ಆತ್ಮ ಎಂದು ಅರಿತು ಸಮಭಾವನೆಯಿಂದ ವ್ಯವಹರಿಸಿದ್ದಲ್ಲಿ ಸದ್ಭಾವನೆ

ಆತ್ಮ ಎಂದು ಅರಿತು ಸಮಭಾವನೆಯಿಂದ ವ್ಯವಹರಿಸಿದ್ದಲ್ಲಿ ಸದ್ಭಾವನೆ

`ಅಧ್ಯಾತ್ಮದಿಂದಲೇ ಮಹಿಳಾ ಸಬಲೀಕರಣ’ ಕುರಿತ ಕಾರ್ಯಕ್ರಮದಲ್ಲಿ ಬ್ರಹ್ಮಾಕುಮಾರಿ ಸುಮನ

ದಾವಣಗೆರೆ, ಮಾ.23- ಮಹಿಳೆ ಮತ್ತು ಪುರುಷ ಎಂಬುದು ಕೇವಲ ದೈಹಿಕ ಆಕಾರವಾಗಿದೆ. ಆದರೆ, ನೈಜವಾಗಿ ಎಲ್ಲರೂ ಶ್ರೇಷ್ಠ ಹಾಗೂ ಶಕ್ತಿಶಾಲಿ ಆತ್ಮಗಳಾಗಿದ್ದೇವೆ ಎಂದು ಬ್ರಹ್ಮಾಕುಮಾರೀಸ್ ಸಂಸ್ಥೆಯ ಶಿಕ್ಷಣ ವಿಭಾಗದ ರಾಷ್ಟ್ರೀಯ ಸಂಯೋಜಕರೂ, ಹಿರಿಯ ರಾಜಯೋಗ ಶಿಕ್ಷಕರೂ ಆಗಿರುವ ಅಬು ಪರ್ವತದ ರಾಜಯೋಗಿನಿ ಬ್ರಹ್ಮಾಕುಮಾರಿ ಸುಮನ  ಅವರು ತಿಳಿಸಿದರು.

ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಇಲ್ಲಿನ ಶಿವಧ್ಯಾನ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ `ಅಧ್ಯಾತ್ಮದಿಂದಲೇ ಮಹಿಳಾ ಸಬಲೀಕರಣ’  ವಿಷಯ ಕುರಿತ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜಕ್ಕೆ ಪುರುಷ ಹಾಗೂ ಮಹಿಳೆ ಇವರಿಬ್ಬರ ಪಾತ್ರ ಬಹುಮುಖ್ಯ. ಹಾಗಾಗಿ ಎಲ್ಲರೂ ನಾನು ಆತ್ಮ ಎಂದು ಅರಿತು ಕಾರ್ಯ ವ್ಯವಹಾರ ಮಾಡಬೇಕು ಮತ್ತು ಸಮ ಭಾವನೆಯಿಂದ ಇರಬೇಕು. ಆಗ ವ್ಯವಹಾರಗಳಲ್ಲಿ ಸದ್ಭಾವನೆ ಬರಲಿದೆ ಎಂದು ಪ್ರತಿಪಾದಿಸಿದರು.

ಸತ್ಯಯುಗದಲ್ಲಿ ಲಕ್ಷ್ಮಿ – ನಾರಾಯಣರ ರಾಜ್ಯವಿತ್ತು. ಅಲ್ಲಿ ನರ ಮತ್ತು ನಾರಿ ಸಮಾನ ಅಧಿಕಾರ ಮಾಡುತ್ತಿದ್ದರು. ಇಂತಹ ಯುಗದ ಸ್ವರ್ಗವನ್ನು ಈ ಪ್ರಪಂಚದಲ್ಲಿ ತರುವ ಅವಶ್ಯಕತೆ ಯಿದೆ. ಆದ್ದರಿಂದ ಈ ಯುಗದ ಸ್ಥಾಪನೆಗಾಗಿ ನಮ್ಮನ್ನು ನಾವು ಪರಿವರ್ತಿಸಿಕೊಳ್ಳಬೇಕು. ಈ ಪರಿವರ್ತನೆಯಲ್ಲಿ ನರ ಮತ್ತು ನಾರಿ ಸಮಾನ ಗುಣವಂತರಾಗಬೇಕು ಎಂದು ಹೇಳಿದರು.

ಸಮಾಜದಲ್ಲಿ ಪುರುಷ ಮತ್ತು ಸ್ತ್ರೀ ಇಬ್ಬರಿಗೂ ಸಶಕ್ತೀಕರಣ ಹಾಗೂ ಸಬಲೀಕರಣದ ಅವಶ್ಯಕತೆ ಇದೆ. ಆದರೆ, ಮಹಿಳೆಯನ್ನು ಸಮಾಜದಲ್ಲಿ ಹೆಚ್ಚಾಗಿ ಕಡೆಗಣಿಸಿದ್ದಕ್ಕೆ ಅವರ ಸಬಲೀಕರಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಿದೆ. ಈ ದೃಷ್ಟಿಯಿಂದಲೇ 1936ರಲ್ಲಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸ್ಥಾಪನೆ ಯಾಯಿತು ಎಂದು ಸುಮನ ತಿಳಿಸಿದರು.

