ಆರ್.ಎಲ್.ಕಾನೂನು ಕಾಲೇಜಿನ ವಿಶ್ವ ಗ್ರಾಹಕರ ಹಕ್ಕು ದಿನಾಚರಣೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವೇಲಾ ದಾಮೋದರ್ ಖೋಡೆ
ದಾವಣಗೆರೆ, ಮಾ. 21 – ಪ್ರಸ್ತುತ ವಸ್ತುಗಳನ್ನು ಖರೀದಿಸಿ, ಉಪಯೋಗಿಸುವುದರ ಬಗ್ಗೆ ಗ್ರಾಹಕರಿಗೆ ಶಿಕ್ಷಣದ ಅಗತ್ಯವಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವೇಲಾ ದಾಮೋದರ್ ಖೋಡೆ ಅಭಿಪ್ರಾಯಪಟ್ಟರು.
ನಗರದ ಆರ್.ಎಲ್.ಕಾನೂನು ಕಾಲೇಜಿನಲ್ಲಿ ಇಂದು ಹಮ್ಮಿಕೊಂಡಿದ್ದ ವಿಶ್ವ ಗ್ರಾಹಕರ ಹಕ್ಕು ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಒಂದು ವಸ್ತುವನ್ನು ಖರೀದಿಸಿದರೆ ಅದರಿಂ ದಾಗುವ ದುಷ್ಪರಿಣಾಮಗಳ ಬಗ್ಗೆಯೂ ನಾವು ತಿಳಿದುಕೊಳ್ಳುವ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಗ್ರಾಹಕರಾಗಿ ಯಾವುದನ್ನು ಖರೀದಿಸಬೇಕು, ಯಾವುದನ್ನು ಖರೀದಿಸಬಾರದು ಎಂದು ತಿಳಿದುಕೊಳ್ಳುವುದರಿಂದ ಸಮಾಜವು ಕೂಡ ಅಭಿವೃದ್ಧಿಗೊಳ್ಳಲಿದೆ. ನಾವು ಆಯ್ಕೆ ಮಾಡುವುದು ಒಂದು ಕಲೆಯಾಗಿದ್ದು, ವಸ್ತುಗಳನ್ನು ಖರೀದಿಸುವ ಮುನ್ನ ಎಲ್ಲ ಮಾಹಿತಿಯನ್ನು ಪಡೆದುಕೊಂಡು ಅದನ್ನು ಉಪಯುಕ್ತವಾಗಿ ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನೋಡುವುದಾದರೆ ಇಂದಿನ ಕಾಲದಲ್ಲಿ ವಸ್ತುಗಳನ್ನು ಖರೀದಿಸಲು, ಉಪಯೋಗಿಸಲು ಗ್ರಾಹಕರಿಗೆ ಶಿಕ್ಷಣ ಅಗತ್ಯವಿದೆ ಎಂದರು.
ಇಂದಿನ ಕಾಲದಲ್ಲಿ ವಸ್ತುಗಳನ್ನು ಖರೀದಿಸಲು ಹಲವಾರು ಆಯ್ಕೆಗಳು ನಮ್ಮ ಮುಂದಿವೆ. ಶಾಪಿಂಗ್ ಎಲ್ಲರಿಗೂ ಇಷ್ಟ. ಆನ್‌ಲೈನ್ ಶಾಪಿಂಗ್ ಮಾಡುವಾಗ ಗುಣಮಟ್ಟ ಮತ್ತು ಪ್ರಮಾಣವನ್ನು ತಿಳಿದುಕೊಳ್ಳಬೇಕು. ವಸ್ತುಗಳನ್ನು ಖರೀದಿಸಿ ದರೆ ಸಾಕು ಎನ್ನುವ ಗುರಿಯನ್ನು ಹೊಂದಿರದೆ, ಗುಣಮಟ್ಟ ಮತ್ತು ಪ್ರಮಾಣವನ್ನು ಪರಿಶೀಲಿಸಬೇಕು ಎಂದರು.
