ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆ ಸಫಲ
ನ್ಯಾಮತಿ ತಾ.ದಾನಿಹಳ್ಳಿಗೆ ವಿಶ್ವ ಬ್ಯಾಂಕ್ ಟಾಸ್ಕ್ ಪೋರ್ಸ್ ತಂಡ ಭೇಟಿ: ಪರಿಶೀಲನೆ
ದಾವಣಗೆರೆ, ಮಾ. 27 – ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಯೋಜನೆ ರೂಪಿಸಿದ 24×7 ಮಾದರಿ ಸ್ವಾವಲಂಬನೆಯತ್ತ ಗ್ರಾಮಗಳು ಮುನ್ನಡೆಯುವ ಆಯಾಮ ಎಂದು ವಿಶ್ವಬ್ಯಾಂಕ್ ಟಾಸ್ಕ್ ಫೋರ್ಸ್ ತಂಡದ ಸದಸ್ಯರು ಹಾಗೂ ಪೀಡ್ ಬ್ಯಾಕ್ ಸಂಸ್ಥೆಯ ಕಾರ್ಯನಿರ್ವಹಣ ಅಧಿಕಾರಿ ಅಜಯ್ ಸಿಂಹ ತಿಳಿಸಿದರು.
ಅವರು ನ್ಯಾಮತಿ ತಾಲ್ಲೂಕಿನ ಗಂಗನಕೋಟೆ ಗ್ರಾಮ ಪಂಚಾಯಿತಿ ದಾನಿಹಳ್ಳಿಗೆ ಜಲಜೀವನ್ ಮಿಷನ್ ಯೋಜನೆ 24×7 ಕುಡಿಯುವ ನೀರಿನ ಯೋಜನೆಯ ಕಾರ್ಯ ಚಟುವಟಿಕೆ ವೀಕ್ಷಣೆ ಮಾಡಿ ಮಾತನಾಡಿದರು.
ಜಲಜೀವನ್ ಮಿಷನ್ ಯೋಜನೆಯಡಿ ‘ಹರ್ ಘರ್ ಜಲ್’ ಘೋಷವಾಕ್ಯದಡಿ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಶುದ್ಧ ಕುಡಿಯುವ ನೀರನ್ನು ನಾವು ಪ್ರತಿ ಲೀಟರ್‌ಗೆ ರೂ.20 ಕೊಟ್ಟು ಖರೀದಿಸಿ ಕುಡಿಯುತ್ತೇವೆ. ಆದರೆ ಜೆಜೆಎಂ ಯೋಜನೆಯಡಿ ಶುದ್ಧ ಕುಡಿಯುವ ನೀರನ್ನು ಪ್ರತಿ ಲೀಟರ್‌ಗೆ 1 ಪೈಸೆಯಂತೆ ಪೂರೈಕೆ ಮಾಡಲಾಗುತ್ತಿದೆ. ಗ್ರಾಮಕ್ಕೆ ಬರುವ ಹೊಸ ಅತಿಥಿಗಳಿಗೆ ಹೊರಗಿನ ನೀರನ್ನು ಹಣ ಕೊಟ್ಟು ಖರೀದಿಸಿ ನೀಡುವ ಬದಲಿಗೆ ನಿಮ್ಮ ಮನೆಯಲ್ಲಿನ ಶುದ್ಧ ನೀರನ್ನು ಸ್ಟೀಲ್ ಕಪ್‌ಗಳಲ್ಲಿ ಕೊಡುವಂತಾಗುವುದೇ ಗ್ರಾಮಗಳ ಸ್ವಾವಲಂಬಿ ಯೋಜನೆಯಾಗಿದೆ ಎಂದರು.