ಪ್ರತಿ ಮಹಿಳೆಯರಲ್ಲೂ ಆಡಳಿತದ ಕ್ಷಮತೆ ಇದೆ. ಇದನ್ನರಿತ ಬ್ರಹ್ಮಾಕುಮಾರಿ ಸಂಸ್ಥೆಯು ಮಹಿಳೆಯರಿಗೆ ಮುಖ್ಯ ಆಡಳಿತದ ಹುದ್ದೆ ಕೊಟ್ಟಿದೆ. ಅಂದು ಪ್ರಾರಂಭವಾದ ಈ ಪುಟ್ಟ ಸಂಸ್ಥೆ, ಇಂದು ವಿಶ್ವದೆಲ್ಲೆಡೆ ಬೃಹತ್‌ ಮಟ್ಟದಲ್ಲಿ ಬೆಳೆದಿದೆ. ಇದಕ್ಕೆ ಮಹಿಳಾ ಶಕ್ತಿಯೇ ಸಾಕ್ಷಿ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಜೀವನದಲ್ಲಿ ಅಧ್ಯಾತ್ಮಿಕ ರೂಢಿಸಿಕೊಂಡರೆ ಮಾತ್ರ ಮನುಷ್ಯನ ಸಶಕ್ತೀಕರಣ ಆಗಲಿದೆ. ಆದರೆ, ಎಲ್ಲಿಯ ತನಕ ಮನುಷ್ಯ  ಸ್ವಾಭಿಮಾನ ಜಾಗೃತಿ ಆಗುವುದಿಲ್ಲವೊ ಅಲ್ಲಿಯತನಕ ಸಶಕ್ತೀರಣ ಅಸಾಧ್ಯ ಎಂದು ತಿಳಿಸಿದರು.

ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದ `ಪ್ರಜಾವಾಣಿ’ ಪ್ರಧಾನ ಕಚೇರಿಯ ಮುಖ್ಯ ಉಪ ಸಂಪಾದಕರಾದ ಶ್ರೀಮತಿ ಎಸ್‌. ರಶ್ಮಿ ಮಾತನಾಡಿ, ಮಹಿಳೆಯರು ಅಘೋಚರ ಬಂಧನದಲ್ಲಿದ್ದಾರೆ. ಇದರಿಂದ ನಿರಾಳರಾಗಬೇಕು ಮತ್ತು ಬದುಕಿನ ಉದ್ದೇಶ ಮತ್ತು ಸ್ವರೂಪವನ್ನು ಅರಿತುಕೊಳ್ಳುವ ಜತೆಗೆ ನಮ್ಮ ಇರುವಿಕೆ ಅರ್ಥ ಮಾಡಿಕೊಂಡು ಬದುಕಬೇಕೆಂದು ನುಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶರೂ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿಗಳಾದ  ಶ್ರೀಮತಿ ಟಿ.ಎಂ. ನಿವೇದಿತ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಹಿಳೆ ತನ್ನ ಕುಟುಂಬ ಹಾಗೂ ಪ್ರೀತಿ ಪಾತ್ರರೊಂದಿಗೆ ಅನುಸರಿಕೊಂಡು ಹೋಗುವ ಗುಣ ಕಲಿಯಬೇಕು ಮತ್ತು ಸಕಾರಾತ್ಮಕ ಮನೋಭಾವದಿಂದ ಸಮಾಜದಲ್ಲಿ ಬದುಕಬೇಕು ಎಂದು ಸಲಹೆ ನೀಡಿದರು.

ಮತ್ತೋರ್ವ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ನಾಡಿನ ಹಿರಿಯ ವೀಣಾ ವಾದಕರೂ, ಪರಿಸರ ವಾದಿಗಳೂ ಆದ ವಿದುಷಿ ರೇವತಿ ಕಾಮತ್ ಮಾತನಾಡಿ, ಮಹಿಳೆ, ಪುರುಷನೊಂದಿಗೆ ಸ್ಪರ್ಧೆ ಗಿಳಿದು ಅಹಂಕಾರ ಬೆಳೆಸಿಕೊಳ್ಳಬಾರದು. ಎಲ್ಲಾ ಸ್ತ್ರೀಯರು ತಮ್ಮ ಮಕ್ಕಳನ್ನು ಮುಂದೆ ತರುವ ಧ್ಯೇಯ ಹೊಂದಿರಬೇಕು ಮತ್ತು ಪುರುಷ ಪುರುಷ ನಾಗಿ, ಮಹಿಳೆ ಮಹಿಳೆಯಾಗಿ ಸಂಸ್ಕಾರದಿಂದ ಸಮಾಜದಲ್ಲಿ ಬಾಳಬೇಕು ಎಂದು ಹಿತ ನುಡಿದರು.

ಕಿವಿ – ಮೂಗು – ಗಂಟಲು ತಜ್ಞ ವೈದ್ಯರೂ, ಶಸ್ತ್ರಚಿಕಿತ್ಸಕರೂ ಆದ ಡಾ. ಎಂ. ಗಾಯತ್ರಿ, ಚಿರಂತನ ಸಾಂಸ್ಕೃತಿಕ ಸಂಸ್ಥೆ ಸಂಸ್ಥಾಪಕರೂ ಶ್ರೀಮತಿ ದೀಪಾ ರಾವ್ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  ಈಶ್ವರೀಯ ವಿಶ್ವವಿದ್ಯಾಲಯದ ಸ್ಥಳೀಯ ಶಾಖೆ ಪ್ರಧಾನ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಮಕ್ಕಳ ತಜ್ಞರಾದ ಡಾ. ಸ್ನೇಹರೂಪ ಪೂಜಾರ್ ಕಾರ್ಯಕ್ರಮ ನಿರ್ವಹಿಸಿದರು. ರಾಜಯೋಗ ಶಿಕ್ಷಕಿ ಬ್ರಹ್ಮಾಕುಮಾರಿ ಶಾಂತ ವಂದಿಸಿದರು.

error: Content is protected !!