ಗ್ರಾಹಕರು ವಸ್ತುಗಳನ್ನು ಖರೀದಿಸುವ ವಿಚಾರದಲ್ಲಿ ಆಕರ್ಷಣೆಗೆ ಒಳಗಾಗುವ ಜೀವನ ಶೈಲಿಯನ್ನು ಬೆಳೆಸಿಕೊಳ್ಳಬಾರದು. ಯಾವುದೇ ಒಂದು ವಸ್ತುಗಳನ್ನು ಖರೀದಿಸುವಾಗ ಅದರ ಮುಕ್ತಾಯದ ದಿನಾಂಕವನ್ನು ನೋಡುವ ತಾಳ್ಮೆಯನ್ನು ನಾವು ಕಳೆದುಕೊಂಡಿದ್ದೇವೆ. ವಸ್ತುಗಳನ್ನು ಖರೀದಿ ಮಾಡಿದರೆ ಸಾಕು ಎನ್ನುವ ಪ್ರಮೇಯವನ್ನು ಬೆಳೆಸಿಕೊಂಡಿದ್ದೇವೆ. ಕೇವಲ ರುಚಿ ಮತ್ತು ಫ್ಯಾಷನ್ ನೋಡಿ ವಸ್ತುಗಳನ್ನು ಖರೀದಿಸುವ ಜೀವನ ಶೈಲಿಯಿಂದ ಹೊರಬರಬೇಕು ಎಂದರು.
ವಸ್ತುಗಳು ಖರೀದಿಸಿ ನಂತರ ಅದರಿಂದ ಸಮಸ್ಯೆಯಾದರೆ ಕೇಳುವ ಹಕ್ಕು ಗ್ರಾಹಕರಿಗೆ ಇರುತ್ತದೆ. ಗ್ರಾಹಕರಾಗಿ ಜವಾಬ್ದಾರಿಯನ್ನು ಹೊಂದಿರಬೇಕು. ಯಾರೋ ಏನೋ ಖರೀದಿಸಿದರು ಎಂದು ನಾವೂ ಕೂಡ ಅದನ್ನೇ ಖರೀದಿ ಮಾಡಬಾರದು. ನಮ್ಮ ಆರೋಗ್ಯಕ್ಕೆ ಪೂರಕವಾದ ವಸ್ತುಗಳನ್ನು ಖರೀದಿಸಬೇಕು. ಆರೋಗ್ಯಕರ ಪರಿಸರ ನಿರ್ಮಾಣ ಮಾಡುವುದು ಗ್ರಾಹಕರ ಜವಾಬ್ದಾರಿ ಕೂಡ ಆಗಿದ್ದು, ಇಂದು ನಾವು ಖರೀದಿಸಿದ್ದು, ನಮ್ಮ ಮುಂದಿನ ಪೀಳಿಗೆ ಮೇಲೆ ಪರಿಣಾಮ ಬೀರಲಿದೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದರು.
`ಮನೆಯಲ್ಲಿಯೇ ತಾಯಿ ರುಚಿಕರವಾದ ಆಹಾರ ಪದಾರ್ಥ ತಯಾರಿಸಿಕೊಟ್ಟರೂ ಅದನ್ನು ಸೇವಿಸದೇ ಹೋಟೆಲ್‌ಗಳಿಗೆ ಹೋಗಿ ತಿನ್ನುವ ಮನಸ್ಥಿತಿ ಹಲವರಲ್ಲಿದೆ. ಈ ಕಾರಣಕ್ಕಾಗಿಯೇ ಇಂದು ಬಹುತೇಕರು ಕ್ಯಾನ್ಸರ್ ಸೇರಿ ನಾನಾ ಮಾರಕ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಇದು ಒಳ್ಳೆಯ ಜೀವನ ಶೈಲಿಯಲ್ಲ’. ಊಟ, ಶಿಕ್ಷಣ, ಆರೋಗ್ಯ ಸೇರಿ ಇತರೆ ಮೂಲಭೂತ ಅವಶ್ಯಕತೆ ಕೈಗೆಟುಕುವ ದರದಲ್ಲಿ ದೊರೆಯುವಂತಾಗಬೇಕು ಎಂದರು.