ಮತ್ತೋರ್ವ ವಿಶ್ವಬ್ಯಾಂಕ್ ಟಾಸ್ಕ್ ಫೋರ್ಸ್ ಪ್ರತಿನಿಧಿ ಮರಿಯಪ್ಪ ಕುಳ್ಳಪ್ಪ ಮಾತನಾಡಿ, ವಿದೇಶಗಳಲ್ಲಿ ಇಲ್ಲಿನಂತೆ ನೀರನ್ನು ಬಾಟಲಿಯಲ್ಲಿ ಇಟ್ಟಿರುವುದಿಲ್ಲ. ನಿರಂತರವಾಗಿ ನೀರು ಕುಡಿಯಲು ಟ್ಯಾಪ್‌ಗಳನ್ನು ಅಳವಡಿಸಲಾಗಿರುತ್ತದೆ. ನಮ್ಮ ಗ್ರಾಮಗಳು ಅದೇ ರೀತಿ ಮುಂದುವರೆದು ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯತೆಯನ್ನು ಕಾಪಾಡಿ ಕೊಳ್ಳಬೇಕು. ಶುದ್ಧ ನೀರಿನ ಬಳಕೆ ಜೊತೆಗೆ ನೀರಿನ ಮಿತ ಬಳಕೆಯು ಬಹಳ ಪ್ರಮುಖವಾಗಿರುತ್ತದೆ. ಜಿಲ್ಲೆಯ 10 ಗ್ರಾಮಗಳಲ್ಲಿ 24×7 ಮಾದರಿಯಲ್ಲಿ ನೀರು ಪೂರೈಕೆಗೆ ಯೋಜನೆ ರೂಪಿಸಲಾಗಿದ್ದು, ಮುಂದಿನ 6 ತಿಂಗಳಲ್ಲಿ 100 ಗ್ರಾಮಗಳಲ್ಲಿ ನಿರಂತರ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಮಾತನಾಡಿ, ಜಲಜೀವನ್ ಮಿಷನ್ ಯೋಜನೆಯಡಿ 881 ಕಾಮಗಾರಿಗಳನ್ನು ತೆಗೆದುಕೊಂಡಿದ್ದು, ಇದರಲ್ಲಿ ಇತರೆ ಕಾರಣದಿಂದ ಕೆಲವು ಕಾಮಗಾರಿಗಳನ್ನು ಕೈಬಿಡಲಾಗಿದೆ. 630 ಕಾಮಗಾರಿಗಳಲ್ಲಿ 400 ಕಾಮಗಾರಿಗಳು ಬಹಳ ಉತ್ತಮವಾಗಿವೆ. ಅನುಷ್ಠಾನದಲ್ಲಿನ ಕೆಲವು ಲೋಪದೋಷಗಳನ್ನು ಸರಿಪಡಿಸಿ ಸಮರ್ಪಕವಾಗಿ ಯೋಜನೆ ಅನುಷ್ಠಾನ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಗ್ರಾಮ ನೀರು, ನೈರ್ಮಲ್ಯ ಸಮಿತಿ ಸಭೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಕರೆಯಬೇಕೆಂದು ಮಾರ್ಗಸೂಚಿ ಸಿದ್ಧಪಡಿಸಿ ಇದಕ್ಕಾಗಿ ಪ್ರತ್ಯೇಕ ಖಾತೆಯನ್ನು ತೆರೆಯುವ ಮೂಲಕ ಸಮಿತಿಯಿಂದ ಕಾಲಕಾಲಕ್ಕೆ ಗ್ರಾಮದಲ್ಲಿ ಕುಡಿಯುವ ನೀರು ಪರೀಕ್ಷೆ ಮಾಡಿಸುವುದು ಸೇರಿದಂತೆ ಎಲ್ಲಾ ನಿರ್ವಹಣೆಯನ್ನು ಮಾಡಲು ಅವಕಾಶ ಕಲ್ಪಿಸಿ ನೀರಿನ ಶುಲ್ಕವನ್ನು ಪಡೆದುಕೊಳ್ಳಲು ಆನ್‌ಲೈನ್ ಬಿಲ್ಲಿಂಗ್ ಹಾಗೂ ಪಾವತಿಗೂ ವ್ಯವಸ್ಥೆ ಮಾಡಲಾಗುತ್ತದೆ.
ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುತ್ತಿರುವುದರಿಂದ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳ ಸಂಖ್ಯೆ ಇಳಿಮುಖವಾಗಿದೆ. ಜಲಜೀವನ್ ಮಿಷನ್ ಯೋಜನೆಯಿಂದ ಜನರ ಆರೋಗ್ಯದ ಸಮಸ್ಯೆಗಳು ಸುಧಾರಣೆಯಾಗಿವೆ ಎಂದರು.
ದಾನಿಹಳ್ಳಿಯಲ್ಲಿ 337 ಮನೆಗಳಿಗೆ ನಲ್ಲಿ ಅಳವಡಿಸಲಾಗಿದೆ. 3 ನೇ ಹಂತದ ಜೆಜೆಎಂ ಯೋಜನೆಯಲ್ಲಿ ರೂ.95 ಲಕ್ಷದಲ್ಲಿ ಪ್ರತಿ ಮನೆಗೂ 24×7 ಮಾದರಿಯಲ್ಲಿ ನೀರು ಪೂರೈಸಲಾಗುತ್ತಿದೆ.
ಈ ವೇಳೆ ಗ್ರಾಮೀಣ ನೀರು ಪೂರೈಕೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸೋಮ್ಲಾನಾಯ್ಕ, ಕಾರ್ಯನಿರ್ವಾಹಕ ಅಧಿಕಾರಿ ರಾಘವೇಂದ್ರ, ಪ್ರಕಾಶ್ ಇತರರು ಉಪಸ್ಥಿತರಿದ್ದರು.