ಕೆ.ಬಿ., ಪ್ರಧಾನ ವ್ಯವಸ್ಥಾಪಕ  ಪಡಗಲ್ ಪ್ರಶಾಂತ್ ಸಭೆಯಲ್ಲಿ ಉಪಸ್ಥಿತರಿದ್ದರು. 

error: Content is protected !!