ಟೆಕ್ನಾಲಜಿಗೆ ಅವಲಂಬಿತರಾಗಿ ಪ್ರತಿಯೊಂದು ವಿಚಾರವನ್ನು ಗೂಗಲ್‌ನಲ್ಲಿ ಓದಿದರೆ, ಓದಿರುವುದನ್ನು ಮತ್ತೆ ನೆನಪು ಮಾಡಿಕೊಳ್ಳಲು ಗೂಗಲ್ ನೋಡಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. ಆದ್ದರಿಂದ ಕಾನೂನು ವಿದ್ಯಾರ್ಥಿಗಳು ಗ್ರಂಥಾಲಯಗಳಿಗೆ ಭೇಟಿ ನೀಡಿ ಪುಸ್ತಕ ಓದುವ ಮೂಲಕ ಕಾನೂನು ಬಗ್ಗೆ ತಿಳಿದುಕೊಳ್ಳಬೇಕು. ಹಳ್ಳಿ ಜನರು ವಕೀಲರ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವಷ್ಟು ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಹಾಗಾಗಿ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ ಕೌಶಲ್ಯವನ್ನು ಕಾನೂನು ವಿದ್ಯಾರ್ಥಿಗಳು ಇಂದಿನಿಂದಲೇ ಬೆಳೆಸಿಕೊಳ್ಳಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ ಎಂ. ಕರೆಣ್ಣವರ್ ಮಾತನಾಡಿ, ವ್ಯಾಪಾರಿಗಳು ಕಡಿಮೆ ಬೆಲೆ ಸೇರಿ ದಂತೆ ಇತರೆ ಆಕರ್ಷಣೆಗಳಿಂದ ಗೊಂದಲಕ್ಕೀಡು ಮಾಡುವ ಜೊತೆಗೆ ಅಟ್ಟಕ್ಕೆ ಏರಿಸುತ್ತಾರೆ. ಆದರೆ ಗ್ರಾಹಕರು ಯಾವುದೇ ವಸ್ತುಗಳನ್ನು ಖರೀದಿಸುವ ಮುನ್ನ ಅದರ ಗುಣಮಟ್ಟ, ತೂಕವನ್ನು ಪರಿಶೀಲಿಸುವುದರ ಜೊತೆಗೆ ನಮ್ಮ ಆರೋಗ್ಯಕ್ಕೆ ಪೂರಕವಾಗಿರಬೇಕು. ಕಂಪನಿಗಳು ತಮ್ಮ ವಸ್ತುಗಳು ಮಾರಾಟವಾಗಲು ಅನೇಕ ರೀತಿಯ ಆಕರ್ಷಕ ಪ್ರಚಾರಗಳನ್ನು ಮಾಡುತ್ತಾರೆ. ಗ್ರಾಹಕರು ಅದರ ಬಗ್ಗೆ ಗಂಭೀರವಾಗಿ ಯೋಚಿಸಿ ಖರೀದಿಗೆ ಮುಂದಾಗಬೇಕು ಎಂದರು.
ಇಂದಿನ ಕಾಲದಲ್ಲಿ ರೇಟಿಂಗ್ ನೋಡಿ ಖರೀದಿಸುವವರೇ ಹೆಚ್ಚು. ರೇಟಿಂಗ್‌ನಲ್ಲೂ ಮೋಸ ನಡೆಯುತ್ತಿದ್ದು, ಗ್ರಾಹಕರು ಎಚ್ಚರಿಕೆಯಿಂದಿರಬೇಕು. ವಸ್ತುಗಳ ಮೇಲೆ ನಿಗದಿಪಡಿಸಿದ ದರಕ್ಕಿಂದಲೂ ಒಂದು ರೂಪಾಯಿ ಹೆಚ್ಚು ಕೇಳಿದರೂ ನಾವು ಪ್ರಶ್ನೆ ಮಾಡಬೇಕು. ಏನೇ ಸಬೂಬು ಹೇಳಿದರೂ ದರಕ್ಕಿಂತ ಹೆಚ್ಚು ಕೊಡಬಾರದು ಎಂದರು.
ವಿದ್ಯಾರ್ಥಿನಿ ಬಿಂದುಶ್ರೀ ಪ್ರಾರ್ಥನೆ ಮಾಡಿದರೆ, ಸಹಾಯಕ ಪ್ರಾಧ್ಯಾಪಕ ಪ್ರದೀಪ್ ಕೆ.ಎನ್ ಸ್ವಾಗತ ಮಾಡಿದರು. ನಿರೂಪಣೆಯನ್ನು ಸಹಾಯಕ ಪ್ರಾಧ್ಯಾಪಕರಾದ ತಸ್ವಿಯಾ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್.ಅರುಣ್ ಕುಮಾರ್, ಕಾಲೇಜಿನ ಪ್ರಾಂಶುಪಾಲ ಜಿ.ಎಸ್.ಯತೀಂದ್ರ, ಹಿರಿಯ ವಕೀಲ ಹೆಚ್.ವಿ.ರಾಮದಾಸ್ ಸೇರಿದಂತೆ ಇತರರು ಇದ್ದರು.